ತುಮಕೂರು: ಕಲ್ಪತರುನಾಡು ತುಮಕೂರು ನಗರದಲ್ಲಿ ಈಗ ಚಿನ್ನದ ಮಸಾಲೆ ದೋಸೆಯ ಹವಾ..
ಈ ಮಸಾಲೆ ದೋಸೆಯ ಬೆಲೆ ಬರೋಬ್ಬರಿ 1 ಸಾವಿರ ರೂಪಾಯಿ. ಇದು ಸಾಮಾನ್ಯ ದೋಸೆಯಲ್ಲ, ನಿಜವಾಗಿಯೂ ಚಿನ್ನದ ದೋಸೆ.
ಇಲ್ಲಿನ ಗಾಂಧಿನಗರದಲ್ಲಿರುವ ಉಡುಪಿ ಶ್ರೀಕೃಷ್ಣ ಭೋಜನಾಲಯದಲ್ಲಿ ಒಂದು ದೋಸೆ ಬೆಲೆ ಬರೋಬರಿ 1 ಸಾವಿರ ರೂಪಾಯಿ. ಎಣ್ಣೆ ಬಳಸದೆ ತುಪ್ಪದಿಂದ ದೋಸೆ ತಯಾರಿಸಿ, ಅದರ ಮೇಲ್ಭಾಗದಲ್ಲಿ ಚಿನ್ನದ ಹಾಳೆ ಅಂಟಿಸಲಾಗುತ್ತದೆ. ಇದಕ್ಕೆ ಗೋಲ್ಡನ್ ಫಾಯಿಲ್ ಎಡಿಬಲ್ ಮಸಾಲ ದೋಸೆ ಎಂದು ಹೆಸರಿಡಲಾಗಿದೆ.

ಈ ಹೋಟೆಲ್‌ನಲ್ಲಿ ಹೊಸ ಪ್ರಯತ್ನ ನಡೆದಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೋಸೆಯ ರುಚಿ ಸವಿದವರು ಬೇರೆಯವರಿಗೂ ಒಮ್ಮೆ ತಿನ್ನುವಂತೆ ಸಲಹೆ ಮಾಡುತ್ತಿದ್ದಾರೆ. ಹೀಗಾಗಿ ಹೋಟೆಲ್‌ಗೆ ಭೇಟಿ ನೀಡಿ, ಚಿನ್ನದ ದೋಸೆ ಕೇಳುವವರ ಸಂಖ್ಯೆ ಹೆಚ್ಚುತ್ತಿದೆ. ಗುಜರಾತ್‌ನಿಂದ ಚಿನ್ನದ ಹಾಳೆ ತರಿಸಲಾಗುತ್ತದೆ. ಒಮ್ಮೆ 10 ರಿಂದ 20 ಚಿನ್ನದ ಹಾಳೆ ಬರುತ್ತವೆ. ದೋಸೆ ಬಿಸಿ ಇರುವಾಗಲೇ ಅದರ ಮೇಲೆ ಹಾಳೆ ರೀತಿಯಲ್ಲಿರುವ ಚಿನ್ನದ ಹಾಳೆ ಅಂಟಿಸಲಾಗುತ್ತದೆ.

ಬೆಂಗಳೂರಿನ ಹೋಟೆಲ್ ಒಂದರಲ್ಲಿ ಈ ರೀತಿಯ ಚಿನ್ನದ ದೋಸೆ ತಯಾರಿಸುತ್ತಿದ್ದರು. ಅದರ ಪ್ರೇರಣೆಯಿಂದಾಗಿ ನಾವು ಸಹ ಚಿನ್ನದ ದೋಸೆ ಮಾಡುತ್ತಿದ್ದೇವೆ. ಇದನ್ನು ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ. ಬೇಡಿಕೆ ಬಂದಾಗ ಮಾತ್ರ ಮಾಡಿಕೊಡಲಾಗುತ್ತದೆ ಎಂದು ಹೋಟೆಲ್ ಮಾಲೀಕ ಕಾರ್ತಿಕ್ ಹೇಳುತ್ತಾರೆ.
ನಮ್ಮ ಹೋಟೆಲ್ ಪ್ರಾರಂಭವಾಗಿ ಮೂರುವರೆ ತಿಂಗಳಾಯಿತು. ವಿಶೇಷತೆ ಅಂದರೆ ಖಾರಾಬಾತ್, ಕೇಸರಿಬಾತ್, ದೋಸೆ ಎಲ್ಲದಕ್ಕೂ ತುಪ್ಪ ಹಾಕಿ ಮಾಡುತ್ತೇವೆ. ಮೊದ ಮೊದಲು ಗೋಲ್ಡನ್ ಫಾಯಿಲ್ ಎಡಿಬಲ್ ಹಾಳೆ ಹಾಕಿ ಮಾಡುತ್ತಿರುವ ಮಸಾಲೆ ದೋಸೆಗೆ ಅಷ್ಟೇನು ಬೇಡಿಕೆ ಬಂದಿರಲಿಲ್ಲ. ಆದರೆ ಇದೀಗ ಬೇಡಿಕೆ ತುಂಬಾ ಜಾಸ್ತಿಯಾಗಿದೆ. ಆದರೆಈಗ ಗೋಲ್ಡನ್ ಫಾಯಿಲ್ ಎಡಿಬಲ್ ಹಾಳೆ ಸಿಗುವುದೇ ಕಷ್ಟವಾಗುತ್ತಿದೆ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ಈ ಚಿನ್ನದ ಹಾಳೆ ಬಳಸಿದ ದೋಸೆ ತಿನ್ನುತ್ತಿದ್ದರಂತೆ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದರ ಜತೆಗೆ ಚರ್ಮ ಸುಂಕು ಆಗುತ್ತಿರಲಿಲ್ಲ ಎಂಬ ಮಾತಿದೆ ಎಂದು ಹೋಟೆಲ್ ಮಾಲೀಕ ಕಾರ್ತಿಕ್ ತಿಳಿಸಿದರು.
ನಾನು 5 ವರ್ಷಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರಂ ಹೋಟೆಲ್‌ನಲ್ಲಿ ಈ ರೀತಿಯ ದೋಸೆ ತಿಂದಿದ್ದೆ. ಆದರೆ ಈಗ ಆ ಹೋಟೆಲ್ ಕಾರಣಾಂತರಗಳಿAದ ಮುಚ್ಚಿದೆ. ಈ ಚಿನ್ನದ ದೋಸೆಗೆ ಆ ಹೋಟೆಲ್ ಪ್ರೇರಣೆಯಾಗಿದೆ ಎಂದು ಹೇಳಿದರು.