ತುಮಕೂರು : ತುಮಕೂರು ನಗರದ ಉಪ ವಿಭಾಗ ಸೇರಿದಂತೆ, ನಗರ ಸೇರಿದಂತೆ ಇನ್ನಿತರೆ ಭಾಗಗಳಲ್ಲಿ ವಾಸವಾಗಿದ್ದ ರೌಡಿಗಳಿಗೆ ಜಿಲ್ಲಾ ಎಸ್.ಪಿ. ರಾಹುಲ್ ಕುಮಾರ್ ಶಹಪೂರವಾಡ್‌ರವರ ಮಾರ್ಗದರ್ಶನದಲ್ಲಿ ಪೆರೇಡ್ ನಡೆಸಿ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ, ಬಾರ್ ಮತ್ತು ರೆಸ್ಟೋರೆಂಟ್, ಭೂ ಮಾಫೀಯ, ಮೀಟರ್ ಬಡ್ಡಿ ದಂಧೆ, ಇನ್ನಿತರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿಯ ಮೇರೆಗೆ ಬೆಳ್ಳಂಬಳ್ಳಿಗೆ ಚಳಿ ಬಿಡಿಸಿದರು.
ರೌಡಿಗಳ ಪೆರೇಡ್ ನಂತರ ಸುದ್ಧಿಗಾರರೊಂದಿಗೆ ಎಸ್.ಪಿ.ರವರು ಮಾತನಾಡಿ ಹಾಲಿ ಮತ್ತು ಮಾಜಿ ರೌಡಿಗಳಿಗೆ ತಲಾಶ್ ಮಾಡಿ, ಸುಮಾರು ೫೪ ಆಯುಧ (ವಿವಿಧ ರೀತಿಯ)ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೇ ತುಮಕೂರಿನಲ್ಲಿ ಇತ್ತೀಚೆಗೆ ಬೇರೂರಿರುವ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವಾರು ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲದರ ಮೇಲೂ ಸೂಕ್ಷ್ಮ ನಿಗಾವಹಿಸಲಾಗಿದೆ, ಯಾವ ಕ್ಷಣದಲ್ಲಿ ಬೇಕಾದರೂ ತಲಾಶ್ ನಡೆಯಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯ ಸಂದೇಶ ನೀಡಿದರು.
ಕೆಲ ರೌಡಿಗಳೊಂದಿಗೆ ಮಾತನಾಡಿ, ತಾವುಗಳು ಮನಃಪರಿವರ್ತನೆ ಹೊಂದಿ, ಸಮಾಜದಲ್ಲಿ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ಬುದ್ಧಿ ಮಾತುಗಳನ್ನು ಹೇಳಿದರು, ಜೈಲಿನಲ್ಲಿರುವ ರೌಡಿಗಳೊಂದಿಗೆ ತಮ್ಮ ಸಂಪರ್ಕವಿರುವುದು ನಮಗೆ ಖಾತರಿಯಲ್ಲಿದೆ, ತಮ್ಮಗಳೆಲ್ಲಾ ಚಟುವಟಿಕೆಗಳನ್ನು ನಾವು ತೀವ್ರ ನಿಗಾದಲ್ಲಿಟ್ಟಿದ್ದೇವೆ, ತಾವು ಏನಾದರೂ ಅಕ್ರಮ ಚಟುವಟಿಕೆಗಳಲ್ಲಿ ಇದೇ ರೀತಿ ಮುಂದುವರೆದರೆ, ತಮ್ಮಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.
ರೌಡಿಗಳ ತಲಾಶ್ ಕಾರ್ಯದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಡಿ.ಎಸ್.ಪಿ. ಶ್ರೀನಿವಾಸ್, ವೃತ್ತ ನಿರೀಕ್ಷಕರಾದ ನವೀನ್, ಗ್ರಾಮಾಂತರ ವೃತ್ತ ನಿರೀಕ್ಷಕರಾದ ರಾಮಕೃಷ್ಣಯ್ಯ, ತಿಲಕ್ ಪಾರ್ಕ ವೃತ್ತ ನಿರೀಕ್ಷಕರಾದ ಮುನಿರಾಜು, ಜಯನಗರ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ಕ್ಯಾತ್ಸಂದ್ರ ಪೊಲೀಸ್ ನಿರೀಕ್ಷಕರು ಹಾಗೂ ಇನ್ನಿತರೆ ಪೂಲೀಸ್ ಸಿಬ್ಬಿಂದಿಗಳು ಭಾಗಿಗಳಾಗಿದ್ದರು.