ಬಹು ನಿರೀಕ್ಷಿತ ಜೇಮ್ಸ್ ಸಿನಿಮಾ ಇದೇ ತಿಂಗಳ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆ ಕಂಡಿದೆ. ಇದು ಬರೀ ಸಿನಿಮಾವಾಗಿ ಎಲ್ಲರನ್ನು ಕಾಡಿಲ್ಲ, ಅಪ್ಪು ಅಭಿಮಾನಿಗಳನ್ನು ಭಾವಾನಾತ್ಮಕವಾಗಿ ಹಿಡಿದಿಟ್ಟುಕೊಂಡಿದೆ. ಹೀಗಾಗಿ ಈ ಸಿನಿಮಾದ ರಿವ್ಯೂ ಕೊಡೋದು ಸ್ವಲ್ಪ ಕಷ್ಟವೇ. ಆದರೂ ಸಿನಿಮಾ ರೀತಿ ನೋಡಿದ್ರೆ ಒಂದಷ್ಟು ಪ್ಲಸ್ ಮತ್ತು ಮೈನಸ್ಗಳು ಸಿನಿಮಾದಲ್ಲಿ ಕಾಣಿಸುತ್ತದೆ.
ಸಿನಿಮಾದ ಕಥೆ ಶುರುವಾಗೋದು ಮಾದಕ ವಸ್ತುವಿನ ಮಾಯಾಜಾಲದ ಮೂಲಕ. ಸಿನಿಮಾ ನೋಡೋದಕ್ಕೂ ಮುನ್ನ ಅಪ್ಪು ಅವರನ್ನ ನಾವೂ ಮಿಲಿಟರಿ ಅವತಾರದಲ್ಲೂ ಕಣ್ಣು ತುಂಬಿಕೊಂಡಿದ್ದೆವು. ಈ ಸಿನಿಮಾದಲ್ಲು ಅಪ್ಪು ಮಿಲಿಟರಿಯಲ್ಲಿ ಇರ್ತಾರೆ ಅನ್ನೋ ನಿರೀಕ್ಷೆ ಬಹಳ ಇತ್ತು. ಆದ್ರೆ ಆರಂಭದಲ್ಲಿ ನಮಗೆ ಕಂಡಿದ್ದೇ ಬೇರೆಯದ್ದಾಗಿತ್ತು. ಅಪ್ಪು ದುಷ್ಟರ ವಿರುದ್ಧ ಹೋರಾಡುವ ಹೀರೋಗಿಂತ, ಅದೇ ದುಷ್ಟರ ಸಪೋರ್ಟ್ಗೆ ನಿಂತಾಗ ಕೊಂಚ ಗೊಂದಲ ಆಗಿದ್ದಂತು ಸತ್ಯ.. ಈ ಗೊಂದಲ ಏನು ಎಂಬುದನ್ನ ತಿಳಿಬೇಕು ಅಂದ್ರೆ ನೀವೂ ಕೂಡ ಒಮ್ಮೆ ಸಿನಿಮಾ ನೋಡಲೇಬೇಕಾಗುತ್ತದೆ.
ಸಿನಿಮಾದಲ್ಲಿ ಅಭಿಮಾನಿಗಳ ನಿರೀಕ್ಷೆ ಹುಸಿ ಮಾಡದಂತೆ ಅಪ್ಪು ಎಂಟ್ರಿಯನ್ನ ಮೈ ಜುಮ್ಮೆನಿಸುವ ಅಂತೆ ಅದ್ದೂರಿಯಾಗಿ ತೋರಿಸಿದ್ದಾರೆ. ಕಾರು ಚೇಸಿಂಗ್ ಮೂಲಕ ಪವರ್ ಸ್ಟಾರ್ ಡಾ|| ಪುನೀತ್ ರಾಜಕುಮಾರ್ ಅವರನ್ನ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಇಡೀ ಸಿನಿಮಾ ಎಲ್ಲರನ್ನು ಭಾವುಕತೆಯಿಂದಲೇ ಕಟ್ಟಿ ಹಾಕುತ್ತೆ. ಸಿನಿಮಾದಲ್ಲಿ ಅಂತ ಫೀಲಿಂಗ್ಸ್ ಇಲ್ಲದೆ ಹೋದರು ಅಪ್ಪು ಡ್ಯಾನ್ಸ್, ಅಪ್ಪು ಸ್ಟಂಟ್ಸ್, ಅಪ್ಪು ರವರ ನಟನೆ ನೋಡಿ ಸಿನಿಪ್ರೇಮಿಗಳು ಕಣ್ಣೀರು ಹಾಕುವುದರಲ್ಲಿ ಡೌಟೇ ಇಲ್ಲ. ಇಡೀ ಸಿನಿಮಾ ಮೂಲಕ ಅಪ್ಪು ಪ್ರತಿಯೊಬ್ಬರನ್ನು ಆವರಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಜೇಮ್ಸ್ ಅನ್ನೋ ಸೆಕ್ಯುರಿಟಿ ಏಜೆನ್ಸಿ ಕೆಲಸ ಮಾಡ್ತಾ ಇರುತ್ತೆ. ಆ ಏಜೆನ್ಸಿಯಲ್ಲಿ ಇರುವಂತ ಪವರ್ ಫುಲ್ ಪರ್ಸನ್ ಅದು ಪುನೀತ್ ರಾಜ್ಕುಮಾರ್. ರೇಸ್ಗೆ ನಿಂತ್ರೆ ಎದುರಾಳಿಗಳು ಉಡೀಸ್. ಒನ್ ಮ್ಯಾನ್ ಶೋ ಅಂತಾರಲ್ಲ ಆ ಪವರ್ ಫುಲ್ ತಾಕತ್ತನ್ನ ಅಪ್ಪು ತೋರಿಸಿದ್ದಾರೆ. ಇಡೀ ಸಿನಿಮಾದಲ್ಲಿ ಫೈಟ್ ದೊಡ್ಡ ಹೈಲೇಟ್ ಆಗಿದೆ. ದುಷ್ಟರಿಗೆ ರಕ್ಷಣೆ ಕೊಡುವ ಸಂತೋಷ್ ಅಲಿಯಾಸ್ ಅಪ್ಪು ಇಂಟರ್ವಲ್ ಮುಗಿದ ಬಳಿಕ ಅದೇ ವೈರಿಗಳಿಗೆ ಮೇಜರ್ ಸಂತೋಷ್ ಆಗಿ ಕಾಡುತ್ತಾರೆ. ಭಯ ಅನ್ನೋದು ಏನು ಅನ್ನೋದನ್ನ ತೋರಿಸುತ್ತಾರೆ. ಫಸ್ಟ್ ಆಫ್ನಲ್ಲಿ ಸಂಪೂರ್ಣವಾಗಿ ಫೈಟ್, ಡ್ಯಾನ್ಸ್ ಮೂಲಕವೇ ಅಪ್ಪು ಇಷ್ಟವಾಗ್ತಾರೆ.
ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಗೆಳೆಯರು ಮುಖ್ಯ ಎನ್ನುವುದು ಈ ಸಿನಿಮಾದಲ್ಲಿ ಅಡಗಿರುವ ಉದ್ದೇಶ. ಹೀಗಾಗಿಯೇ ಪುನೀತ್ ರಾಜ್ಕುಮಾರ್ ದುಷ್ಟರ ಸಂಘ ಸೇರೋದು. ಅಲ್ಲಿ ನಿಶಾ ಗಾಯಕವಾಡ್ (ಪ್ರಿಯಾ ಆನಂದ್) ಜೊತೆಗೆ ಸಂತೋಷ್ (ಪುನೀತ್ ರಾಜ್ಕುಮಾರ್) ಲವ್ ಆಗುತ್ತೆ. ಆದ್ರೆ ಈ ಪ್ರೀತಿ ಸರಿಯಾದ ಟ್ರ್ಯಾಕ್ಗೆ ಬರಲ್ಲ. ಇಲ್ಲಿ ಕೊಂಚ ನಿರ್ದೇಶಕರು ಎಡವಿದ್ದಾರೆ ಅನ್ಸುತ್ತೆ. ಕಥೆ ಚಿತ್ರಕಥೆಯಲ್ಲಿ ಇಂಪ್ರೂಮೈಸ್ ಮಾಡಿಕೊಳ್ಳಬಹುದಿತ್ತು. ಪವರ್ ಸ್ಟಾರ್ ಎಂಬ ಬಿಗ್ ಸ್ಟಾರ್, ಅವರಿಗಿರುವ ನಟನಾ ಕೌಶಲ್ಯ ಇಲ್ಲಿ ಪ್ಲಸ್ ಪಾಯಿಂಟ್ ಆಗಿದೆ.
ಇನ್ನು ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ಗಳ ದಂಡೇ ಇದೆ. ರಂಗಾಯಣ ರಘು, ಅನುಪ್ರಭಾಕರ್, ಸಾಧುಕೋಕಿಲ, ಕಾಮಿಡಿ ಕಿಲಾಡಿಗಳು ನಯನಾ, ಕಾವ್ಯಶ್ರಿ, , ಸಮೀಕ್ಷಾ ಹೀಗೆ ಸಾಕಷ್ಟು ಜನ ಕಲಾವಿದರಿದ್ದಾರೆ. ತಿಲಕ್, ಚಿಕ್ಕಣ್ಣ, ಹರ್ಷ, ಶೈನ್ ಶೆಟ್ಟಿ ಪುನೀತ್ ಅವರ ಸ್ನೇಹಿತರಾಗಿರುತ್ತಾರೆ. ಶರತ್ ಕುಮಾರ್, ಶ್ರೀಕಾಂತ್, ಮುಕೇಶ್ ರಿಷಿ, ಆದಿತ್ಯ ಮೆನನ್ ಸೇರಿದಂತೆ ವಿಲನ್ಗಳೇ ತುಂಬಿ ಹೋಗಿದ್ದಾರೆ. ಇಷ್ಟೊಂದು ಜನ ವಿಲನ್ ಬೇಕಿತ್ತಾ ಎಂಬ ಗೊಂದಲ ಬಾರದೆ ಇರದು.
ಇನ್ನು ಅಭಿಮಾನಿಗಳ ಆಸೆಯಂತೆ ಅಣ್ಣತಮ್ಮಂದಿರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವೇಂದ್ರ ರಾಜಕುಮಾರ್ ಸರಿ ಹೋಗಿ ಬನ್ನಿ ಅನ್ನೋ ಡೈಲಾಗಷ್ಟೇ ಸೀಮಿತರಾಗಿದ್ದಾರೆ. ಶಿವರಾಜ್ಕುಮಾರ್ ಐದು ನಿಮಿಷ ಕಾಣಿಸಿಕೊಳ್ಳುವುದು ಹೆಚ್ಚು.
ಸಿನಿಮಾದಲ್ಲಿ ಹೆಚ್ಚು ಪ್ಲಸ್ ಪಾಯಿಂಟ್ ಆಗಿದ್ದು ಅಂದ್ರೆ ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಮತ್ತು ರವಿ ವರ್ಮಾ ಅವರ ಸಾಹಸ ದೃಶ್ಯಗಳು ಎಲ್ಲರನ್ನ ರೋಮಾಂಚನಗೊಳಿಸುತ್ತದೆ. ಜೊತೆಗೆ ಸ್ವಾಮಿ ಗೌಡ ಅವರ ಉತ್ತಮ ಛಾಯಾಗ್ರಹಣ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ.