ತುಮಕೂರಿನ ಕೊಂಡನಾಯಕನಹಳ್ಳಿ, ಮೈದಾಳ ಅಂಚೆ, ಕ್ಯಾತ್ಸಂದ್ರ ಇಲ್ಲಿಯ ಶ್ರೀ ಶಿವ ಶೈಕ್ಷಣಿಕ ಸೇವಾಶ್ರಮದ ಸುಮಾರು 200 ಮಕ್ಕಳಿಗೆ ಹಾಗೂ ಉಪಾಧ್ಯಾಯರುಗಳಿಗೆ ನೂತನ ವಸ್ತ್ರಗಳು, ಸೀರೆ, ಪಂಚೆ, ಟವೆಲ್ ಹಾಗೂ ದಿನಸಿ ಸಾಮಾನುಗಳನ್ನು ಮತ್ತು ರಾಜ್ಯದ ನಾನಾ ಭಾಗಗಳಿಂದ ನಿರ್ಗತಿಕ ಹಾಗೂ ಅನಾಥ ಮಕ್ಕಳಿಗೆ ಕಂಬಳಿ, ಪುಸ್ತಕಗಳು ಇತ್ಯಾದಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪೂಜ್ಯ ಸ್ವಾಮಿ ಜಪಾನಂದಜೀ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಕವಿಗಳಾದ ಶ್ರೀ ಕವಿತಾ ಕೃಷ್ಣ ರವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ಸುಭೇದಾರ್ ಆಗಿರುವ ಶ್ರೀ ಸತೀಶ್ ಎಂ.ಸಿ. ಮತ್ತು ನಿವೃತ್ತ ಸೈನಿಕರು ಹಾಗೂ ಹಾಲಿ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ನಾಗರಾಜಯ್ಯ ವಿ.ಡಿ. ರವರು ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದರ ಕನಸಿನ ಭಾರತ ವಿಚಾರವನ್ನು ಹಾಗೂ ಭವಿಷ್ಯ ಭಾರತದ ಬಗ್ಗೆ ತಿಳಿಸಿದ ಪೂಜ್ಯ ಸ್ವಾಮೀಜಿಯವರು ಮಕ್ಕಳಲ್ಲಿ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರಲ್ಲಿ ಸ್ವಾಮಿ ವಿವೇಕಾನಂದರ ವಿಚಾರಧಾರೆ ಹಾಗೂ ಚೈತನ್ಯ ಶಕ್ತಿಯನ್ನು ತುಂಬುವಂತೆ ತಮ್ಮ ಅಪೂರ್ವ ಭಾಷಣವನ್ನು ನೀಡಿದರು.
ನಾಡಿನ ಪ್ರಖ್ಯಾತ ಕವಿಗಳು ಹಾಗೂ ವಾಗ್ಮಿಗಳಾದ ಶ್ರೀ ಕವಿತಾ ಕೃಷ್ಣ ರವರು ಪೂಜ್ಯ ಸ್ವಾಮೀಜಿಯವರ ಆಗಮನ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದಂದೇ ಈ ಅನಾಥಾಲಯಕ್ಕೆ ಒಂದು ರೀತಿಯ ವಿವೇಕಾನಂದರ ಪ್ರತಿರೂಪವೇ ಬಂದಂತಾಯಿತು ಎಂದು ಬಣ್ಣಿಸಿ ಪೂಜ್ಯ ಸ್ವಾಮೀಜಿಯವರ ಅಹರ್ನಿಷಿ ಸೇವಾ ಯಜ್ಞ ದೇಶದ ಎಂಟು ರಾಜ್ಯಗಳಲ್ಲಿ ನಡೆಯುತ್ತಿರುವುದನ್ನು ವಿವರಿಸಿದರು. ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ತಮ್ಮ ಜೀವನದ ಪ್ರತಿಕ್ಷಣದಲ್ಲೂ ಅಳವಡಿಸಿಕೊಂಡು ಸಹಸ್ರ ಸಹಸ್ರ ಜನರಿಗೆ ಆಸರೆಯಾಗಿರುವ ಪೂಜ್ಯ ಸ್ವಾಮಿ ಜಪಾನಂದಜೀ ರವರನ್ನು ಸ್ವಾಮಿ ವಿವೇಕಾನಂದರು ಈ ಹಿಂದುಳಿದ ಗ್ರಾಮಾಂತರ ಅನಾಥಾಲಯಕ್ಕೆ ಕರೆತಂದಿದ್ದಾರೆ ಎಂಬುದೇ ನಮ್ಮ ಭಾವನೆ ಎಂದು ತಿಳಿಸಿದರು. ತದನಂತರ ಪೂಜ್ಯ ಸ್ವಾಮೀಜಿಯವರು ತಾವೇ ಸ್ವಯಂ ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೂ ಹೊದಿಕೆಯನ್ನು ಹಾಗೂ ಪುಸ್ತಕಗಳನ್ನು ವಿತರಿಸಿದುದಲ್ಲದೆ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಅನಾಥಾಲಯ ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲ ನೌಕರ ವರ್ಗದವರಿಗೂ ನೂತನ ವಸ್ತ್ರಗಳು, ಸೀರೆ, ದವಸ ಧಾನ್ಯವನ್ನು ವಿತರಿಸಿದರು. ಎಲ್ಲ ನೌಕರ ವರ್ಗದವರ ಕಣ್ಣಂಚಿನಲ್ಲಿ ನೀರು ಬಂದಿತ್ತು. ಕಾರಣ, ಸಂಕ್ರಾಂತಿಯ ಹಿನ್ನೆಲೆಯಲ್ಲಿ ಹಾಗೂ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಸಂದರ್ಭದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರ ಅಮೃತಹಸ್ತದಿಂದ ಈ ಎಲ್ಲ ಪರಿಕರಗಳನ್ನು ಪಡೆಯುವುದೇ ತಮ್ಮ ಭಾಗ್ಯವೆಂದು ಅತ್ಯಂತ ಭಕ್ತಿಪೂರ್ವಕವಾಗಿ ಸ್ವಾಮೀಜಿಯವರಿಗೆ ಗೌರವ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರದ ವಿವೇಕ ಬಳಗ ಸ್ವಯಂಸೇವಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಕ್ರಿಯವಾಗಿ ಭಾಗವಹಿಸಿ ನಿಜವಾದ ಅರ್ಥದಲ್ಲಿ ಸ್ವಾಮಿ ವಿವೇಕಾನಂದರ ಜನ್ಮೋತ್ಸವವನ್ನು ಆಚರಿಸಿದಂತಾಯಿತು.
ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಲೇಪಾಕ್ಷಯ್ಯ ಹಾಗೂ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತುಮಕೂರು ನಗರದ ನಿರ್ಭಯ ಮಹಿಳಾ ಮಂಡಳಿಯವರು ಭಾಗವಹಿಸಿದ್ದರು. ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ಬಯಸಿದ ಸೇವಾ ಕಾರ್ಯವು ಯಶಸ್ವಿಯಾಗಿ ಈ ಪುಟ್ಟ ಗ್ರಾಮದಲ್ಲಿ ಸ್ಥಾಪಿಸಲ್ಪಟ್ಟಿರುವ ಅನಾಥಾಲಯ ಹಾಗೂ ನಿರ್ಗತಿಕರ ಸಂಸ್ಥೆಯಲ್ಲಿ ನಡೆಯಿತು ಎನ್ನಬಹುದು.