ಕಲಿಯುವ ಆಸೆ ನಿರಂತರವಾಗಿರಲಿ : ವಿಜ್ಞಾನ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ವೀರೇಶಾನಂದ ಶ್ರೀ ಸಲಹೆ
ತುಮಕೂರು : ವಿವಿಧ ಶಾಲೆಯ, ವಿವಿಧ ಧರ್ಮ, ಜಾತಿಯ ವಿದ್ಯಾರ್ಥಿಗಳು ಒಂದೆಡೆ ಸೇರಿ ‘ನಾವೆಲ್ಲಾ ಭಾರತೀಯರೆಂಬ ಭಾವ ಮೂಡಲಿ, ನಮ್ಮೆಲ್ಲ ಬೇಧಭಾವ, ಪ್ರಭು ದೂರಮಾಡಲಿ’ ಎಂಬ ಗೀತೆಯನ್ನು ಒಕ್ಕೊರಲಿನಿಂದ ಹಾಡುತ್ತಾ ತುಮಕೂರು ರಾಮಕೃ?-ವಿವೇಕಾನಂದ ಆಶ್ರಮದ ಉಪಶಾಖೆ ಕುದೂರು ತೊರೆರಾಮನಹಳ್ಳಿ ರಾಮಕೃ?-ವಿವೇಕಾನಂದ ಅಶ್ಶ್ರಮದಲ್ಲಿ ಎರಡು ದಿನಗಳ ಕಾಲ ಮಾಗಡಿ ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ್ ಭಾಷಾ ಕಾರ್ಯಾಗಾರದಲ್ಲಿ ಮಕ್ಕಳು ಅಪಾರ ಜ್ಞಾನ ಸಂಪತ್ತು ಹಾಗೂ ಹೃದಯ ಸಂಪತ್ತಿನ ವಾರಸುದಾರರಂತೆ ಕಂಗೊಳಿಸಿದರು.
ಶಾಲೆಯಿಂದ ಜೇಲುಗಳನ್ನು ಮುಚ್ಚುವಂತೆ ಮಾಡಬಹುದು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿರವರು ಮಾತನಾಡಿ ಒಂದು ಉತ್ತಮ ಶಾಲೆ ಪ್ರಾರಂಭವಾದರೆ ಮುಂದೆ ನೂರು ಜೇಲುಗಳು ತಂತಾನೆ ಮುಚ್ಚಿಕೊಳ್ಳುತ್ತವೆ ಎಂಬ ಮಾತು ಶಿಕ್ಷಣದ ಶಕ್ತಿಯನ್ನು ವ್ಯಕ್ತಪಡಿಸುತ್ತದೆ. ನಾವು ಬದುಕುವಂತಹ ವಾತಾವರಣವನ್ನು ಆತ್ಮೀಯವಾಗಿ ಕಾಣದೇ ಹೋದರೆ ನಾವು ಈ ಪ್ರಪಂಚದಲ್ಲಿ ನಿರ್ಗತಿಕರಂತೆ ಬದುಕಬೇಕಾಗುತ್ತದೆ. ಭಗವಂತ ಅನುಗ್ರಹಿಸಿದ ಮನುಷ್ಯ ಜನ್ಮವನ್ನು ಉದಾಸೀನ ಮಾಡದೆ ಅತ್ಯಂತ ಗೌರವಯುತವಾಗಿ ಕಂಡು ಸಾಧನೆಯ ಕಡೆಗೆ ಹೆಜ್ಜೆ ಹಾಕಬೇಕು ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿ ಜಗತ್ತಿನ ಎಲ್ಲಾ ಸಂಸ್ಕೃತಿಯ ತಾಯಿ ಎಂಬ ಮಾತುಗಳನ್ನು ವಿದೇಶಿ ಚಿಂತಕರು ದಾಖಲಿಸಿದ್ದಾರೆ. ಅನಕ್ಷರತೆ ಎನ್ನುವುದು ಅಪಾಯಕಾರಿಯಾದದ್ದು, ಸಾಂಸ್ಕೃತಿಕ ಅನಕ್ಷರತೆ ಹೆಚ್ಚು ಅಪಾಯಕಾರಿಯಾದದ್ದು. ಯಾರು ತಮ್ಮ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸುವುದಿಲ್ಲವೋ ಅವರು ನಿಜವಾದ ಅನಕ್ಷರಸ್ಥರು ಎಂದು ಅಭಿಪ್ರಾಯಪಟ್ಟರು.
ಮಾಗಡಿ ತಹಸೀಲ್ದಾರ್ ಶ್ರೀನಿವಾಸಪ್ರಸಾದ್ ಮಾತನಾಡಿ ಒಳ್ಳೆಯ ಶಿಕ್ಷಣ ಕೊಟ್ಟರೆ ಮಾತ್ರ ಒಳ್ಳೆಯ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ನೀನು ಎಂತಹವನು ಎಂದು ತಿಳಿಯಲು ನಿನ್ನ ಗೆಳೆಯನನ್ನು ನೋಡಿದರೆ ಗೊತ್ತಾಗುತ್ತದೆ. ಆದ್ದರಿಂದ ನಮ್ಮ ಸಹವಾಸವೂ ಉತ್ತಮ ರೀತಿಯಲ್ಲಿ ಇರಬೇಕು. ಮತ್ತೊಬ್ಬ ಒಳ್ಳೆಯ ಗೆಳೆಯ ನಮಗೆ ಸಂಪಾದನೆ ಆಗಬೇಕಾದರೆ ನಾವು ಮೊದಲು ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ತೊರೆರಾಮನಹಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಶ್ರೀ ಪರಮಾನಂದ ಸ್ವಾಮೀಜಿ ಮಾತನಾಡಿ ಮಕ್ಕಳಿಗೆ ಪ್ರಕೃತಿಯಲ್ಲಿ ಕೊಡುವ ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಹಾಗೂ ಗಣಿತ ಮತ್ತು ವಿಜ್ಞಾನದ ವಿಷಯಗಳನ್ನು ಮನರಂಜನಾತ್ಮಕವಾಗಿ ಹೇಗೆ ಕಲಿಸಬಹುದು ಮತ್ತು ಕಲಿತದ್ದನ್ನು ಹೇಗೆ ನೆನಪಿಟ್ಟುಕೊಳ್ಳಬಹುದು ಎಂಬುದನ್ನು ಈ ಎರಡು ದಿನದ ಕಾರ್ಯಾಗಾರದಲ್ಲಿ ಮಕ್ಕಳಿಗೆ ಕಲಿಸಿಕೊಡಲಾಗಿದೆ ಎಂದು ತಿಳಿಸಿದರು.
ನೂರಾರು ಜಾತಿ ಪಕ್ಷಿ ವೀಕ್ಷಣೆ
ಎರಡು ದಿನಗಳ ಕಾಲ ಮಕ್ಕಳು ಕಾಲವ್ಯಯ ಮಾಡದಂತೆ ಗಿಡಮರಗಳ ವೈಜ್ಞಾನಿಕ ಹೆಸರುಗಳು, ಆ ಹೆಸರು ಬರಲು ಕಾರಣಗಳೇನು? ಹಾಗೂ ತಾವುಗಳು ಇದುವರೆವಿಗೂ ಕಂಡಿರದ ನೂರಾರು ರೀತಿಯ ಪಕ್ಷಿಗಳನ್ನು ವೀಕ್ಷಿಸಿ, ಒಂದು ಕೃಷಿ ಹೊಂಡ ಮಾಡಿದರೆ ನೂರಾರು ಜಾತಿಯ ಪಕ್ಷಿಗಳನ್ನು ಹೇಗೆ ತನ್ನತ್ತ ಸೆಳೆಯಬಹುದು ಎಂಬುದರ ಕುರಿತು ಪ್ರಾತ್ಯಕ್ಷತೆ ಮೂಲಕ ಶಿಕ್ಷಣ ಪಡೆದರು. ಗಣಿತ ಹಾಗೂ ಇಂಗ್ಲೀಷ್ ಕಷ್ಟ ಎನ್ನುತ್ತಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದು ಆಟ ಆಡಿದಷ್ಟೇ ಸುಲಭದ ವಿಷಯ ಎನ್ನುವಂತೆ ಮಕ್ಕಳು ತರಬೇತಿ ಪಡೆದರು.
ಈ ಸಂದರ್ಭದಲ್ಲಿ ತುಮಕೂರು ರಾಮಕೃಷ್ಣ ಆಶ್ರಮದ ಸ್ವಾಮಿ ಧೀರಾನಂದ ಸ್ವಾಮೀಜಿ, ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ್, ಸರ್ವಮಂಗಳ, ಸುನೀಲ್ ಹುಲಿಕಲ್ಲು, ಪ್ರದೀಪ್ಸಿಂಹ, ರಮ್ಯ.ವಿ.ಕಲ್ಲೂರು, ಹರ್ಷ, ಅನುಸೂಯ, ಲಕ್ಷ್ಮಿ, ಪ್ರಾಣೇಶ್ಕುಮಾರ್, ಪದ್ಮನಾಭ್, ಚಂದ್ರಶೇಖರ್ ಹಾಗೂ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ನಿವೇದಿತ ನಿಕೇತನ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.