ತುಮಕೂರು: ಓಯಸೀಸ್ ಫೌಂಡೇಶನ್, ಮೈಸೂರು ಹಾಗೂ ಬೆಂಗಳೂರಿನ ಹ್ಯಾಂಡ್ಸ್ ಆನ್ ಸಿಎಸ್‌ಆರ್ ಸಂಸ್ಥೆಯವರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಇಂಜಿನಿಯರಿಂಗ್‌ನ ಹದಿನಾಲ್ಕು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿದರು.
ನಗರದ ಇಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆದ ಉಚಿತ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಗ್ರಾಮಿಣ ಭಾಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕವಾಗಿ ಅಗತ್ಯವಿರುವ ಲ್ಯಾಪ್‌ಟಾಪ್‌ನ್ನು ಓಯಸೀಸ್ ಫೌಂಡೇಶನ್‌ನ ದೊರೈಸ್ವಾಮಿ ಹಾಗೂ ಹ್ಯಾಂಡ್ಸ್ ಆನ್ ಸಿಎಸ್‌ಆರ್ ಸಂಸ್ಥೆಯ ಗುರುನಂದನ್ ಕಾರ್ಯವನ್ನು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ ಶ್ಲಾಘಿಸಿದರು.
ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ, ಓಯಸೀಸ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕರಾದ ಸಿ ದೊರೈಸ್ವಾಮಿ, ವಿದ್ಯಾರ್ಥಿಗಳು ಸಮಾಜದ ಪ್ರತಿಬಿಂಬವಾಗಿದ್ದು, ಅವರ ಜ್ಞಾನಭಿವೃದ್ಧಿಗೆ ಬೇಕಾದ ಸಲಕರಣೆಗಳ ಒದಗಿಸುವುದು ಸಮಾಜ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿದೆ, ಈ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮಿಣ ಭಾಗದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಓಯಸೀಸ್ ಸಂಸ್ಥೆ ಮೂಲಕ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಕಾರ್ಯಗಳು, ಲ್ಯಾಬ್, ಯೋಜನಾ ಕಾರ್ಯಗಳಲ್ಲಿ ಲ್ಯಾಪ್‌ಟಾಪ್ ಬಳಗೆ ಹೆಚ್ಚಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗುತ್ತಿದೆ ಎಂದರು.
ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿಗಳನ್ನು ಅಕ್ಷರಸ್ಥರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಧ್ಯೇಯವಾಕ್ಯದೊಂದಿಗೆ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿ?ವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದು ಹ್ಯಾಂಡ್ಸ್ ಆನ್ ಸಿಎಸ್‌ಆರ್ ಸಂಸ್ಥೆಯ ಸಂಸ್ಥಾಪಕರಾದ ಗುರುನಂದನ್ ರಾವ್ ಎಂ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಡೀನ್ (ಪರೀಕ್ಷಾಂಗ) ಡಾ. ಕೆ.ಕರುಣಾಕರ್, ಡೀನ್ ಡಾ.ಎಂ.ಸಿದ್ದಪ್ಪ, ಡಾ.ಸಂಜೀವ್ ಕುಮಾರ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.