ಕಲಬುರಗಿ ಜಿಲ್ಲೆಯ ಅಭಿವೃದ್ಧಿಗಳ ಹಾಗೂ ಇತರ ಯೋಜನೆಗಳ ಪರಾಮರ್ಶೆ ಮಾಡುವಂತಹ ಅತಿ ಮುಖ್ಯವಾದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಮುರುಗೇಶ್ ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆಯ ಮೇರೆಗೆ ಕಾರ್ಯಕ್ರಮದ ಪ್ರಾರಂಭದಲ್ಲಿಯೇ ಪೌಷ್ಟಿಕಾಂಶ ಮಿಶ್ರಣ ಯೋಜನೆಯಾದ ‘ಪುಷ್ಟಿ’ ಕಾರ್ಯಕ್ರಮ ಆರಂಭವಾಯಿತು.
ಕಲಬುರಗಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಸಂಸತ್ ಸದಸ್ಯರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎಲ್ಲ ಸರ್ಕಾರಿ ಅಧಿಕಾರಿಗಳು ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾನ್ಯ ಶ್ರೀ ಮುರುಗೇಶ್ ನಿರಾಣಿರವರು ಪೂಜ್ಯ ಸ್ವಾಮಿ ಜಪಾನಂದಜಿ ರವರನ್ನು ವೇದಿಕೆಯ ಮೇಲೆ ಆಸೀನರಾಗಬೇಕೆಂದು ವಿನಂತಿಸಿಕೊಂಡರು. ಕಾರ್ಯಕ್ರಮ ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಕಲಬುರಗಿ ಜಿಲ್ಲೆಯ ಪುಷ್ಟಿ ಕಾರ್ಯಕ್ರಮದ ಸಂಯೋಜಕರು ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮದ ಭಕ್ತರೂ ಆದ ಡಾ.ಸುಧಾ ಹಳ್ಕಾಯ್ರವರು ಸ್ವಾಗತ ಭಾಷಣವನ್ನು ಮಾಡಿದರು. ತದನಂತರ ಪುಷ್ಟಿ ಯೋಜನೆಯ ಪೂರ್ಣ ಮಾಹಿತಿಯನ್ನು ಪೂಜ್ಯ ಸ್ವಾಮಿ ಜಪಾನಂದಜೀ ರವರು ವಿವರಿಸಿದರು. ಕಲ್ಯಾಣ ಕರ್ನಾಟಕದ ಸರಿಸುಮಾರು ಎಂಟು ಜಿಲ್ಲೆಗಳಲ್ಲಿ ಕೋವಿಡ್ ಮೂರನೇ ಅಲೆಯ ಹಿನ್ನೆಲೆಯಲ್ಲಿ ಅಪೌಷ್ಟಿಕಾಂಶದಿಂದ ಕೂಡಿದ ಮಕ್ಕಳಿಗೆ ಆರು ತಿಂಗಳುಗಳ ಕಾಲ ಪೌಷ್ಟಿಕಾಂಶ ಮಿಶ್ರಣದ ಜಾರ್ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸನ್ಮಾನ್ಯ ಸಚಿವರಾದ ಶ್ರೀ ಮುರುಗೇಶ್ ನಿರಾಣಿ ರವರನ್ನೊಳಗೊಂಡಂತೆ ಎಲ್ಲ ಶಾಸಕರು, ಸಂಸದರು, ಅಧಿಕಾರಿ ವರ್ಗದವರನ್ನು ಪೂಜ್ಯ ಸ್ವಾಮಿ ಜಪಾನಂದಜೀ ರವರು ಈ ಯೋಜನೆಗೆ ಸಹಕಾರವನ್ನು ಕೋರಿದರು. ಇತ್ತೀಚಿನ ಮಾಹಿತಿ ಪ್ರಕಾರ ಕಲಬುರಗಿ ಜಿಲ್ಲೆಯು ಅತ್ಯಧಿಕವಾದ ಅಪೌಷ್ಟಿಕಾಂಶದಿಂದ ಕೂಡಿದ ಮಕ್ಕಳನ್ನು ಹೊಂದಿದ್ದು ಈ ಸಂಖ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಬೇಕೆಂದು ವಿನಂತಿಸಿಕೊಂಡರು. ತದನಂತರ ಮಾತನಾಡಿದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರೂ ಆದ ಶ್ರೀ ಮುರುಗೇಶ್ ನಿರಾಣಿ ರವರು ಪೂಜ್ಯ ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ದೂರದ ತುಮಕೂರು ಜಿಲ್ಲೆಯ ಪಾವಗಡದಿಂದ ಗುಲ್ಬರ್ಗದವರೆಗೆ ಬಂದು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ತಮಗೆ ಅತೀವ ಸಂತೋಷ ಉಂಟಾಗಿದೆ ಎಂದು ತಿಳಿಸಿ ಸ್ವಾಮೀಜಿಯವರ ಕಾರ್ಯಕ್ರಮಕ್ಕೆ ಶ್ರೀಮತಿ ಸುಧಾ ಮೂರ್ತಿ ಹಾಗೂ ಇತರ ದಾನಿಗಳ ಸಹಾಯ ಹಸ್ತವನ್ನು ನೆನಪಿಸಿದರು. ಈ ಹಿಂದೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ಇನ್ಫೋಸಿಸ್ ಫೌಂಡೇಷನ್ ಸಹಕಾರದಿಂದ ಕಲ್ಯಾಣ ಕರ್ನಾಟಕದ ಪ್ರವಾಹ ಪ್ರದೇಶಗಳಿಗೆ ಭೇಟಿಯಿತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ ವಿಚಾರವೂ ತಮ್ಮ ಗಮನಕ್ಕೆ ಬಂದಿದ್ದು ಪೂಜ್ಯ ಸ್ವಾಮೀಜಿಯವರಿಗೆ ಕಲ್ಯಾಣ ಕರ್ನಾಟಕದ ಜನತೆಯ ಪರವಾಗಿ ಪೂಜ್ಯ ಸ್ವಾಮೀಜಿಯವರಿಗೆ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರಿಗೆ ಆ ಪರಮೇಶ್ವರನು ಸರ್ವ ರೀತಿಯಲ್ಲಿ ಆಯುಷ್ಯ ಆರೋಗ್ಯವನ್ನು ನೀಡಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ವಾಮಿ ವಿವೇಕಾನಂದರ ಧ್ಯೇಯ ವಾಕ್ಯದಂತೆ “ಜೀವನಲ್ಲಿ ಶಿವನನ್ನು ಕಂಡು” ಸೇವೆ ಸಲ್ಲಿಸುವಂತಾಗಲಿ ಎಂದು ಮನಃಪೂರ್ವಕವಾಗಿ ಹಾರೈಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಅತ್ಯಂತ ಅಪೌಷ್ಟಿಕಾಂಶದಿಂದ ಬಳಲುತ್ತಿದ್ದ ಸರಿಸುಮಾರು 25 ಶಿಶುಗಳಿಗೆ ಸನ್ಮಾನ್ಯ ಸಚಿವರೇ ಸ್ವತಃ ಪೌಷ್ಟಿಕಾಂಶದ ಮಿಶ್ರಣವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಶಾಸಕರುಗಳು, ಸಂಸದರುಗಳು ಹಾಗೂ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರಿ ಹಾಗೂ ಪೊಲೀಸ್ ಉನ್ನತಾಧಿಕಾರಿಗಳು ಭಾಗವಹಿಸಿದ್ದುದು ವಿಶೇಷವಾಗಿತ್ತು.