ಸುಮಾರು 1000 ಬೆಚ್ಚನೆಯ ಉಲ್ಲನ್ ಹೊದಿಕೆಗಳನ್ನು ಈ ವರ್ಷದ ಚಳಿಗಾಲಕ್ಕೆ ವಿತರಿಸುವ ಗುರಿ ಹೊಂದಿರುವ ಸ್ವಾಮಿ ಜಪಾನಂದ

ಪ್ರತೀ ವರ್ಷದಂತೆ ಈ ಬಾರಿಯೂ ನಿರ್ಗತಿಕರಿಗೆ ಹಾಗೂ ಅಲೆಮಾರಿ ಜನರಿಗೆ ಚಳಿಯನ್ನು ಎದುರಿಸುವ ಸಲುವಾಗಿ ಸರಿಸುಮಾರು 1000ಕ್ಕೂ ಮಿಗಿಲಾದ ಬೆಚ್ಚನೆಯ ಉಲ್ಲನ್ ಹೊದಿಕೆಗಳನ್ನು ವಿತರಿಸಲಾಗುತ್ತಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿರುತ್ತಾರೆ. ಇದರ ಆರಂಭೋತ್ಸವ ಎಂಬಂತೆ ಕಳೆದ 23-11-2022ರಂದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಸುಮಾರು 150ಕ್ಕೂ ಮಿಗಿಲಾದ ಕುಷ್ಠರೋಗಿಗಳು ಹಾಗೂ ಹೆಚ್.ಐ.ವಿ. ಪೀಡಿತರಿಗೆ ವಿತರಿಸಲಾಯಿತು.

 

 

ಇದರ ಮುಂದುವರೆದ ಭಾಗದಂತೆ ಇಂದು ದೂರದ ರಾಜಸ್ಥಾನದಿಂದ ಹೊಟ್ಟೆಪಾಡಿಗೆ ಚಾಕುಗಳನ್ನು, ಮಚ್ಚುಗಳನ್ನು ಹಾಗೂ ಕೃಷಿ ಉಪಕರಣಗಳನ್ನು ತಯಾರಿಸುತ್ತಾ ಊರಿಂದೂರಿಗೆ ಸಂಚರಿಸುತ್ತಿರುವ ಈ ನತದೃಷ್ಟ ಅಲೆಮಾರಿ ಜನರಿಗೆ ಹೊದಿಕೆಗಳನ್ನು ಅವರಿದ್ದಲ್ಲಿಯೇ ಅಂದರೆ ರಸ್ತೆಯ ಬದಿಯಲ್ಲಿ ವಾಸಿಸುತ್ತಿರುವ ಪುಟ್ಟ ಪುಟ್ಟ ಮಕ್ಕಳು ಹಾಗೂ ವೃದ್ಧರಾದಿಯಾಗಿ ಎಲ್ಲರಿಗೂ ಉಲ್ಲನ್ ಹೊದಿಕೆಯನ್ನು ವಿತರಿಸಲಾಯಿತು.

 

 

 

 

ಇದೇ ತೆರನಾಗಿ ಮುಂದೆ ಬೆಂಗಳೂರಿನ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ಪಾವಗಡ, ಮಧುಗಿರಿ, ಕೊರಟಗೆರೆ ಮುಂತಾದ ಪ್ರದೇಶಗಳಲ್ಲಿನ ನಿರ್ಗತಿಕ ವೃದ್ಧರಿಗೆ ಈ ಒಂದು ಬೆಚ್ಚನೆಯ ಹೊದಿಕೆಯನ್ನು ವಿತರಿಸಲು ಎಂದಿನಂತೆ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದು ಪ್ರತೀ ವರ್ಷ ನಡೆಯುವ ಒಂದು ಸೇವಾ ಯಜ್ಞ. ಈ ಸೇವಾ ಯಜ್ಞಕ್ಕೆ ಬೆಂಗಳೂರಿನ ಸಾಯಿ ಭಕ್ತಿ ಪ್ರೇಮಾಂಜಲಿ ಫೌಂಡೇಷನ್ ಹಾಗೂ ಇತರ ಹಿತೈಷಿಗಳು ಹಾಗೂ ಭಕ್ತರ ಸಹಕಾರದಿಂದ ಈ ಯೋಜನೆ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬರುತ್ತಿದೆ.  ಕಳೆದ ಕೋವಿಡ್ ಸಂದರ್ಭದಲ್ಲಂತೂ ಭಯಂಕರ ಪರಿಸ್ಥಿತಿಯಲ್ಲಿಯೂ ಸಹ ರಾತ್ರಿಯ ವೇಳೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ಹಾಗೂ ಆಶ್ರಮದ ಸ್ವಯಂಸೇವಕರು ಮತ್ತು ಸಮರ್ಪಣ ಇನ್ಫೋಸಿಸ್ ಸ್ವಯಂಸೇವಕರು ಈ ಕಾರ್ಯದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ.

 

 

ಈ ಸಮಯೋಚಿತ ಮಹತ್ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಭಗವಂತನ ಕೃಪಾಶೀರ್ವಾದ ಸದಾ ದೊರೆಯಲಿ ಎಂದು ಪೂಜ್ಯ ಸ್ವಾಮೀಜಿಯವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!