ತುಮಕೂರು: ನಗರದಲ್ಲಿ ಇಂದು (ಅ.18,2022) ತುಮಕೂರು ಜಿಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ ಕೆಆರ್ ಎಸ್ ಪಕ್ಷದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸುತ್ತದೆ. ಎಲ್ಲಿಯೂ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ನ್ಯಾಯಬೆಲೆ ಅಂಗಡಿಗಳಿಗಳಲ್ಲಿ ಕಿರುಕುಳ ನೀಡಿಲ್ಲ ಮತ್ತು ನೀಡುವುದೂ ಇಲ್ಲ. ಯಾವ ನ್ಯಾಯ ಬೆಲೆ ಅಂಗಡಿಗಳಲ್ಲಿ ಅನ್ಯಾಯ, ಮೊಸ, ವಂಚನೆ, ಭ್ರಷ್ಟಾಚಾರ ನಡೆಯುತ್ತಿದೆಯೋ ಅಂತ ನ್ಯಾಯ ಬೆಲೆ ಅಂಗಡಿ ವಿರುದ್ಧ “ಆಪರೇಷನ್ ವೀರಾಚಾರಿ” ಕಾರ್ಯಾಚರಣೆ ನಡೆಯುತ್ತದೆ ಎಂದು ಕೆಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನ ಸಿಂಧೂ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಕೆಆರ್ ಎಸ್ ಪಕ್ಷದ ವಿರುದ್ಧ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದವರು ಹಮ್ಮಿಕೊಂಡಿರುವ ಪ್ರತಿಭಟನೆಯೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿ ಎಂಬುವಂತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ತಾವೇ ಹೇಳಿರುವಂತೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ಮತ್ತು ಸೂಕ್ತ ಕಮಿಷನ್ ಅನ್ನು ಪಡೆಯಲು ಹೋರಾಟ ಮಾಡಿದರೆ ಅದಕ್ಕೆ ಕೆಆರ್ ಎಸ್ ಪಕ್ಷ ಬೆಂಬಲಿಸುತ್ತದೆ.
ಸರ್ಕಾರದಿಂದ ವಂಚನೆಗೊಳಗಾಗುತ್ತಿರುವ ನ್ಯಾಯಬೆಲೆ ಅಂಗಡಿಗಳ ಪರ ಹೋರಾಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸಿದ್ಧವಾಗಿದೆ. ಸರ್ಕಾರ ಪ್ರತಿ ಕ್ವಿಂಟಾಲ್ ಗೆ 300 ರೂ. ಕಮಿಷನ್ ನ್ಯಾಯಬೆಲೆ ಅಂಗಡಿಯವರಿಗೆ ನೀಡಬೇಕು. ಅವರಿಗೆ ದಕ್ಕಬೇಕಾದ ಕಮಿಷನ್ ಅನ್ನು ಯಾವುದೇ ತಾರತಮ್ಯವಿಲ್ಲದೆ ಪ್ರತಿ ತಿಂಗಳು ಬಿಡುಗಡೆ ಮಾಡಬೇಕು. ಹಾಗೆಯೇ ರಾಜ್ಯದಲ್ಲಿ ಪಡಿತರ ಫಲಾನುಭವಿಗಳಿಗೆ ಸರ್ಕಾರದ ನಿಯಮದಂತೆ ಸೂಕ್ತ ರೀತಿಯಲ್ಲಿ ಪಡಿತರ ವಿತರಣೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಯನ್ನು ಕೆಆರ್ ಎಸ್ ಪಕ್ಷ ಸನ್ಮಾನಿಸುತ್ತದೆ ಎಂದರು.
ಹಿಂದಿನಿಂದಲೂ ರಾಜ್ಯದ ಮೂಲೆ ಮೂಲೆಗಳಲ್ಲಿ ಎಲ್ಲಿ ಅನ್ಯಾಯ, ಅಕ್ರಮ,ಭ್ರಷ್ಟಾಚಾರ ನಡೆಯುತ್ತದೊ ಅಂತಲ್ಲಿ ಕೆಆರ್ ಎಸ್ ಪಕ್ಷ ಹೋರಾಟ, ಪ್ರತಿಭಟನೆ ಮಾಡುವ ಮೂಲಕ ರಾಜ್ಯದ ಭ್ರಷ್ಟರನ್ನು ಬಯಲಿಗೆಳೆದಿದೆ. ಇತ್ತೀಚೆಗೆ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ವಿರೋಧಿಸಿ ನ್ಯಾಯಾಲಯ ಮೊರೆ ಹೋಗಿದ್ದ ದಾವಣಗೆರೆ ಜಿಲ್ಲೆಯ ಪರಿಸರ ಪ್ರೇಮಿ ವೀರಾಚಾರಿ ಅವರು ಸೂಕ್ತ ನ್ಯಾಯ ಸಿಗದೆ ಆತ್ಮಹತ್ಯೆ ಮಾಡಿಕೊಂಡರು. ಇದರಲ್ಲಿ ಭಾಗಿಯಾದ ತುಮಕೂರು ಜಿಲ್ಲಾ ಜಂಟಿ ಆಹಾರ ನಿರ್ದೇಶಕ ಮಂಟೆಸ್ವಾಮಿ ಎನ್ನುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆ.ಆರ್ .ಎಸ್ ಪಕ್ಷ ಹೋರಾಟ ಮಾಡಿ ಅವರ ವಿರುಧ್ದ ಕ್ರಮ ಜರುಗಿಸಲು ಲೋಕಯುಕ್ತ ದೂರು ಸಲ್ಲಿಸಿದೆ ಎಂದರು.
ನ್ಯಾಯಬೆಲೆ ಅಂಗಡಿಗಳ ಮಾಲೀಕರು ಮುದ್ರಿಸಿರುವಂತೆ ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳಿಗೆ ಸಿಗಬೇಕಾದ ಸೌಲಭ್ಯಕ್ಕಾಗಿ ಕೆಆರ್ ಎಸ್ ಪಕ್ಷದ ಬೆಂಬಲ ಕೋರಿದರೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಪರವಾಗಿ ನಿಲ್ಲುತ್ತೇವೆ.ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಿಗದೆ ಭ್ರಷ್ಟಾಚಾರದಲ್ಲಿ ತೊಡಗಿದರೆ ಇದನ್ನು ಕೆಆರ್ ಎಸ್ ಸಹಿಸುವುದಿಲ್ಲ. ಸರ್ಕಾರದಿಂದ ಬರಬೇಕಾದ ಸೌಲಭ್ಯ ಕೊಡಿಸಲು ಸರ್ಕಾರದ ವಿರುದ್ಧ ಹೋರಾಡಲು ಕೆಆರ್ ಎಸ್ ಬೆಂಬಲವಿದೆ ಎಂದರು.
ಸರ್ಕಾರದಿಂದ ಪ್ರತಿ ತಿಂಗಳು ಬರುವ ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳಿಗೆ ಸಿಗಬೇಕಾದ ಸವಲತ್ತುಗಳು ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ. ಹಲವು ತಿಂಗಳುಗಳು ಕಳೆದರೂ ಅವರಿಗೆ ಬರಬೇಕಿದ್ದ ಕಮಿಷನ್ ಹಣ ದಕ್ಕದೆ ನ್ಯಾಯಬೆಲೆ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ. ಬೇರೆ ರಾಜ್ಯಗಳ ಸರ್ಕಾರವು ಅಲ್ಕಿನ ನ್ಯಾಯಬೆಲೆ ಅಂಗಡಿಗೆ ಕ್ವಿಂಟಾಲ್ ಗೆ 300 ರೂಪಾಯಿವರೆಗೂ ಕಮಿಷನ್ ಹಣ ಕೊಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬರಬೇಕಾದ ಹಣವೇ ಅವರ ಕೈ ಸೇರುತ್ತಿಲ್ಲ.
ಸರ್ಕಾರ ನ್ಯಾಯ ಬೆಲೆ ಅಂಗಡಿಯವರಿಗೆ ನೀಡುತ್ತಿರುವ ಕಮಿಷನ್ ದಿನನಿತ್ಯ ಕರೆಂಟ್ ಬಿಲ್, ಬಾಡಿಗೆ, ಹಮಾಲಿಗಾರರಿಗೆ ನಿಗದಿತ ಸಮಯಕ್ಕೆ ನೀಡಬೇಕಾದ ಕೂಲಿಗೆ ಸಾಕಾಗಿಲುತ್ತಿಲ್ಲ. ನ್ಯಾಯಬೆಲೆ ಅಂಗಡಿಗೆ ಆಹಾರ ಸರಬರಾಜು ಇಲಾಖೆಯಿಂದಲೇ ಉಚಿತ ವಿದ್ಯುತ್ ಹಾಗೂ ಇಂತಿಷ್ಟು ಬಾಡಿಗೆಯನ್ನೂ ನೀಡಬೇಕು. ಇಡೀ ರಾಜ್ಯದಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಏಕ ನೀತಿಯ ಕಮಿಷನ್ ನೀಡಬೇಕು. ತಾರತಮ್ಯ ಮತ್ತು ನ್ಯಾಯಬೆಲೆ ಅಂಗಡಿಗಳ ಮೇಲಿನ ಅಧಿಕಾರಿಗಳ ದರ್ಪವನ್ನು ಕೆ.ಆರ್.ಎಸ್ ಖಂಡಿಸುತ್ತದೆ. ಈ ಅನ್ಯಾಯದ ವಿರುದ್ಧ ಸರ್ಕಾರದ ವಿರುದ್ಧ ಹೋರಾಡುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಸಂಪೂರ್ಣ ಬೆಂಬಲಿಸುತ್ತದೆ. ಇಂತಹ ಅನ್ಯಾಯದ ವಿರುದ್ಧ ಹೋರಾಡಲು ಕೆ.ಆರ್ .ಎಸ್ ಪಕ್ಷ ಸದಾ ಸಿದ್ಧ ಎಂದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಇರಬೇಕಾದ ವ್ಯವಸ್ಥೆ ಮತ್ತು ಫಲಾನುಭವಿಗಳಿಗೆ ಪಡಿತರ ವಿತರಣೆಯಲ್ಲಿ ಪಾಲಿಸಬೇಕಾದ ನಿಯಮಗಳು:
1. Electronic Scale ಕಡ್ಡಾಯ; ತೂಕದ Display ಫಲಾನುಭವಿಗಳಿಗೆ ಕಾಣಿಸಬೇಕು.
2. ಅಂಗಡಿಯ ಮುಂದೆ ಅಥವ ಒಳಗಿನ ನೋಟಿಸ್ ಬೋರ್ಡ್‌ನಲ್ಲಿ ಅಂಗಡಿಯವರ ಸಂಪರ್ಕ ಸಂಖ್ಯೆ, ಆಹಾರ ನಿರೀಕ್ಷಕರ ಮತ್ತು ಆಹಾರ ಶಿರಸ್ತೆದಾರರ ಫೋನ್ ನಂಬರ್, ಅಂಗಡಿಯ ಪರವಾನಗಿ ಮಂಜೂರು ಅಥವಾ ನವೀಕರಣದ ಪ್ರತಿಯನ್ನು ಕಡ್ಡಾಯವಾಗಿ ಪ್ರದರ್ಶಿಸಿರಬೇಕು.
3. ನ್ಯಾಯಬೆಲೆ ಅಂಗಡಿಯ ಮುಂದೆ ಅಥವ ಬಾಗಿಲ ಮೇಲೆ ಆ ನ್ಯಾಯಬೆಲೆ ಅಂಗಡಿಯ ಹೆಸರು, ಅದರ ಪರವಾನಗಿ ಸಂಖ್ಯೆ, ಪರವಾನಗಿದಾರರ ಹೆಸರು, ಮತ್ತು ಆಹಾರ ಇಲಾಖೆಯ ಸಹಾಯವಾಣಿ ಸಂಖ್ಯೆಯ ಮಾಹಿತಿಗಳನ್ನು ಒಳಗೊಂಡ ದೊಡ್ಡ ನಾಮಫಲಕವನ್ನು (Name Board) ಹಾಕಿರಬೇಕು.
4. ವಿವಿಧ ಬಗೆಯ ಕಾರ್ಡುಗಳ ಫಲಾನುಭವಿಗಳಿಗೆ ಸದರಿ ತಿಂಗಳಿನಲ್ಲಿ ಮಂಜೂರು ಆಗಿರುವ ಪಡಿತರದ ಮಾಹಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣಿಸುವಂತೆ ಪ್ರಕಟಿಸಿರಬೇಕು.
5. ಫಲಾನುಭವಿಗಳಿಗೆ ಮಂಜೂರಾಗಿರುವ ಪಡಿತರ ವಿತರಿಸಲು ಬಯೋಮೆಟ್ರಿಕ್ ಅಥವಾ ಇನ್ಯಾವುದೇ ನೆಪದಲ್ಲಿ ಅವರಿಂದ ಯಾವುದೇ ರೀತಿಯ ಹಣ ಪಡೆಯುವಂತಿಲ್ಲ.
6. ಬಯೋಮೆಟ್ರಿಕ್ ಪಡೆದ ನಂತರ ತಕ್ಷಣವೇ ಪಡಿತರ ವಿತರಣೆ ಮಾಡತಕ್ಕದ್ದು. ಆಮೇಲೆ ಬನ್ನಿ, ನಾಳೆ ಬನ್ನಿ ಎಂದೆಲ್ಲಾ ಹೇಳುವಂತಿಲ್ಲ.
7. ಮಂಜೂರಾಗಿರುವ ಪಡಿತರವನ್ನು ಬಿಟ್ಟು ಇತರೆ ಸಾಮಾನುಗಳನ್ನು ಒತ್ತಾಯಪೂರ್ವಕವಾಗಿ ಮಾರುವಂತಿಲ್ಲ.
8. ಮಂಗಳವಾರ ಮತ್ತು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ದಿನಗಳಲ್ಲಿ ನಿಗದಿತ ಸಮಯದಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದಿರಬೇಕು.
ಆಹಾರ ಇಲಾಖೆಯ ಅಧಿಕಾರಿಗಳು ಪಾಲಿಸಬೇಕಾದ ನಿಯಮಗಳು:
1. ನ್ಯಾಯಬೆಲೆ ಅಂಗಡಿಯಲ್ಲಿ electronic scale ಸೇರಿದಂತೆ ಪಡಿತರ ವಿತರಣೆಗಾಗಿ ಇರಲೇಬೇಕಾದ ಮೂಲಭೂತ ಸೌಕರ್ಯಗಳು, ಇಲಾಖೆಯ ಅಧಿಕಾರಿಗಳ ಸಂಪರ್ಕ ಸಂಖ್ಯೆಯೂ ಸೇರಿದಂತೆ ಫಲಾನುಭವಿಗಳಿಗೆ ಸ್ಪಷ್ಟವಾಗಿ ಕಾಣಿಸುವಂತೆ ನೀಡಬೇಕಾದ ಮಾಹಿತಿಗಳು ಅಂಗಡಿಯಲ್ಲಿ ಕಡ್ಡಾಯವಾಗಿ ಇರುವಂತೆ ಖಾತ್ರಿಪಡಿಸಿಕೊಳ್ಳುವುದು.
2. ನ್ಯಾಯಬೆಲೆ ಅಂಗಡಿಯವರಿಂದ ಮೋಸ, ವಂಚನೆ ಅಥವಾ ದಬ್ಬಾಳಿಕೆಗೆ ಒಳಗಾದ ಸಂತ್ರಸ್ತ ಫಲಾನುಭವಿಗಳು ಫೋನ್ ಮೂಲಕ ದೂರು ನೀಡಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿ ದೂರಿಗೆ ಸಂಬಂಧಿಸಿದಂತೆ ಪಾರದರ್ಶಕವಾಗಿ ವಿಚಾರಣೆ ನಡೆಸಬೇಕು.
3. ದಾಸ್ತಾನು ಪರಿಶೀಲನೆಯ (Stock Verification) ಸಂದರ್ಭದಲ್ಲಿ ಅಂಗಡಿಯಲ್ಲಿ ಆ ಸಮಯದಲ್ಲಿ ಇರಬೇಕಾದದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಡಿತರ ಇದ್ದಲ್ಲಿ ಖೋತಾ ಆಗಿರುವಷ್ಟು ಪ್ರಮಾಣದ ಪಡಿತರವನ್ನು ಈಗಾಗಲೇ ಕದ್ದು ಕಾಳಸಂತೆಯಲ್ಲಿ ಮಾರಲಾಗಿರುತ್ತದೆ. ಹಾಗಾಗಿ ಆಹಾರ ನಿರೀಕ್ಷಕರು ಆ ಕೂಡಲೇ ಆ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ IPC ಕಲಂ 379, Essential Commodities Act ಕಲಂ 3 ಮತ್ತು 7ರ ಅಡಿಯಲ್ಲಿ ಲಿಖಿತ ದೂರು ದಾಖಲಿಸಬೇಕು.
4. ದಾಸ್ತಾನು ಪರಿಶೀಲನೆಯ (Stock Verification) ಸಂದರ್ಭದಲ್ಲಿ ಅಂಗಡಿಯಲ್ಲಿ ಆ ಸಮಯದಲ್ಲಿ ಇರಬೇಕಾದದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಡಿತರ ಇದ್ದಲ್ಲಿ ಅದು ಫಲಾನುಭವಿಗಳಿಗೆ ವಂಚನೆ ಮಾಡಿ ಕೂಡಿಟ್ಟ ಪಡಿತರ ಆಗಿರುತ್ತದೆ. ಹಾಗಾಗಿ ಆಹಾರ ನಿರೀಕ್ಷಕರು ಆ ಕೂಡಲೇ ಆ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ IPC ಕಲಂ 379, 409, 420 ಮತ್ತು Essential Commodities Act ಕಲಂ 3 ಮತ್ತು 7ರ ಅಡಿಯಲ್ಲಿ ಲಿಖಿತ ದೂರು ದಾಖಲಿಸಬೇಕು.
5. ಇದರ ಜೊತೆಗೆ ಮೇಲಿನ ಎರಡೂ ಸಂದರ್ಭದಲ್ಲಿ ತಕ್ಷಣವೇ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಅಮಾನತು ಮಾಡಿ ಅದನ್ನು ಶಾಶ್ವತವಾಗಿ ವಜಾ ಮಾಡಲು ಕಾನೂನು ಕ್ರಮ ಜರುಗಿಸಬೇಕು.
6. ಅಕ್ರಮ ಎಸಗಿದ ನ್ಯಾಯಬೆಲೆಯ ಅಂಗಡಿಯು ಸರ್ಕಾರಿ ನ್ಯಾಯಬೆಲೆ ಅಂಗಡಿ ಆಗಿದ್ದಲ್ಲಿ ಅಕ್ರಮ ಎಸಗಿದ ಸರ್ಕಾರಿ ನೌಕರನನ್ನು ಕೂಡಲೇ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಮತ್ತು ಆತ/ಆಕೆಯನ್ನು ಕೆಲಸದಿಂದ ಅಮಾನತು ಮಾಡಲು ಶಿಫಾರಸು ಮಾಡಿ ಕಾನೂನು ಕ್ರಮ ಜರುಗಿಸಬೇಕು.
ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ತಿಳಿದಿರಬೇಕಾದ ಮಾಹಿತಿ.
1. ಪ್ರತಿ ಕಾರ್ಡಿಗೆ ಇಂತಿಷ್ಟು ಎಂದು ಸರ್ಕಾರದವರು ನ್ಯಾಯಬೆಲೆ ಅಂಗಡಿಯವರಿಗೆ ಹಣ ಪಾವತಿ ಮಾಡುತ್ತಾರೆ. ಹಾಗಾಗಿ ತಮಗೆ ಮಂಜೂರಾಗಿರುವ ಪಡಿತರ ಪಡೆಯಲು ಕಾರ್ಡುದಾರರು ಯಾವುದೇ ಕಾರಣಕ್ಕೂ ನ್ಯಾಯಬೆಲೆ ಅಂಗಡಿಯವರಿಗೆ ಹಣ ನೀಡುವ ಅಗತ್ಯವಿಲ್ಲ.
2. ನ್ಯಾಯಬೆಲೆ ಅಂಗಡಿಯವರು ಹಣಕ್ಕಾಗಿ ಒತ್ತಾಯ ಮಾಡಿದರೆ ಆ ಕೂಡಲೇ ಆಹಾರ ನಿರೀಕ್ಷಕರಿಗೆ ಮತ್ತು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು.
3. ನ್ಯಾಯಬೆಲೆ ಅಂಗಡಿಯವರು ಹೆದರಿಸಿ, ಬೆದರಿಸಿದಂತಹ ಸಂದರ್ಭದಲ್ಲಿ ಸಾಧ್ಯವಾದರೆ ವಿಡಿಯೋ ಮಾಡಿಕೊಳ್ಳಬೇಕು ಮತ್ತು ಆಹಾರ ಶಿರಸ್ತೆದಾರರಿಗೆ ಲಿಖಿತವಾಗಿ ದೂರು ನೀಡಬೇಕು.
4. ತಾವು ನೀಡಿದ ದೂರಿಗೆ ಆಹಾರ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೆ ಇದ್ದ ಸಂದರ್ಭದಲ್ಲಿ ದಯವಿಟ್ಟು KRS ಪಕ್ಷದ ) ಅಥವಾ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಂಪರ್ಕಿಸಿ.
5. ಪಡಿತರ ಪಡೆಯುವುದಕ್ಕಿಂತ ಮೊದಲು ತಮಗೆ ಆ ತಿಂಗಳಿನಲ್ಲಿ ಸಿಗಬೇಕಾದ ಪಡಿತರದ ಪ್ರಮಾಣವನ್ನು ತಿಳಿದುಕೊಂಡಿರುವುದು ಉತ್ತಮ. ಹಾಗಾದಾಗ ಮಾತ್ರ ಅಂಗಡಿಯವರು ತೂಕದಲ್ಲಿ ಅಥವ ಪ್ರಮಾಣದಲ್ಲಿ ಮೋಸ ಮಾಡುವುದು ಗೊತ್ತಾಗುತ್ತದೆ ಮತ್ತು ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಿ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ.
6. ರಾಜ್ಯದ ಯಾವುದೇ ಕಾರ್ಡುದಾರ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತನ್ನ ಪಾಲಿನ ಪಡಿತರ ಪಡೆಯಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಅಂಗಡಿಯವರು ಪಡಿತರ ನೀಡಲು ನಿರಾಕರಿಸುವಂತಿಲ್ಲ. ಹಾಗೆ ನಿರಾಕರಿಸಿದಂತಹ ಸಂದರ್ಭದಲ್ಲಿ ಸ್ಥಳೀಯ ಆಹಾರ ನಿರೀಕ್ಷಕರಿಗೆ ಅಥವ ಆಹಾರ ಇಲಾಖೆಯ ಸಹಾಯವಾಣಿಗೆ ಅಥವಾ KRS ಪಕ್ಷದ ಅಥವಾ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸಹಾಯವಾಣಿಗೆ ಕರೆ ಮಾಡಿ ದೂರು/ಮಾಹಿತಿ ನೀಡಿ.
ಜ್ಞಾನ ಸಿಂಧೂ ಸ್ವಾಮಿ
ರಾಜ್ಯ ಸಂಘಟನಾ ಕಾರ್ಯದರ್ಶಿ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಸಂಪರ್ಕಿಸಿ : +91 9449768426