ಚೆನ್ನೈ: ತಮಿಳು ನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಮಾಡಿರುವ ಆರುಮುಗಸ್ವಾಮಿ ಕಮೀಷನ್ 608 ಪುಟಗಳ ವರದಿಯನ್ನು ಸಲ್ಲಿಸಿದೆ. ಜಯಲಲಿತಾ ಅವರ ಸಾವಿಗೆ ಶಶಿಕಲಾ ಅವರೇ ಕಾರಣ ಎಂದು ಕಮೀಷನ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜತೆಗೆ ಶಶಿಕಲಾ ಮತ್ತು ಮಾಜಿ ಆರೋಗ್ಯ ಸಚಿವರ ವಿರುದ್ಧ ತನಿಖೆ ನಡೆಸುವಂತೆ ಆಯೋಗ ಸಲಹೆ ನೀಡಿದೆ. ವರದಿಯ ಪ್ರಕಾರ ಶಶಿಕಲಾ, ಜಯಲಲಿತಾರ ಖಾಸಗಿ ವೈದ್ಯ ಮತ್ತು ಶಶಿಕಲಾರ ಸಂಬಂಧಿ ಡಾ. ಶಿವಕುಮಾರ್, ಮಾಜಿ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್ ಅವರು ತಪ್ಪಿತಸ್ಥರು ಎಂದು ಹೇಳಲಾಗಿದೆ.
ಆಯೋಗ ಈ ಎಲ್ಲರ ವಿರುದ್ಧವೂ ತನಿಖೆ ನಡೆಸುವಂತೆ ಸಲಹೆ ನೀಡಿದೆ. 2016ರ ಸೆಪ್ಟೆಂಬರ್ ತಿಂಗಳಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಲಲಿತಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಹಿಡಿದು ಅವರ ಸಾವಿನ ವರೆಗೂ ಅವರಿಗೆ ನೀಡಲಾದ ಚಿಕಿತ್ಸೆ, ಅವರ ಆರೋಗ್ಯದಲ್ಲಾದ ಬದಲಾವಣೆಗಳು ಎಲ್ಲದರ ಕುರಿತು ಆಯೋಗ ವಿಚಾರಣೆ ನಡೆಸಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ವರದಿ ನೀಡಿದ್ದರು. ಇಂದು ತಮಿಳುನಾಡು ವಿಧಾಸಭೆಯಲ್ಲಿ ಎಂ ಕೆ ಸ್ಟಾಲಿನ್ ಆಯೋಗದ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ.
ಜಯಲಲಿತಾ 2016ರ ಡಿಸೆಂಬರ್ 5ರಂದು ಮೃತಪಟ್ಟಿದ್ದರು. ಆರುಮುಗಸ್ವಾಮಿ ಆಯೋಗವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ 2017ರ ನವೆಂಬರ್ 22ರಂದು ರಚಿಸಿತ್ತು. ಮಡ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರುಮುಗಂ ಅವರು ಆಯೋಗದ ಮುಖ್ಯಸ್ಥರಾಗಿ ತನಿಖೆ ನಡೆಸಿದರು. ಇದಾದ ಸುಮಾರು ಐದು ವರ್ಷಗಳ ನಂತರ ಇದೀಗ ಆಯೋಗ ವರದಿ ನೀಡಿದೆ. ಇದರಿಂದ ಶಶಿಕಲಾ ಮತ್ತು ಇತರ ಆರೋಪಿಗಳ ವಿರುದ್ಧ ಶೀಘ್ರ ತನಿಖೆಯಾಗುವ ಸಾಧ್ಯತೆಯಿದೆ.
ಜಯಲಲಿತಾ ಅವರ ಸಾವಿನ ದಿನದಿಂದಲೂ ಶಶಿಕಲಾ ಅವರ ಮೇಲೆ ಶಂಕೆ ಕೇಳಿಬಂದಿತ್ತು. ಜಯಲಲಿತಾ ಅವರಿಗೆ ಹಲವು ದಿನಗಳಿಂದ ವಿಷವನ್ನು ನಿಧಾನವಾಗಿ ಶಶಿಕಲಾ ಕೊಡುತ್ತಾ ಬಂದಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು. ಈಗ ಈ ಆರೋಪಗಳು ವರದಿಯಲ್ಲಿ ದೃಢಪಟ್ಟಿವೆ.