ತುಮಕೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ವಿದ್ಯುತ್ ಕಡಿತಗೊಳಿಸುತ್ತಿದ್ದು ಇದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಅತಿಯಾದ ಲೋಡ್ ಶೆಡ್ಡಿಂಗ್ನಿಂದ ಅನಿಯಮಿತ ವಿದ್ಯುತ್ ಕಡಿತದಿಂದ ಜನಸಾಮಾನ್ಯರು ಕರೆಂಟ್ಶಾಕ್ ಗೆ ಒಳಗಾಗಿದ್ದಾರೆ. ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕೆಂದು ಡಾ. ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.
ಪಿ.ಯು.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹಾಗೂ ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗೆ ತಾಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೊಂದರೆಯಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗವುದಿಲ್ಲ. ಯಾವುದೇ ಕಾರಣ ಸಂಜೆಯಿಂದ ಬೆಳಗ್ಗಿನ ವರೆಗೂ ವಿದ್ಯುತ್ ಕಡಿತಗೊಳಿಸಬಾರದು ಎಂದು ಡಾ.ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ.
ವಿದ್ಯುತ್ ಆಧುನಿಕ ಬದುಕಿನ ಅವಿಭಾಜ್ಯ ಅಂಗವಷ್ಟೇ ಅಲ್ಲದೆ ಉತ್ಪಾದನೆಯ ಬಹುಮುಖ್ಯ ಶಕ್ತಿಯಾಗಿದೆ. ಇದರಿಂದ ಕಾರ್ಮಿಕರು, ರೈತರು, ಮತ್ತು ಇನ್ನಿತರ ಉದ್ಯಮಗಳು ವಿದ್ಯುತ್ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದ್ದು, ವಿದ್ಯುತ್ ಕಡಿತದಿಂದ ಬಹಳ ಸಮಸ್ಯೆ ಎದುರಿಸುವಂತಾಗಿದೆ. ಬಿಸಿಲಿನ ತಾಪ ಮತ್ತು ವಿದ್ಯುತ್ ಕ್ಷಾಮಕ್ಕೆ ಜನತೆ ಹೈರಾಣಾಗಿದ್ದಾರೆ. ವಿದ್ಯುತ್ ಬಳಕೆ ದಿನೇ ದಿನೇ ಹೆಚ್ಚುತ್ತಿದ್ದು ಉತ್ಪಾದನಾ ಪ್ರಮಾಣವನ್ನೂ ಹೆಚ್ಚಿಸಿ ವಿದ್ಯುತ್ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಮಾಜಿ ಶಾಸಕರು ಇಂಧನ ಇಲಾಖೆ ಸಚಿವರಿಗೆ ತಿಳಿಸಿದ್ದಾರೆ.