ಬೆಂಗಳೂರು : ಮನುಷ್ಯ ತನ್ನ ಬುದ್ದಿಯನ್ನು ಉಪಯೋಗಿಸಿಕೊಂಡು ಪರೋಪಕಾರಿ ಮನೋಭಾವದಿಂದ ಉಪಕಾರದ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡಬೇಕು. ಈ ಮೂಲಕ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಕರೆ ನೀಡಿದರು.
ಶುಕ್ರವಾರ ಸಂಜೆ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯಲ್ಲಿರುವ ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಭೇಟಿ ನೀಡಿ ಅವರು ಅಶೀರ್ವಚನ ನೀಡಿದರು. ಭಗವಂತನಿಂದ ಸೃಷ್ಟಿಯಾಗಿರುವ ಪರಿಸರ, ಭೂಮಿ ಮತ್ತು ನೈಸರ್ಗಿಕ ವಾತಾವರಣವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಭಗವಂತ ಕಲ್ಪಿಸಿರುವ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು ಪರರಿಗೆ ಉಪಕಾರ ಮಾಡುವ ಕಾರ್ಯಗಳನ್ನು ಕೈಗೊಳ್ಳಬೇಕು. ಇದು ಮನುಷ್ಯರನ್ನು ಪ್ರಾಣಿಗಳಿಂದ ಪ್ರತ್ಯೇಕಿಸುವ ವಿಶೇಷ ಗುಣ. ಮನುಷ್ಯ ವ್ಯವಸ್ಥೆಯನ್ನು ಹಾಳು ಮಾಡದೇ ತನ್ನ ಪರಿಧಿಯಲ್ಲಿ ಪರೋಪಕಾರಕ್ಕೆ ಮುಂದಾದರೆ ಬಹಳಷ್ಟು ಸಾಧಿಸುವುದು ಸಾಧ್ಯ ಎಂದು ಹೇಳಿದರು.
ಅದಮ್ಯ ಚೇತನ ಸಂಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದಲ್ಲಿ ಪರಿಸರ ಸಂರಕ್ಷಣೆ, ಹಸಿದವರಿಗೆ ಅನ್ನ ನೀಡುಂತಹ ಪರೋಪಕಾರಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇಂತಹ ಸದಾಶಯದ ಕಾರ್ಯಗಳ ಹಲವಾರು ಬವಣೆಗಳಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಅನುಕೂಲ ಮಾಡಿಕೊಡುತ್ತವೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಆಶೀರ್ವದಿಸಿದರು.
ಈ ಸಂಧರ್ಭದಲ್ಲಿ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್, ಟ್ರಸ್ಟಿಗಳಾದ ಹೆಚ್ ಎನ್ ನಂದಕುಮಾರ್, ಪ್ರದೀಪ್ ಓಕ್, ಹೆಚ್ಎನ್ಎ ಪ್ರಸಾದ್, ಡಾ ಸುಧಾಕರ್ ಪಾಟೀಲ್ ಮತ್ತು ನಿವೃತ್ತ ನ್ಯಾಯಮೂರ್ತಿ ಎನ್ ಕುಮಾರ್ ಸೇರಿದಂತೆ ನೂರಾರು ಸ್ವಯಂ ಸೇವಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.