ಕನ್ನಡ ರಾಜ್ಯೋತ್ಸವದ ಆಚರಣೆ ಮತ್ತು ಮಹತ್ವ

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!

ಕರ್ನಾಟಕ ರಾಜ್ಯವು ಬಹು ವಿಶೇಷತೆಗಳಿಂದ ಕೂಡಿದ ವಿಶಿಷ್ಟ ರಾಜ್ಯವಾಗಿದೆ. ಹಾಗೆಯೇ ಕರ್ನಾಟಕ ಕ್ಕೆ, ಕನ್ನಡ ನಾಡಿಗೆ ಸುದೀರ್ಘವಾದ ಶ್ರೇಷ್ಠ ಇತಿಹಾಸವಿದೆ. ಕನ್ನಡವೆಂಬುದು ನಮ್ಮ ಹೆಮ್ಮೆಯ ಭಾಷೆಯ ಹೆಸರಾದರೆ, ಕರ್ನಾಟಕ ವೆಂಬುದು ನಾವು ವಾಸವಿರುವ ಪ್ರದೇಶದ ಪುಣ್ಯ ಭೂಮಿಯ ಹೆಸರಾಗಿದೆ‌. ಇಂಥ ಕನ್ನಡ ಭಾಷೆ ಮತ್ತು ಕರ್ನಾಟಕ ಬಗ್ಗೆ ಒಂದೆರಡು ಮಾತುಗಳನ್ನು ನಿಮ್ಮ ಮುಂದೆ ಹೇಳಬಯಸುತ್ತೇನೆ.

 

 

ಶಾತವಾಹನರು ಆದಿಯಾಗಿ ಕದಂಬರು, ಗಂಗರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಆಳುಪರು, ಕಳಚೂರಿಗಳು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ ಮೊದಲಾದ ರಾಜ್ಯ ಮನೆತನಗಳು ನಮ್ಮ ಹೆಮ್ಮೆಯ ಕನ್ನಡ ಭಾಷೆಯನ್ನು ಕಟ್ಟಿ, ಆಡಿ, ಬಳಸಿ, ಉಳಿಸಿ, ಬೆಳೆಸಿವೆ. ಕನ್ನಡ ಮೂಲತಃ ದ್ರಾವಿಡಭಾಷೆ ಯಾಗಿದ್ದು ಭಾರತದ ಪುರಾತನ ಪ್ರಮುಖ ಭಾಷೆಗಳಲ್ಲೊಂದಾಗಿದೆ.

 

 

 

ಕನ್ನಡ ಭಾಷೆಯು ಸುಂದರವಾದ ಲಿಪಿಯನ್ನು ಹೊಂದಿದ್ದು, ವಿನೋಬಾ ಭಾವೆ ಯವರು ಕನ್ನಡ ಲಿಪಿಯನ್ನು ಲಿಪಿಗಳ ರಾಜ ಎಂದು ಹೊಗಳಿದ್ದಾರೆ. ಕನ್ನಡದ ಅತೀ ಪುರಾತನ ಶಾಸನ ವಾದ ಹಲ್ಮಿಡಿ ಶಾಸನ ಕಾಣ ಸಿಗುವ ಮುನ್ನ ಕೂಡಾ ಸುಮಾರು ೩ – ೪ ನೂರು ವರ್ಷಗಳ ಕಾಲ ಕನ್ನಡ ಭಾಷೆ ಬಳಕೆಯಲ್ಲಿತ್ತು ಎಂದು ಹೇಳಲಾಗುತ್ತದೆ.

 

ಕನ್ನಡದ ಬೆಳವಣಿಗೆಯ ಕಾಲವನ್ನು ೧. ಹಳಗನ್ನಡ, ೨. ನಡುಗನ್ನಡ, ಮತ್ತು ೩. ಹೊಸಗನ್ನಡ ಎಂದು ಮೂರು ಕಾಲಘಟ್ಟಗಳಲ್ಲಿ ವಿಂಗಡಿಸಲಾಗಿದೆ. ಇಂದು ನಾವು ಹೊಸಗನ್ನಡದ ಅವಧಿಯಲ್ಲಿ ಇದ್ದೇವೆ.

 

 

 

ಇಂದು ಕನ್ನಡ ಭಾಷೆಯು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಜಗತ್ತಿನಾದ್ಯಂತ 56.9 ಮಿಲಿಯನ್ ಜನರು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ ಹಾಗೂ ಕನ್ನಡಿಗರು ಜಗತ್ತಿನಾದ್ಯಂತ ವಾಸವಾಗಿದ್ದಾರೆ.

 

ಕನ್ನಡ ಭಾಷೆ ಎಷ್ಟೊಂದು ಬೆಳೆದಿದೆ‌ ಎಂದರೆ ಜಗತ್ತಿನ ಸಾವಿರಾರು ಭಾಷೆಗಳಲ್ಲಿ 28 ನೇ ದೊಡ್ಡ ಭಾಷೆಯಾಗಿದೆ. ಅಷ್ಟೇ ಅಲ್ಲದೇ ಭಾರತದ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಎರಡನೇ ದೊಡ್ಡ ಭಾಷೆಯಾಗಿದೆ. ಹಿಂದಿ ಭಾಷೆ ಅತೀ ಹೆಚ್ಚು ಅಂದರೆ 11 ಜ್ಞಾನಪೀಠ ಪ್ರಶಸ್ತಿ ಪಡೆದರೆ, ನಮ್ಮ ಕನ್ನಡ ಭಾಷೆ 8 ಪ್ರಶಸ್ತಿಗಳನ್ನು ಪಡೆದಿದೆ. ಇದು ನಾವು ಹೆಮ್ಮೆ ಪಡುವಂತಹ ವಿಷಯವಾಗಿದೆ. ಇನ್ನೂ ಹತ್ತು ಅನೇಕ ವಿಷಯಗಳಿಂದ ನನ್ನ ಕನ್ನಡ ಭಾಷೆ ಸಂಪನ್ಭರಿತ ಶ್ರೇಷ್ಠ ಭಾಷೆಯಾಗಿದೆ. ಇದನ್ನು ಹೀಗೆ ಉಳಿಸಿ – ಬೆಳೆಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ.

 

ಮೈಸೂರು ರಾಜ್ಯ “ಕರ್ನಾಟಕ” ಎಂದು ಹೊಸ ಹೆಸರು ಪಡೆದ ರಮಣೀಯ ಕ್ಷಣದ ಭಾವಚಿತ್ರ.

 

ಇನ್ನು ನಮ್ಮ ಕನ್ನಡ ನಾಡಿನ ಬಗ್ಗೆ ಅಂದರೆ ಕರ್ನಾಟಕದ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವುದಾದರೆ, ಕರ್ನಾಟಕ ರಾಜ್ಯವು ಕನ್ನಡ ಭಾಷೆಯನ್ನು ಮಾತನಾಡುವವರ ಮಾತೃ ಸ್ಥಾನವಾಗಿದೆ. ಕರ್ನಾಟಕ ಎಂಬುದು ಮೊದಲು ಸಂಸ್ಕೃತ ಭಾಷೆಯ ಕರ್ನಾಟ್ ಎಂಬುದಾಗಿತ್ತು. ಕರ್ನಾಟ್ ಎಂದರೆ ಕರ್ ನಾಡು, ಕಪ್ಪು ಮಣ್ಣಿನ ನಾಡು ಎಂದರ್ಥ. ಅದೇ ಕರ್ನಾಟ್ ಎಂಬ ಪದ ಕಾಲ ಗತಿಸಿದಂತೆ ಕರ್ನಾಟಕ ಎಂದು ಬದಲಾಗಿದೆ ಎಂದು ಹೇಳಲಾಗುತ್ತದೆ. ಕರ್ನಾಟಕವು ಎತ್ತರದ ಪ್ರದೇಶದಲ್ಲಿದ್ದು ಕಪ್ಪು ಮಣ್ಣನ್ನು ಹೊದಿದ್ದರಿಂದ ಕರ್ನಾಟಕಕ್ಕೆ ಪೂರ್ವಜರು ಕರ್ನಾಟ್ ಎಂದು ಹೆಸರಿಸಿದ್ದರು ಎಂದು ಅಧ್ಯಯನದಲ್ಲಿ ತಿಳಿದುಬರುತ್ತದೆ.

 

ಕನ್ನಡ ಭಾಷೆಯು ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದ್ದರೂ ಕೂಡ ನವೆಂಬರ್ 1 ರಂದೇ ಏಕೆ ನಾವು ಕನ್ನಡ ರಾಜ್ಯೋತ್ಸವ ವನ್ನು ಆಚರಣೆ ಮಾಡುತ್ತೇವೆ ಎಂದರೆ ಇಂದು ಕನ್ನಡ ಭಾಷಿಗರೆಲ್ಲರೂ ಒಂದಾದ ದಿನ. ಇದು ಕನ್ನಡ ಬಾಂಧವರೆಲ್ಲರ ಸಂಭ್ರಮದ ದಿನವಾಗಿದೆ.
1956 ರ ಮುಂಚೆ ಕನ್ನಡ ಭಾಷಿಗರು ದಕ್ಷಿಣ ಭಾರತದ ಬೇರೆ ಬೇರೆ ಸ್ಥಳಗಳಲ್ಲಿ ವಾಸವಾಗಿದ್ದರು. ಆದರೆ 1956 ರಲ್ಲಿ ಕನ್ನಡ ಮಾತನಾಡುವವರನ್ನೆಲ್ಲ ಒಂದು ಗೂಡಿಸಿ ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು. ಆದರೆ ಮೈಸೂರು ರಾಜ್ಯ ಎಂಬ ಹೆಸರನ್ನು ಉತ್ತರ ಕರ್ನಾಟಕದ ಜನರು ಒಪ್ಪಲಿಲ್ಲ. ಕರ್ನಾಟಕ ಎಂಬ ಹೆಸರಿಗಾಗಿ ಹಲವಾರು ಹೋರಾಟಗಳು ನಡೆದು ಮುಂದೆ ಅಂದರೆ 1973, ನವೆಂಬರ್ 1 ಕರ್ನಾಟಕ ರಾಜ್ಯ ಎಂಬುದಾಗಿ ಮರುನಾಮಕರಣ ಮಾಡಲಾಯಿತು. ಅದರ ಸವಿ ನೆನಪಿಗಾಗಿ ಪ್ರತಿ ನವೆಂಬರ್ 1 ರಂದು ನಾವು ಅತೀ ಸಂಭ್ರಮ ಸಡಗರದಿಂದ ಕನ್ನಡಾಂಬೆಯ ದಿನಾಚರಣೆಯನ್ನು ಆಚರಿಸಿ ಕನ್ನಡ ಮಾತೆಗಾಗಿ ಹಾಗೂ ಕನ್ನಡ ಮಾತೃ ಭೂಮಿ ಕರ್ನಾಟಕ ಕ್ಕಾಗಿ ಹಗಲಿರುಳು ಹೋರಾಡಿದ ಕನ್ನಡ ಹೋರಾಟಗಾರರನ್ನು, ಕನ್ನಡ ಕವಿಗಳನ್ನು, ಕನ್ನಡದ ಲೆಖಕರನ್ನು, ಕನ್ನಡದ ಸಾಧಕರನ್ನು, ಗುರುತಿಸಿ, ಸ್ಮರಿಸಿ, ಗೌರವಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಇದನ್ನು ಹೀಗೆ ಮುಂದುವರೆಸಿ ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ.

 

 

ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡದವನಾಗಿರು ಎಂದು ಹೇಳುತ್ತ, ಎಲ್ಲರಿಗೂ ಮತ್ತೊಂದು ಸಾರಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತೇನೆ.

 

ಜೈ ಹಿಂದ್, ಜೈ ಕರ್ನಾಟಕ ಮಾತೆ, ಒಂದೇ ಮಾತರಂ!

Leave a Reply

Your email address will not be published. Required fields are marked *

error: Content is protected !!