ತುಮಕೂರು : ಗುಬ್ಬಿ ತಾಲ್ಲೂಕಿನ ತಹಶೀಲ್ದಾರ್‌ರವರಾದ ಶ್ರೀಮತಿ ಆರತಿರವರ ದಿಟ್ಟತನ ಮೆಚ್ಚುವಂತಹದ್ದಾಗಿದೆ, ಏಕೆಂದರೆ ಅವರು ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಗೃಹ ಸಚಿವರ ಮೌಖಿಕ ಆದೇಶವನ್ನೇ ಪಾಲಿಸದ ಗೌರವಯುತ ಅಧಿಕಾರಿಗಳಾಗಿದ್ದಾರೆ.
ಗುಬ್ಬಿ ತಾಲ್ಲೂಕು, ಸಿ.ಎಸ್.ಪುರ ಹೋಬಳಿ, ಹಿಂಡಿಸ್ಕೆರೆ ಕಾವಲ್‌ನ ಸರ್ವೆ ನಂಬರ್ 249ರ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಅಲ್ಪಸಂಖ್ಯಾತರೊಬ್ಬರ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಲೋಪ ದೋಷಗಳು, ನಕಲಿ ದಾಖಲೆಗಳನ್ನು ಸೃಷ್ಠಿಸಿ, ಮೂಲ ಮಾಲೀಕರು/ವಾರಸುದಾರರನ್ನು ಹೊರತುಪಡಿಸಿ, ಇತರರಿಗೆ ಪರಭಾರೆ ಮಾಡಿರುವ ಜಾಗದ ಕುರಿತಂತೆ ವಿವರವಾಗಿ ತಹಶೀಲ್ದಾರ್‌ರವರ ಗಮನಕ್ಕೆ ಈಗಾಗಲೇ ಹಲವಾರು ಭಾರಿ ವಿಷಯ ಮಂಡನೆ ಮಾಡಿದ್ದರೂ ಸಹ ಕ್ಯಾರೇ ಅನ್ನದ ತಹಶೀಲ್ದಾರ್‌ರವರ ಕಾರ್ಯವನ್ನು ಬೇಸತ್ತ ಅಲ್ಪಸಂಖ್ಯಾತರು ಇತ್ತೀಚೆಗೆ ತುಮಕೂರಿಗೆ ಆಗಮಿಸಿದ್ದ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಅರಗ ಜ್ನಾನೇಂದ್ರರವರ ಗಮನಕ್ಕೆ ತರುತ್ತಾರೆ, ಸಚಿವರು ಕೂಲಂಕುಷವಾಗಿ ಮನವಿ ಸ್ವೀಕರಿಸಿ, ಆಲಿಸಿ, ಅಲ್ಲಿ ಲೋಪದೋಷಗಳು, ನಕಲಿ ದಾಖಲೆಗಳು ಸೃಷ್ಠಿಯಾಗಿರುವದನ್ನು ಮನಗಂಡು, ಅಲ್ಲಿಯೇ ಸ್ಥಳದಲ್ಲಿದ್ದ ತಹಶೀಲ್ದಾರ್‌ರವರಿಗೆ ಮೌಖಿಕವಾಗಿ ಲೋಪವೆಸಗಿರುವ ಅಧಿಕಾರಿಗಳಾದ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ನಕಲಿ ದಾಖಲೆ ಸೃಷ್ಠಿಸಲು ಸಹಕರಿಸಿದ ಇತರೆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಕೈಗೊಂಡು ವರದಿ ನೀಡುವಂತೆ ಆದೇಶವನ್ನು ಮಾಡಿರುತ್ತಾರೆ.
ಗೃಹ ಮಂತ್ರಿಗಳ ಸಮ್ಮುಖದಲ್ಲಿ ತಲೆ ಅಲ್ಲಾಡಿಸಿದ ದಿಟ್ಟ ಅಧಿಕಾರಿ ಶ್ರೀಮತಿ ಆರತಿರವರು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ, ತಮ್ಮ ಅಧೀನ ಸಿಬ್ಬಂದಿಯನ್ನು ಬಚಾವ್ ಮಾಡುವ ದುರುದ್ದೇಶದಿಂದ ಯಾವುದೇ ರೀತಿಯಾದ ಕ್ರಮಕ್ಕೆ ಮುಂದಾಗದಿರುವುದನ್ನು ನೋಡಿದರೆ, ಅಮಾಯಕ ಸಾರ್ವಜನಿಕರಿಗೆ ಈ ಕಾಲದಲ್ಲಿ ಬೆಲೆಯೇ ಇಲ್ಲವೇನೋ ಎಂಬಂತಹ ಪರಿಸ್ಥಿತಿ ಬಂದಿದೆ. ಅಲ್ಲದೇ ಈ ಜಾಗದ ಕುರಿತಾಗಿ ಬೇಸತ್ತಿರುವ ಮತ್ತು ಹಲವಾರು ಇಲಾಖೆಗಳು, ಅಧಿಕಾರಿಗಳ ಚೇಂಬರ್‌ಗಳಿಗೆ ಅಲೆದಾಡಿ ಸುಸ್ತಾಗಿರುವ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕುವುದೋ ಇಲ್ಲವೋ ಎಂಬ ಮನೋಭಾವನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ, ಅಲ್ಲದೇ ಇವರಿಗೆ ಇವರುಗಳಿಂದ ಆಗಿರುವ ಅನ್ಯಾಯದಿಂದ ಮಾನಸಿಕ ರೋಗಕ್ಕೆ ತುತ್ತಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು, ಇಂತಹ ವ್ಯವಸ್ಥೆಗೆ ಕಡಿವಾಣ ಬೀಳುವುದಾದರೂ ಎಂದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಅಷ್ಟೇ ಅಲ್ಲದೇ ಗುಬ್ಬಿ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ, ಹಲವಾರು ಸರ್ವೇ ನಂಬರ್‌ಗಳಲ್ಲಿ ಇಂತಹದೇ ಪ್ರಕರಣಗಳು ಇತ್ತೀಚೆಗೆ ಬಯಲಾಗುತ್ತಿದ್ದು, ಹಲವಾರು ಅಧಿಕಾರಿಗಳಿಂದ ನಕಲಿ ದಾಖಲೆಗಳು ಸೃಷ್ಠಿಯಾಗಿದೆ ಎಂಬ ಗುಮಾನಿ ಸಾರ್ವಜನಿಕರಲ್ಲಿ ಮೂಡುತ್ತಿದೆ, ಇಂತಹ ವ್ಯವಸ್ಥೆಗೆ ಕಡಿವಾಣ ಬೀಳುವ ಅಗತ್ಯತೆ ಅವಶ್ಯಕವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮುಂದೆ ಬಂದು ಅಮಯಾಕರ ಜಾಗ, ಜಮೀನು, ನಿವೇಶನ, ಇತ್ಯಾದಿಗಳ ಸಂರಕ್ಷಣೆಯನ್ನು ಮಾಡಬೇಕಾಗಿದೆ ಎಂಬ ಸದುದ್ದೇಶ ನಮ್ಮದಾಗಿದೆ.
ಇನ್ಮುಂದಾದರೂ ಸಚಿವರ, ಶಾಸಕರ, ಜನಪ್ರತಿನಿಧಿಗಳ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಅಧಿಕಾರಿಗಳು ಕೆಲಸ ನಿರ್ವಹಿಸಬೇಕಾಗಿದೆ.