ಪಾವಗಡ : ತಾಲೂಕಿನಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಇದನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದಕ್ಕೆ ಸೋಮವಾರ ಪಟ್ಟಣದ ಹಳೇ ಸಂತೆ ಮೈದಾನದ ಬಳಿಯಿರುವ ಸಲೂನ್ ಷಾಪ್ ಹತ್ತಿರ ಬರೆಯುತ್ತಿರುವ ಮಟ್ಟಾ ಬೀಟರ್ಗಳನ್ನು ಕಣ್ಣಾರೆ ನೋಡಿದ ಪ್ರಸಂಗ ನಡೆದಿದೆ. ಇಷ್ಟು ದಿನ ಕದ್ದು ಮುಚ್ಚಿ ಬರೆಯುತ್ತಿದ್ದ ಮಟ್ಕಾ ಚೀಟಿ ಇದೀಗ ಬೀದಿ ಬದಿಗಳಲ್ಲೇ ಬರೆಯುತ್ತಿರುವುದು ಶೋಚನೀಯ ಸಂಗತಿಯಾಗಿದೆ, ಅಲ್ಲದೇ ಇದು ಎಷ್ಟರ ಮಟ್ಟಿಗೆ ಹೆಮ್ಮರವಾಗಿ ಬೆಳೆದಿದೆ ಎಂಬುದು ಜನ ಸಮಾನ್ಯರ ಆಕ್ರೋಷವಾಗಿದೆ.
ಪಾವಗಡ ತಾಲ್ಲೂಕಿನಲ್ಲಿ ಹಲವಾರು ದಶಕಗಳಿಂದ ಸಮರ್ಪಕವಾಗಿ ಮಳೆ ಬೆಳೆ ಇಲ್ಲದಿರುವ ಈ ಪರಿಸ್ಥಿತಿಯಲ್ಲಿ ಅಕ್ರಮವಾಗಿ ಮಟ್ಟಾ ಮತ್ತು ಇಸ್ಪೀಟ್ ದಂಧೆಗಳು ತಲೆ ಎತ್ತಿವೆ. ಇಲ್ಲಿನ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು ಹಾಗೂ ರೈತಾಪಿ ವರ್ಗದ ಜನತ ಮಟ್ಕಾ ಮತ್ತು ಇಸ್ಟ್ಪೀಟ್ ದಂಧೆಯಲ್ಲಿ ತೊಡಗಿದ್ದಾರೆ. ಇವರುಗಳ ಹೆಂಡತಿ-ಮಕ್ಕಳು ಉಪವಾಸ ಅನುಭವಿಸುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಾಗಾಗಿ
ಸೋಮವಾರ ಮಟ್ಟಾ ಬರೆಯುತ್ತಿದ್ದ ಬೀಟರ್ನನ್ನು ಮಾತನಾಡಿಸಲಾಗಿ, ತಾನು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದು, ತನಗೆ ದುಡಿಯಲು ಸಾಧ್ಯವಾಗುತ್ತಿಲ್ಲ. ಮಟ್ಕಾ ಬರೆದು ಜೀವನ ಮಾಡುತ್ತಿದ್ದೇನೆ. ದಿನ ಒಂದಕ್ಕೆ 3 ರಿಂದ 5 ಸಾವಿರ ಕಲೆಕ್ಷನ್ ಆಗುತ್ತದೆ. ಈ ಮೊತ್ತವನ್ನು ಮಟ್ಕಾ ಕಿಂಗ್ಪಿನ್ ಅಶ್ವತ್ಥಪನವರಿಗೆ ನೀಡಿ, ನನ್ನ ಕಮಿಷನ್ (ದಲ್ಲಾಳಿ) ಹಣ ಪಡೆಯುತ್ತೇನೆ ಎಂದು ರಾಜಾರೋಷವಾಗಿ ಹೇಳಿಯೇ ಬಿಟ್ಟಿರು.
ತಾಲ್ಲೂಕಿನಲ್ಲಿ ಮಟ್ಟಾ ಭರ್ಜರಿಯಾಗಿ ನಡೆಯುತ್ತಿದ್ದು, ಪಟ್ಟಣದ ಕುಮಾರಸ್ವಾಮಿ ಬಡಾವಣೆ, ಬಾಲವನಹಳ್ಳಿ, ನಾಗರಕಟ್ಟೆ ನಗಾನಹಳ್ಳಿ,
ತಿರುಮಣಿ, ವೆಂಕಟಮ್ಮನಹಳ್ಳಿ, ಪಿ.ರೊಪ್ಪ, ಹೊಸ ಬಸ್ಟ್ಯಾಂಡ್, ಹಳೆ ಬಸ್ಟ್ಯಾಂಡ್, ಹಳಸಂತೆ ಮಾರುಕಟ್ಟೆಯ ಹತ್ತಿರದ ಸ್ಟಾಲ್ ಮಧ್ಯೆ, ಮಂಗಳವಾಡದ ರೈನ್ ಗೇಜ್ ಬಡಾವಣೆ, ಪಳವಳ್ಳಿ ಈ ಎಲ್ಲಾ ಪ್ರದೇಶಗಳಿಂದ ಮಟ್ಕಾ ಬೀಟರ್ಗಳು ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಪ್ರತಿ ದಿನ ರಾತ್ರಿ ಕರಾರುವಾಕ್ಕಾಗಿ ಮಟ್ಕಾ ನಡೆಯುತ್ತಿರುವ ವಿಷಯ ಸಾರ್ವಜನಿಕರಿಂದ ಮಾಹಿತಿ ತಿಳಿದು ಬಂದಿದೆ. ಪ್ರತಿ ದಿನ ಎರಡು ಆಟ ನಡೆಯುತ್ತಿದ್ದು, 7 ಮನೆಗಳ ಆಟ ಮಧ್ಯಾಹ್ನ 3 ಗಂಟೆಗೆ ಡ್ರಾ, 6 ಮನೆಗಳ ಆಟ ರಾತ್ರಿ 9 ಗಂಟೆಗೆ ಆಟದ ಫಲಿತಾಂಶ ಬರುತ್ತಿದೆ ಎಂದು ತಿಳಿದು ಬಂದಿದೆ.
ಪ್ರತಿ ದಿನ ಬೆಳಗ್ಗೆಯಿಂದಲೇ ಬೀಟರ್ಗಳು ಹಣ ಕಟ್ಟಿಸಿಕೊಳ್ಳಲು ಬರೆಯುವ ಕೇಂದ್ರದ ಸ್ಥಳಗಳ ಹತ್ತಿರ ಕಾದು ಕುಳಿತು ಅಲ್ಲಿಗೆ ಬರುವ ಬಡವರ ರಕ್ತ ಹೀರುತ್ತಿದ್ದಾರೆ ಎಂಬುದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.
ಮಟ್ಕಾ ಬರೆಯುವ ಬೀಟರ್ಗಳಲ್ಲಿ ಕೆಲವರು ಫೋನ್ ಪೇ ಮುಖಾಂತರ ಹಣ ಕಟ್ಟಿಸಿಕೊಂಡರೆ, ಕೆಲವರು ಚೀಟಿ ಮುಖಾಂತರ ಬರೆದು ಆಟವಾಡಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಕಾದು ಹಣ ಕಟ್ಟುವ ದುಸ್ಥಿತಿ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇತ್ತೀಚೆಗೆ ಮಟ್ಕಾ ಬೀಟರ್ಗಳನ್ನು ಠಾಣೆಗೆ ಕರೆಸಿ, ಆಟ ನಡೆಸಲು ಮುಂದಾದರೆ ಗಡಿಪಾರು ಮಾಡುವುದಾಗಿ ಪೋಲೀಸ್ ಅಧಿಕಾರಿಗಳು ಒಂದು ಕಡೆ ಎಚ್ಚೆರಿಕೆ ನೀಡಿದರೆ, ಇನ್ನೊಂದು ಕಡೆ ಕೆಲ ಪೋಲೀಸ್ ಅಧಿಕಾರಿಗಳೇ ಷಾಮೀಲಾಗಿ ಆಟವಾಡಲು ಅನುಮತಿ ನೀಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.
ಹಲವಾರು ಬಾರೀ ಸ್ಥಳೀಯ ಪೋಲೀಸ್ ಅಧಿಕಾರಿಗಳು ಮಟ್ಕಾ ಮತ್ತು ಇಸ್ಪೀಟ್ ದಂಧೆಯನ್ನು ಮಟ್ಟಹಾಕಲು ಮೀನಾ-ಮೇಷ ಎಣಿಸುತ್ತಿದ್ದಾಗ, ನೇರವಾಗಿ ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ರಹಸ್ಯವಾಗಿ ಬಂದು ಮಟ್ಟಾ ದೊರೆಗಳನ್ನು ಬಂಧಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೆ ಆಗಿದೆ. ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಇಲ್ಲಿನ ಸಂಘ-ಸಂಸ್ಥೆಗಳು ಹಲವು ಸಲ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಹಾಗೂ ಮಟ್ಕಾ ಮತ್ತು ಇಸ್ಪೀಟ್ ದಂಧೆಕೋರರ ಜೊತೆ ಕೈ ಜೋಡಿಸಿರುವ ಪೋಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ಇನ್ನಾದರೂ ಜಿಲ್ಲಾ ವರಿಷ್ಠಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.
ಪಾವಗಡದಲ್ಲಿ ನಡೆಯುತ್ತಿರುವ ಮಟ್ಕಾ ದಂಧೆಗೆ ಕಡಿವಾಣವೇ ಇಲ್ಲವೇ, ಇದಕ್ಕೆ ಶಾಶ್ವತ ಪರಿಹಾರ ಸಿಗುವುದಾದರೂ ಎಂದು ಎಂಬ ಪ್ರಶ್ನೆ ನಿಗೂಢವಾಗಿಯೇ ಇದೆ.