ತುಮಕೂರು : ಕೇಂದ್ರ ಸರ್ಕಾರದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2022-23 ನೇ ಸಾಲಿನ ಬಜೆಟ್ ನಿರಾಶಾದಾಯಕ ಮತ್ತು ನಿಷ್ಪ್ರಯೋಜಕ ಬಜೆಟ್ ಎಂದು ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ಟೀಕಿಸಿದ್ದಾರೆ. ಜನಸಾಮಾನ್ಯರ ಮತ್ತು ದೇಶದ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದೇ ಕೇವಲ ಔಪಚಾರಿಕತೆಗಾಗಿ ಮಂಡಿಸಿರುವ ಬಜೆಟ್ ಆಗಿದೆ. ರೈತಾಪಿ ವರ್ಗಕ್ಕೆ ಅನುಕೂಲವಾಗುವ ಯಾವುದೇ ಯೋಜನೆ ನೀಡದ ಬಜೆಟ್ ಉಪ್ಪೇ ಇಲ್ಲದ ಊಟದಂತೆ ಎಂದು ಮಾಜಿ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ನಮ್ಮ ಕರ್ನಾಟಕ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದೆ ನಿರ್ಲಕ್ಷಿಸಿರುವುದು ದೌರ್ಭಾಗ್ಯವಾಗಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಮ್ಮ ರಾಜ್ಯವನ್ನು ನಡೆಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ನಡೆ ನೋಡಿದರೆ, ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ೨೫ ಬಿಜೆಪಿ ಸಂಸದರು ಸಂಸತ್ ನಲ್ಲಿ ಮೋದಿ ಭಾಷಣಕ್ಕೆ ಚಪ್ಪಾಳೆ ಹೊಡೆಯಲು ಮಾತ್ರ ಅರ್ಹರು ಎಂದು ಡಾ.ರಫೀಕ್ ಅಹ್ಮದ್ ಕುಟುಕಿದ್ದಾರೆ.
ತೈಲಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಗಗನಕ್ಕೇರಲಿದ್ದು, ಜನಸಾಮಾನ್ಯರು ಜೀವನ ದುಬಾರಿಯಾಗಿ ಬೀದಿಗೆ ಬರುವಂತ ಪರಿಸ್ಥಿತಿ ಉದ್ಭವವಾಗುವುದರಲ್ಲಿ ಸಂಶಯವೇ ಇಲ್ಲ. ಕೊರೊನಾದಿಂದ ತತ್ತರಿಸಿರುವ ಜನತೆಗೆ ಕೇಂದ್ರ ಸರ್ಕಾರವು ಪರಿಹಾರ ರೂಪದಲ್ಲಿ ಯಾವುದಾದರೂ ಕೊಡುಗೆ ನೀಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. 2014 ರ ಚುನಾವಣೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದ ಬಿಜೆಪಿ, ಈಗ ೬೦ ಲಕ್ಷ ಉದ್ಯೋಗ ಕಲ್ಪಿಸಲಾಗುವುದು ಎಂದು ಯುವಜನತೆಗೆ ಮಂಕುಬೂದಿ ಎರಚಿದೆ. ತೆರಿಗೆದಾರರಿಗೆ ಯಾವುದೇ ವಿನಾಯ್ತಿ ನೀಡದೆ ನಿರಾಸೆ ಉಂಟುಮಾಡಿದೆ. ಇದರಿಂದ ಬಂಡವಾಳ ಹೂಡಿಕೆಯ ಮೇಲೆ ದುಷ್ಪರಿಣಾಮ ಬೀರಿ ಮತ್ತಷ್ಟು ನಿರುದ್ಯೋಗ ಸೃಷ್ಟಿಯಾಗುವ ಸಾಧ್ಯತೆಯೇ ಹೆಚ್ಚು ಎಂದು ಮಾಜಿ ಶಾಸಕರು ವಾಗ್ದಾಳಿ ನಡೆಸಿದ್ದಾರೆ.
ಕೃಷ್ಣ, ಕಾವೇರಿ, ಹೇಮಾವತಿ ಹಾಗೂ ಪೆನ್ನಾರ್ , ಪಾಲಾರ್ ನದಿ ಜೋಡಣೆ ಎಂಬ ಹೊಸ ಘೋಷಣೆ ಇದ್ದರೂ ಯೋಜನೆ ಜಾರಿಗೆ ಕಾಲಮಿತಿ ಇಲ್ಲ. ಅಂತರಾಜ್ಯ ನದಿಗಳ ಜೋಡಣೆ ಎಂದು ಬೊಗಳೆ ಬಿಡುವ ಬಿಜೆಪಿ ಸರ್ಕಾರ ಕಳೆದು 7 ವರ್ಷಗಳಿಂದ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ.
ಒಟ್ಟಾರೆಯಾಗಿ ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಹುರುಳಿಲ್ಲ ಇದೊಂದು ಪೊಳ್ಳು ಭಾಷಣದ ಬಜೆಟ್. ಜನಸಾಮಾನ್ಯ ವಿರೋಧಿ ಬಿಜೆಪಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಡಾ. ರಫೀಕ್ ಅಹ್ಮದ್ ತಿಳಿಸಿದ್ದಾರೆ.