ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಟಾನಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ : ಜಿ.ಪಂ. ಸಿಇಓ

ತುಮಕೂರು : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಸಮರ್ಪಕವಾಗಿ ಅನುಷ್ಟಾನಗೊಳ್ಳಲು ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವ ಅಗತ್ಯ ಎಂದು ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ತುಮಕೂರು ತಾಲ್ಲೂಕು ಗಳಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಮ್ಮನಕುಪ್ಪೆ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ತುಮಕೂರು ಜಿಲ್ಲಾ ಘಟಕ, ತುಮಕೂರು ಜಿಲ್ಲಾ ಪಂಚಾಯತ್ ಹಾಗೂ ಗಳಿಗೇನಹಳ್ಳಿ ಗ್ರಾಮ ಪಂಚಾಯಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನರೇಗಾ ದಿವಸ್ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಗ್ರಾಮೀಣ ಭಾಗದ ಅನಕ್ಷರಸ್ಥರು ಹಾಗೂ ಅಕುಶಲ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಹಾಗೂ ದೀರ್ಘಕಾಲ ಬಾಳಿಕೆ ಬರುವಂತಹ ಆಸ್ತಿಗಳನ್ನು ಸೃಜನೆ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗಾಗಿ ರೂಪುಗೊಂಡ ಈ ಯೋಜನೆಯು ಯಾವುದೇ ಕಾರಣಕ್ಕೂ ಕೆಲವರ ಹಣದ ಮೂಲವಾಗಬಾರದು ಎಂದ ಸಿಇಓ ರವರು, ಗ್ರಾಮೀಣ ಭಾಗದ ಜನತೆ ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಎಲ್ಲಾದರೂ ತಪ್ಪು ಕಂಡು ಬಂದಲ್ಲಿ ಅದನ್ನು ಅಲ್ಲಿಯೇ ಪ್ರಶ್ನಿಸುವ ಮನೋಭಾವನೆ ಜನರಲ್ಲಿ ಮೂಡಬೇಕಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಮಹಿಳೆಯರು ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು. ಪ್ರತೀ ಮನೆಯಿಂದ ಒಬ್ಬರಾದರೂ ನರೇಗಾ ಕಾಮಗಾರಿಗಳಲ್ಲಿ ಕೂಲಿ ಕೆಲಸಕ್ಕೆ ಭಾಗವಹಿಸಬೇಕು. ಈ ಯೋಜನೆಯಲ್ಲಿ ನಿಗಧಿತ ಪ್ರಮಾಣದ ಕೆಲಸವನ್ನು ಮಾಡಿದರೆ ಸಾಕು ಒಂದು ದಿನದ ಕೂಲಿ ರೂ. ೨೮೯ ಗಳನ್ನು ನೀಡಲಾಗುತ್ತದೆ. ಅದಕ್ಕಾಗಿ ಕೂಲಿ ಕಾರ್ಮಿಕರು ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡುವ ಅಗತ್ಯವಿಲ್ಲ. ನಮ್ಮದು ಗ್ರಾಮ ಸ್ವರಾಜ್ಯ. ಗ್ರಾಮದ ಅಭಿವೃದ್ಧಿ ಆ ಗ್ರಾಮದ ಜನರಿಂದ ಮಾತ್ರ ಸಾಧ್ಯ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ ಎಂದು ಡಾ.ಕೆ.ವಿದ್ಯಾಕುಮಾರಿ ಅವರು ಕಿವಿಮಾತು ಹೇಳಿದರು.
ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಪ್ರಾಧಿಕಾರಿಗಳಾದ ಡಾ. ಬುವನಹಳ್ಳಿ ನಾಗರಾಜ್‌ರವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬೆವರಿನ ಹಾಗೂ ಶ್ರಮದ ಸಂಸ್ಕೃತಿ ಮಾಯವಾಗುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.


ಸರ್ಕಾರ ಗ್ರಾಮೀಣ ಭಾಗದ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ಜನರ ಬದುಕನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಆದರೆ ಇಂತಹ ಸೌಲಭ್ಯಗಳನ್ನು ಪಡೆದು ಸ್ವಾವಲಂಭಿ ಜೀವನ ಸಾಗಿಸುವಲ್ಲಿ ಗ್ರಾಮೀಣ ಭಾಗದ ಜನತೆ ಮುಂದಾಗಬೇಕಿದೆ ಎಂದು ಡಾ. ಬುವನಹಳ್ಳಿ ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಉಮೇಶ್ ಹುಲಿಕುಂಟೆರವರು ಮಾತನಾಡಿ, ಕರ್ನಾಟಕ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘವು ಇತ್ತೀಚಿಗಷ್ಟೇ ರೂಪುಗೊಂಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನರೇಗಾ ದಿವಸ್ ಅನ್ನು ಅರ್ಥಪೂರ್ಣವಾಗಿ ಹಾಗೂ ಸಮಾಜಮುಖಿಯಾಗಿ ಆಚರಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಇನ್ನಷ್ಟು ಹೆಚ್ಚು ಹೆಚ್ಚಿನ ಅಭಿವೃದ್ಧಿ ಹಾಗೂ ಸಮಾಜಮುಖಿ ಕೆಲಸಗಳನ್ನು ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಅಥಿಕ್ ಪಾಷ, ತುಮಕೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್, ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ತುಮಕೂರು ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಎಸ್.ಎಂ. ನಂಜೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಆರ್.ನಾಗರಾಜು, ಗಳಿಗೇನಹಳ್ಳಿ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಇಂದ್ರೇಶ್, ಸಿರಿವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೌಡ ಮತ್ತಿತರರು ಹಾಜರಿದ್ದರು. ಗಳಿಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಉದ್ಯೋಗ ಖಾತರಿ ಯೋಜನೆಯಲ್ಲಿ 100 ದಿನಗಳ ಕೂಲಿ ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ತುಮಕೂರು ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಂದ ಶ್ರಮದಾನ ಶಿಬಿರ, ಕಸದ ತೊಟ್ಟಿ ನಿರ್ಮಾಣ, ಶಾಲಾ ಗೋಡೆಗೆ ಆಕರ್ಷಕ ಬಣ್ಣ ಬಳಿಯುವ ಕಾರ್ಯಕ್ರಮ, ಸ್ವಚ್ಚತಾ ಜಾಥಾ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಶಾಲಾ ಆವರಣದಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *

error: Content is protected !!