5 ದಿನಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಪ್ರಾರಂಭಿಸಲು ಸೂಚನೆ -ಶಾಸಕ ಕೆಜೆ ಜಾರ್ಜ್‌ ಪ್ರಾಯೋಜಕತ್ವ

ಬೆಂಗಳೂರು : ಸರಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಸರ್ವಜ್ಞ ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ ಶಾಲೆಗಳಿಗೂ ಸ್ಮಾರ್ಟ್‌ ಕ್ಲಾಸ್‌ ಉಪಕರಣಗಳನ್ನು ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳು ಪ್ರಾರಂಭವಾಗಲಿವೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಕೆ ಜೆ ಜಾರ್ಜ್‌ ತಿಳಿಸಿದರು.

ಇಂದು ಬಾಣಸವಾಡಿಯಲ್ಲಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸ್ಮಾರ್ಟ್‌ ಕ್ಲಾಸ್‌ ನ ಉಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದರು. ನಾನು ಕೂಡಾ ಸರಕಾರಿ ಶಾಲೆಯಲ್ಲಿ ಪಾಠ ಕಲಿತಂತಹ ವಿದ್ಯಾರ್ಥಿ. ಇಲ್ಲಿನ ಶಿಕ್ಷಣದ ಗುಣಮಟ್ಟ ಚೆನ್ನಾಗಿಯೇ ಇದೆ. ಆದರೆ ಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನ ನೀಡಬೇಕಾಗಿದೆ. ಈ ಮೂಲಕ ಶಿಕ್ಷಣದ ಗುಣಮಟ್ಟ ಮತ್ತಷ್ಟು ಹೆಚ್ಚಿಸಬೇಕು ಎನ್ನುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಸರಕಾರ ಎಲ್ಲಾ ಸೌಲಭ್ಯ ನೀಡಲು ಸಾಧ್ಯವಿಲ್ಲ. ಮೊದಲ ಬಾರಿ ನಾನು ಶಾಸಕನಾದ ಸಂಧರ್ಭದಲ್ಲಿ ಶಾಲೆಗಳ ಕೊಠಡಿಗಳನ್ನು ನಿರ್ಮಿಸಿ ಕೊಡಲಾಗಿತ್ತು. ನಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರಕಾರಿ ಶಾಲೆಗಳು ಮತ್ತು ಅಂಗನವಾಡಿಗಳನ್ನು ಉನ್ನತೀಕರಿಸುವುದು ನಮ್ಮ ಮೊದಲ ಆದ್ಯತೆ ಆಗಿದೆ. ಈ ನಿಟ್ಟಿನಲ್ಲಿ ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 28 ಶಾಲೆಗಳಿಗೆ ಸ್ಮಾರ್ಟ್‌ ಕ್ಲಾಸ್‌ ಉಪಕರಣಗಳನ್ನು ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದ್ದೇನೆ ಎಂದು ಕೆ ಜೆ ಜಾರ್ಜ್‌ ತಿಳಿಸಿದರು.

ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ನ ಪ್ರಾಂಶುಪಾಲೆ ಶ್ರೀಮತಿ ಮಂಗಳಗೌರಿ ಮಾತನಾಡಿ, ನಮ್ಮ ಶಾಲೆಗೆ ಈ ಉಪಕರಣಗಳನ್ನು ನೀಡಿರುವುದು ಬಹಳ ಸಂತಸದ ವಿಷಯ. ಇದರಿಂದ ನಾವು ನಮ್ಮ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿದೆ. ಕೊಠಡಿ ನಿರ್ಮಾಣ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯ ಒದಗಿಸುವ ಕಾರ್ಯವನ್ನು ಶಾಸಕರು ಮಾಡಿದ್ದಾರೆ. ದಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುವುದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ತಾಯಣ್ಣ ರೆಡ್ಡಿ, ಬಿಇಓ ಡಿ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!