ಮೂರುವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ಅಕ್ಷಯ ತೃತೀಯದಲ್ಲಿ ಎಳ್ಳು ತರ್ಪಣೆ ನೀಡುವುದು, ಉದಕ ಕುಂಭದಾನ, ಮೃತ್ತಿಕಾ ಪೂಜೆ ಮಾಡುವುದು, ಅದೇ ರೀತಿ ದಾನ ನೀಡುವ ಪರಂಪರೆ ಇದೆ.ಇದರ ಹಿನ್ನೆಲೆಯ ಶಾಸ್ತ್ರವನ್ನು ನಾವು ತಿಳಿದುಕೊಳ್ಳೋಣ. ಪ್ರಸ್ತುತ ಲೇಖನದಲ್ಲಿ ಹೇಳಲಾದ ಅಧ್ಯಾತ್ಮಶಾಸ್ತ್ರವು, ಸರ್ವಸಾಮಾನ್ಯ ಕಾಲದಲ್ಲಿ ಪಾಲಿಸಬೇಕಾದ ಧರ್ಮದಲ್ಲಿ ಹೇಳಲಾದಶಾಸ್ತ್ರವಾಗಿದೆ.

ತಿಥಿ : ವೈಶಾಖ ಶುಕ್ಲ ತೃತೀಯಾ
ಮಹತ್ವ :
ಅಸ್ಯಾಂ ತಿಥೌ ಕ್ಷಯಮುರ್ಪತಿ ಹುತಂ ನ ದತ್ತಂ |
ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ |
ಉದ್ದಿಶ್ಯ ದೈವತಪಿತೃನ್ಕ್ರಿಯತೇ ಮನುಷ್ಯೈಃ |
ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ || – ಮದನರತ್ನ
ಅರ್ಥ : (ಶ್ರೀಕೃಷ್ಣನು ಹೇಳುತ್ತಾನೆ) ಎಲೈ ಯುಧಿಷ್ಠಿರನೇ, ಈ ತಿಥಿಗೆ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ; ಆದುದರಿಂದ ಋಷಿಗಳು ಇದನ್ನು ‘ಅಕ್ಷಯ ತೃತೀಯಾ’ ಎಂದಿದ್ದಾರೆ. ಈ ತಿಥಿಯಂದು ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಕೃತಿಯು ಅಕ್ಷಯ (ಅವಿನಾಶೀ)ವಾಗುತ್ತದೆ. ಕೆಲವರ ಅಭಿಪ್ರಾಯದಂತೆ ಅಕ್ಷಯ ತೃತೀಯಾ ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾಗಿದೆ.
ಅಕ್ಷಯ ತೃತೀಯಾದಂದು ಇಡೀ ದಿನ ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.ಈ ದಿನದಂದು ಹಯಗ್ರೀವ ಅವತಾರ, ನರನಾರಾಯಣ ಪ್ರಕಟೀಕರಣ ಮತ್ತು ಪರಶುರಾಮನ ಅವತಾರವಾಗಿದೆ.ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ. ಆದುದರಿಂದ ಪೃಥ್ವಿಯ ಮೇಲಿನ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮಕಾರ್ಯಗಳನ್ನು ಮಾಡಿದರೆ ಅವುಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂ ಅಕ್ಷಯ (ಅವಿನಾಶಿ) ವಾಗುತ್ತವೆ.

ಹಬ್ಬವನ್ನು ಆಚರಿಸುವ ಪದ್ಧತಿ :
*೧. ಸ್ನಾನದಾನಾದಿ ಧರ್ಮಕಾರ್ಯಗಳು :* ಕಾಲವಿಭಾಗದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ; ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು. ದಾನವು ‘ಸತ್ಪಾತ್ರೇ ದಾನ’ವಾಗಿರಬೇಕು. ಸಂತರಿಗೆ ಅಥವಾ ಸಮಾಜದಲ್ಲಿ ಧರ್ಮಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮಾಡಿದ ದಾನವು ‘ಸತ್ಪಾತ್ರೇ ದಾನ’ವಾಗಿದೆ. ಸತ್ಪಾತ್ರೇ ದಾನವನ್ನು ಮಾಡುವುದರಿಂದ ದಾನದ ಕರ್ಮವು ಅಕರ್ಮಕರ್ಮವಾಗುತ್ತದೆ. ಅಕರ್ಮಕರ್ಮವೆಂದರೆ ಪಾಪ-ಪುಣ್ಯಗಳ ಲೆಕ್ಕಾಚಾರವು ತಗಲದಿರುವುದು. ಇದರಿಂದ ದಾನವನ್ನು ನೀಡುವವನು ಯಾವುದೇ ಬಂಧನದಲ್ಲಿ ಸಿಲುಕದೇ, ಅವನ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುತ್ತದೆ.
ಅಕ್ಷಯ ತದಿಗೆಯ ದಿನ ದಾನ ಮಾಡುವುದರಿಂದ ಏನು ಲಾಭವಾಗುತ್ತದೆ ?
ದಾನ ಮಾಡುವುದರಿಂದ ಪುಣ್ಯವು ಸಿಗುತ್ತದೆ. ಅಕ್ಷಯ ತದಿಗೆಯ ದಿನ ಮಾಡಿದ ದಾನವು ಯಾವಾಗಲೂ ಕ್ಷಯವಾಗುವುದಿಲ್ಲ. ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿಯಾಗಬಹುದು. ಸಾಧಕರಿಗೆ ಪುಣ್ಯವನ್ನು ಪ್ರಾಪ್ತಿಮಾಡಿಕೊಂಡು ಸ್ವರ್ಗಪ್ರಾಪ್ತಿ ಮಾಡಿಕೊಳ್ಳುವುದಿರುವುದಿಲ್ಲ, ಸಾಧಕರಿಗೆ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಿರುತ್ತದೆ. ಆದುದರಿಂದ ಸಾಧಕರು ಸತ್ಪಾತ್ರರಿಗೆ ದಾನ ಮಾಡಬೇಕು. ಎಲ್ಲಿ ಅಧ್ಯಾತ್ಮದ ಪ್ರಸಾರದ ಜೊತೆಗೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡಲಾಗುತ್ತದೆಯೋ, ಇಂತಹ ಸತ್ಕಾರ್ಯಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನ. ಸತ್ಪಾತ್ರರಿಗೆ ದಾನ ಮಾಡುವುದರಿಂದ ದಾನ ಮಾಡುವವನಿಗೆ ಪುಣ್ಯವು ಸಿಗದೆ ದಾನದ ಕರ್ಮವು ಅಕರ್ಮ ಕರ್ಮವಾಗುತ್ತದೆ. ಇದರಿಂದ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದರಿಂದ ಸಾಧಕನು ಸ್ವರ್ಗಲೋಕಕ್ಕೆ ಹೋಗದೆ ಉಚ್ಚಲೋಕಕ್ಕೆ ಹೋಗುತ್ತಾನೆ.
ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ ?
ಪೂರ್ವಜರಿಗೆ ಗತಿ ಸಿಗುವುದರ ಮಹತ್ವ : ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭುವರ್ಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭುವರ್ಲೋಕದಲ್ಲಿರುವ ಬಹುತೇಕ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.

ಎಳ್ಳು ತರ್ಪಣೆ ಮಾಡುವ ಪದ್ಧತಿ : ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು.
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ – ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)
ಸಂಗ್ರಹ
ಶ್ರೀ. ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ (ಸಂಪರ್ಕ : 9342599299)