ಸೂಕ್ತ ಚಿಕಿತ್ಸೆ ಸಿಗದೆ ಗರ್ಭಿಣಿ ಹಾಗೂ ಮಕ್ಕಳ ದುರಂತ ಸಾವು
ತುಮಕೂರು_ಜಿಲ್ಲಾಸ್ಪತ್ರೆಯ ವೈದ್ಯರ ಎಡವಟ್ಟಿಗೆ ಬಾಣಂತಿ ಹಾಗೂ ಅವಳಿ ಗಂಡು ಮಕ್ಕಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ತುಮಕೂರಿನ ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ಘಟನೆ ನಡೆದಿದ್ದು ಕಸ್ತೂರಿ (30) ಎಂಬ ಮಹಿಳೆ ಮೃತ ಪಟ್ಟಿರುವ ಬಾಣಂತಿಯಾಗಿದ್ದಾರೆ. ಕಸ್ತೂರಿ ಭಾರತಿ ನಗರದಲ್ಲಿ ಒಂದು ಹೆಣ್ಣು ಮಗು ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು,
9 ತಿಂಗಳ ತುಂಬು ಗರ್ಭಿಣಿ ಆಗಿದ್ದ ಕಸ್ತೂರಿಗೆ ಬುಧವಾರ ಸಂಜೆ ಮನೆಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಈ ವೇಳೆ ಆಕೆಯ ಕಷ್ಟ ನೋಡಲಾರದೇ ಸ್ಥಳೀಯರೇ ಕೂಡಿ ಹಣಹೊಂದಿಸಿ ಆಟೋ ಮಾಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳಿಸಿದ್ದಾರೆ.
ಈ ವೇಳೆ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲ ಎಂದು ವೈದ್ಯೆ ಚಿಕಿತ್ಸೆ ಕೊಡದೇ ವಾಪಸ್ ಕಳುಹಿಸಿದ್ದಾರೆ, ಕಸ್ತೂರಿ ಜೊತೆ ತೆರಳಿದ್ದ ಸ್ತಳೀಯರು ಚಿಕಿತ್ಸೆ ನೀಡುವಂತೆ ವೈದ್ಯೆಯ ಬಳಿ ಅಂಗಲಾಚಿ ಕೇಳಿದರೂ ಸಹ ಚಿಕಿತ್ಸೆ ಕೊಡದೇ ನಿರ್ಲಕ್ಷ ಮಾಡಿದ್ದರಿಂದ ತಾಯಿ, ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸ್ತಳೀಯರು ಆರೋಪಿಸಿದ್ದಾರೆ.
ನಾವು ಚಿಕಿತ್ಸೆ ಕೊಡಲ್ಲ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಂಡ್ತಿನಿ ಎಂದು ವೈದ್ಯೆ ಹೇಳಿದಾಗ ಹಣವಿಲ್ಲದೇ ಹೊಟ್ಟೆ ನೋವಿನಲ್ಲೇ ಬಾಣಂತಿ ಕಸ್ತೂರಿ ಮನೆಗೆ ವಾಪಸ್ ಬಂದಿದ್ದರು,ಬೆಳಗ್ಗಿಜಾವ ಹೊಟ್ಟೆನೋವಿನಿಂದ ಕಿರುಚಾಡಿ ಒಂದು ಮಗುವಿಗೆ ಜನ್ಮ ನೀಡಿದ್ದ ಕಸ್ತೂರಿ ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ತಾಯಿ ಹಾಗೂ ಎರಡು ಅವಳಿ ಮಕ್ಕಳು ಮೃತಪಟ್ಟಿದ್ದಾರೆ.
ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ ಹಾಗೂ ಹೊಣೆಗೇಡಿತನಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ,ಬಡವರಿಗೆ ಗುಣಮಟ್ಟದ ಚಿಕಿತ್ಸೆ ಜಿಲ್ಲಾಸ್ಪತ್ರೆಯಲ್ಲಿ ಗಗನಕುಸುಮವಾಗಿದೆ,ಆರೋಗ್ಯ ಸಚಿವರೇ ಈ ಬಗ್ಗೆ ಗಮನ ಹರಿಸಿ ಈ ಆಸ್ಪತ್ರೆ ಅವ್ಯವಸ್ತೆಗೆ ಮೇಜರ್ ಸರ್ಜರಿ ಮಾಡಬೇಕಿದೆ.
ಇನ್ನು ತುಮಕೂರಿನ ಹೆರಿಗೆ ವಾರ್ಡ್ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದರು ಸಹ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದು ದನದಾಹಿಗಳ ಆಸೆಗೆ ಇಂತಹ ಮುಗ್ಧ ಜೀವಿಗಳು ಬಲಿಯಾಗುತ್ತಿರುವುದು ದುರಂತ.
ಇನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಕೆಲ ವಿಭಾಗಗಳಲ್ಲಿ ಹಣ ಹಾಗೂ ಶಿಫಾರಸು ಇಲ್ಲದೆ ಯಾವ ಕೆಲಸಗಳು ನಡೆಯುವುದಿಲ್ಲ ಎನ್ನುವ ಆರೋಪಗಳು ಪದೇ ಪದೇ ಕೇಳಿ ಬರುತ್ತಿದ್ದರು ಸಹ ಕೆಲ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಇನ್ನು ಎರಡು ತಿಂಗಳ ಹಿಂದೆ ಹೆರಿಗೆಗೆ ಬಂದಿದ್ದ ಮಹಿಳೆಗೆ ವೈದ್ಯರು ಡೆಲಿವರಿ ಮಾಡಿ ಹತ್ತಿಯನ್ನು ಹೊಟ್ಟೆಯಲ್ಲಿ ಬಿಟ್ಟು ಮತ್ತೊಂದು ಎಡವಟ್ಟು ಮಾಡಿದ್ದರು, ಆ ಮಹಿಳೆಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಾಗ ಚಿಕಿತ್ಸೆ ನೀಡುವ ನೆಪದಲ್ಲಿ ಆಸ್ಪತ್ರೆಯ ವೈದ್ಯರೊಬ್ಬರು ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಯಶಸ್ಸು ಸಹ ಕಂಡಿದ್ದರು ಹೀಗೆ ಹತ್ತು ಹಲವು ಪ್ರಕರಣಗಳು ಆರೋಪಗಳು ಕೇಳಿ ಬರುತ್ತಿದ್ದರು ಸಹ ಹಿರಿಯ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.