ಭ್ರಷ್ಠಾಚಾರದ ಆಲದ ಮರವಾಗಿರುವ ತುಮಕೂರು ಜಿಲ್ಲಾಆಸ್ಪತ್ರೆ !

ತುಮಕೂರು ಜಿಲ್ಲಾ ಆಸ್ಪತ್ರೆಯ ಬ್ರಹ್ಮಾಂಡ ಬ್ರಷ್ಟಾಚಾರದ ಮುಂದುವರೆದ ಭಾಗವಾಗಿ, ಇಂದು ನಿಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡಲು ಪ್ರಯತ್ನಿಸುತ್ತಿದ್ದೇವೆ.

 

ತುಮಕೂರು ಜಿಲ್ಲಾಆಸ್ಪತ್ರೆಗೆ ರೋಗಿಗಳು ನಾನಾ ಮೂಲೆಗಳಿಂದ ತಮ್ಮ ರೋಗ ನಿವಾರಣೆಗಾಗಿ ಬರುವುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ, ಅದನ್ನೇ ಬಂಡವಳವನ್ನಾಗಿ ಮಾಡಿಕೊಂಡಿರುವ ಕೆಲವರು, ಇಲ್ಲಿಗೆ ಆಗಮಿಸುವವರಿಂದ ಇಂತಿಷ್ಟು (ಒಂದೊಂದು ರೋಗಕ್ಕೆ ಒಂದೊಂದು ರೇಟ್) ಹಣವನ್ನು ಪೀಕುತ್ತಾ ಅಂದರೆ ಲಂಚದ ರೂಪದಲ್ಲಿ ವಸೂಲಿ ಮಾಡುತ್ತಾ, ಅವರುಗಳಿಗೆ ಚಿಕಿತ್ಸೆಯನ್ನು ನೀಡುತ್ತಿರುವುದು ಈಗೀಗ ಬೆಳಕಿಗೆ ಬರುತ್ತಿದೆ.

 

ಚಿಕಿತ್ಸೆಗಾಗಿ ಬರುವವರು ಸರಿಯಾಗಿ ಹಣವನ್ನು ಪಾವತಿಸದೇ ಹೋದರೆ, ಅವರಿಗೆ ಸರಿಯಾದ ಚಿಕಿತ್ಸೆಯಾಗಲೀ, ಮಾತನಾಡಿಸುವುದಾಗಲೀ, ಅವರಿಗೆ ಆಗಿರುವ ತೊಂದರೆ ಏನು ಎಂಬುದನ್ನೂ ಸಹ ಸರಿಯಾಗಿ ವಿಚಾರಿಸದೇ ಅವರುಗಳನ್ನು ಹೀನಾಯವಾಗಿ ಕಾಣುವ ಪರಿಸ್ಥಿತಿ ಕಾಣ ತೊಡಗುತ್ತದೆ. ಅದೂ ಅಲ್ಲದೇ ಕೆಲ ರೋಗಿಗಳು ಇಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ವಾರ್ಡನಲ್ಲಿರುವಾಗ ಅವರುಗಳು ಇದ್ದ ಜಾಗವನ್ನು ಸ್ವಚ್ಛ ಮಾಡಲೂ ಸಹ ಹಣವನ್ನು ಪೀಕುವುದು ಸರ್ವೇ ಸಾಮಾನ್ಯವಾಗಿದೆ. ಅಂದರೆ ಈ ಜಿಲ್ಲಾ ಆಸ್ಪತ್ರೆ ಹಣದಾಹಿಗಳ ಆಸ್ಪತ್ರೆಯಾಗಿದೆಯೇ ಹೊರತು, ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿಲ್ಲವೆಂಬುದು ಕಟು ಸತ್ಯವಾಗಿದೆ!

ಇನ್ನು ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕೆಲವರು ಬೇಕೆಂತಲ್ಲೇ ಡ್ಯೂಟಿಗೆ ಹಾಕಿಸಿಕೊಳ್ಳುವ ಚಾಡಿ ರೂಢಿಯಾಗಿದೆ ಎಂಬ ಮಾತೂ ಇದೆ, ಏಕೆಂದರೆ ಶಸ್ತ್ರಚಿಕಿತ್ಸಾ ಘಟಕವೇ ಇಲ್ಲಿ ಪ್ರಮುಖ ಕಂದಾಯ ವಸೂಲಿ ಘಟಕವಾಗಿದೆ ಎಂಬುದು ಜನರ ಅಭಿಪ್ರಾಯವಾಗಿದೆ.

 

ಜನರು ಸರ್ಕಾರಿ ಆಸ್ಪತ್ರೆಗೆ ಉಚಿತ ಚಿಕಿತ್ಸೆಗಾಗಿ ಬರುವುದು ವಾಡಿಕೆಯಾಗಿತ್ತು, ಆದರೆ ಇಂತಹ ಕೆಲ ಕ್ರಿಮಿಗಳ ಅವ್ಯವಸ್ಥೆಯಿಂದಾಗಿ ಖಾಸಗಿ ಆಸ್ಪತ್ರೆಗೆ ಹೋಲಿಸಿದರೆ ಸರ್ಕಾರಿ ಆಸ್ಪತ್ರೆಯಲ್ಲಿ ಶೇ. 50% ರಷ್ಟು ಹಣ ಪಾವತಿಸದಲ್ಲಿ ತಮಗೆ ಚಿಕಿತ್ಸೆ ಸಿಗುತ್ತದೆಂದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರಲ್ಲದೇ, ಕೊಂಚ ಖರ್ಚಿನಲ್ಲಿ ತಾವು ಗುಣಮುಖರಾದವೆಲ್ಲಾ ಎಂದು ನಿಟ್ಟುಸಿರು ಬಿಟ್ಟು ಹೋಗುತ್ತಿದ್ದಾರೆ.

 

ಸರ್ಕಾರ ಮಾಡಿರುವ ಕಠಿಣ ಕಾನೂನಿನಿಂದಾಗಿ ಯಾವೊಬ್ಬ ವೈದ್ಯರ ಮೇಲಾಗಲೀ, ಶುಶ್ರೂಷಕರ ಮೇಲಾಗಲೀ ಹಲ್ಲೇ, ಇತ್ಯಾದಿ ದೌರ್ಜನ್ಯಗಳನ್ನು ಮಾಡಬಾರದೆಂಬ ಆದೇಶದಿಂದಾಗಿ ಜನರು ಈ ಅವ್ಯವಸ್ಥೆಯನ್ನು ಬೇಜಾರು ಮಾಡಿಕೊಂಡು, ಇವರುಗಳ ಮೇಲೆ ಹಿಡಿ ಶಾಪ ಹಾಕುತ್ತಾ ತಮ್ಮ ಚಿಕಿತ್ಸೆಯನ್ನು ಪಡೆಯುತ್ತಿರುವುದು ಕಣ್ಣಿಗೆ ಕಾಣುವ ನಿಜ ಸತ್ಯವಾಗಿದೆ.

 

ಇದಕ್ಕೆಲ್ಲಾ ಪುಷ್ಠಿ ನೀಡುವಂತೆ ನಮ್ಮ ತಂಡದಿಂದ ಒಂದು ಸ್ಟಿಂಗ್‌ ಆಪರೇಷನ್‌ ಮಾಡಿ ಒಬ್ಬ ಅಮಾಯಕ ಹೆಣ್ಣು ಮಗಳಿಗೆ ಆಗಿರುವ ಅನ್ಯಾಯವನ್ನು ಈ ವಿಡಿಯೋ ಮುಖೇನ ಬಿಚ್ಚಿಡಲಾಗಿದೆ.

 

https://youtu.be/w0nnDmZWsKo

 

ಇದಕ್ಕೆ ಸಂಬಂಧಪಟ್ಟಂತೆ ತುಮಕೂರು ಗ್ರಾಮಾಂತರ ಮೂಲದ ಮಹಿಳೆಯೊಬ್ಬರು ಸಣ್ಣ ಶಸ್ತ್ರಚಿಕಿತ್ಸೆಗೆ ಆಗಮಿಸಿದ್ದು, ಅವರಿಂದ ಐದು ಸಾವಿರ ಹಣಕ್ಕೆ ಬೇಡಿಕೆ ಇಟ್ಟು, ನಂತರ ಒಂದು ಸಾವಿರ ಪಡೆದು ಶಸ್ತ್ರಚಿಕಿತ್ಸೆ ಮಾಡಿ, ಅವರಿಂದ ಪಡೆದ ಹಣವನ್ನು ವೈದ್ಯರು ಹಾಗೂ ಶುಶ್ರೂಷಕರು ಹಂಚಿಕೊಂಡಿರುವುದಾಗಿ ಸ್ವತಃ ಆಸ್ಪತ್ರೆಯ ಶುಶ್ರೂಷಿಕೆಯೇ ಒಪ್ಪಿಕೊಂಡಿರುವ ದೃಶ್ಯ ಈ ವಿಡಿಯೋದಲ್ಲಿ ಕಾಣ ಸಿಗುತ್ತದೆ.

 

https://youtu.be/28MHmEG_BMo

 

ಮುಂದುವರೆದ ಭಾಗವಾಗಿ ಆಕೆ ವೈದ್ಯರ ಆದೇಶದ ಮೇರೆಗೇ ಪಡೆದಿರುವುದಾಗಿಯೂ ಹೇಳಿಕೊಂಡಿರುತ್ತಾಳೆ. ಇದೆಲ್ಲಾ ಗಮನಿಸಿದರೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರುಗಳು ಶುಶ್ರೂಷಕರು, ಸಿಬ್ಬಂದಿ ಹಾಗೂ ಇತರರ ಮುಖೇನ ಲಂಚ (ಹಣ) ಪೀಕುತ್ತಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದ್ದು, ಇನ್ನೂ ಅಲ್ಲಿಗೆ ಆಗಮಿಸುವ ಇತರೆ ಶುಶ್ರೂಷಕರು ಸಹ ನಾವು ಪಡೆಯುತ್ತಿರುವುದು ತೃಣ ಮಾತ್ರದ್ದು, ಬೇರೆಯವರು ಬೇರೆ ರೀತಿಯಲ್ಲಿ ಬಹು ದೊಡ್ಡ ಮಟ್ಟದಲ್ಲೇ ಪೀಕುತ್ತಿದ್ದಾರೆ, ಮೊದಲು ಅವರುಗಳನ್ನು ಹೋಗಿ ನೋಡಿ ಎನ್ನುವ ಮಾತುಗಳು ಕೇಳಿ ಬಂದಿದ್ದು, ಸಿಬ್ಬಂದಿಗಳ ಹೇಳುವ ರೀತಿಯಲ್ಲಿ ಇಂತಹ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಮಾಮೂಲಿಯಾಗಿದ್ದು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂಬ ಮಾತುಗಳನ್ನು ಆಡುತ್ತಿದ್ದಾರೆ, ಇದನ್ನೆಲ್ಲಾ ಗಮನಿಸಿದರೆ, ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಭ್ರಷ್ಠಾಚಾರ ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದು ಜನರೇ ಅರಿಯಬೇಕಾಗಿದೆ.

 

ಹಾಲಿ ಇರುವ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಶ್ರೀ ವೀರಭದ್ರಯ್ಯರವರ ಪರಿಶ್ರಮದಿಂದಾಗಿ ನಮ್ಮ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಾಯಕಲ್ಪ ಆಸ್ಪತ್ರೆಯೆಂಬ ಬಿರುದನ್ನು ತಂದು ಕೊಡುವಲ್ಲಿ ಯಶಸ್ವಿಯಾಗಿದ್ದರು, ಹಾಲಿ ಅವರೇ ಜಿಲ್ಲಾ ಶಸ್ತ್ರಚಿಕಿತ್ಸಕರ ಸ್ಥಾನದಲ್ಲಿರುವ ಶ್ರೀಯುತರಿಗೆ ಈ ಎಲ್ಲಾ ವಿಚಾರಗಳು ತಿಳಿದಿದೆಯೋ? ಇಲ್ಲವೋ ಎಂಬುದೇ ನಿಗೂಢವಾಗಿದೆ!!!!! ಇಷ್ಟೇಲ್ಲಾ ಅವ್ಯವಸ್ಥೆಯ ಗೂಡಾಗಿರುವ ಈ ಆಸ್ಪತ್ರೆಗೆ ಸರ್ಜರಿ ಮಾಡುವ ವೈದ್ಯರು, ಶುಶ್ರೂಷಕರು ಬಂದು ಈ ಅವ್ಯವಸ್ಥೆಯನ್ನು ವ್ಯವಸ್ಥಿತವಾಗಿ ರೂಪಿಸಬೇಕಾಗಿರುವ ಕೆಲಸ ಆಗಬೇಕಾಗಿದೆ.

 

ಸರ್ಕಾರಿ ಆಸ್ಪತ್ರೆಗೆ ಬರುವ ಜನರಿಗೆ ಉಚಿತ ಆರೋಗ್ಯ ನೀಡುವ ಸಂಕಲ್ಪವಾಗಬೇಕೇ ಹೊರತು, ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯ ನೀಡುವಂತಹ ಆಸ್ಪತ್ರೆಯಾಗಬಾರದು ಎಂಬುದೇ ನಮ್ಮ ಸಂಕಲ್ಪವಾಗಿದೆ.

Leave a Reply

Your email address will not be published. Required fields are marked *

error: Content is protected !!