ಬೆಂಗಳೂರು, : ಶಾಲಾ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ, ಶಾಲೆ ಆರಂಭವಾದರೂ ಚಂದನ ವಾಹಿನಿಯಲ್ಲಿ ತರಗತಿ ಮುಂದುವರೆಯುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಬಿ.ಸಿ. ನಾಗೇಶ್, ಬೆಂಗಳೂರಿನಲ್ಲಿ ಒಂದರಿಂದ ಒಂಬತ್ತನೇ ತರಗತಿಯ ಬಗ್ಗೆ ತಜ್ಞರ ಸಲಹೆ ಮೇರೆಗೆ ಶಾಲೆ ಆರಂಭದ ಕುರಿತು ನಿರ್ಧಾರ ಮಾಡುತ್ತೇವೆ. ಶಾಲೆ ಪ್ರಾರಂಭಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಾಗಿದೆ. ಆದ್ದರಿಂದ ಇಂದಿನ ಕ್ಯಾಬಿನೆಟ್‍ನಲ್ಲಿಯೂ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ತಜ್ಞರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಕೊರೊನಾ ಸೋಂಕು ಮೂರನೇ ಅಲೆಯಿಂದ ಯಾವ ಮಕ್ಕಳಿಗೂ ಹೆಚ್ಚಿನ ತೊಂದರೆಯಿಲ್ಲ. ಆದರೂ ಆರೋಗ್ಯದ ವಿಚಾರದಲ್ಲಿ ಶಿಕ್ಷಣ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಆರೋಗ್ಯ ಇಲಾಖೆ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಈ ವರ್ಷ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇಲ್ಲ. ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ. ಪರೀಕ್ಷೆಗೂ 75% ಹಾಜರಾತಿ ಕಡ್ಡಾಯ ಮಾಡುವುದಿಲ್ಲ. ಎಸ್‍ಎಸ್‍ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯುತ್ತದೆ. ಪೂರ್ಣ ಪ್ರಮಾಣದ ಆಫ್‌ಲೈನ್ ತರಗತಿ ಪ್ರಾರಂಭ ಆಗುವವರೆಗೂ ಚಂದನ, ಆಕಾಶವಾಣಿಯಲ್ಲಿ ಪಠ್ಯ ಬೋಧನೆ ಮುಂದುವರೆಯುತ್ತದೆ ಎಂದು ಸಚಿವ ಬಿ.ಸಿ. ನಾಗೇಶ್ ಭರವಸೆ ನೀಡಿದರು. ಜ.29ರಂದು ಶಾಲೆ ಆರಂಭದ ಬಗ್ಗೆ ನಿರ್ಧಾರ ರಾಜ್ಯದಲ್ಲಿ ಕೋವಿಡ್ ಪ್ರಕರಣ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಪುನರಾರಂಭ ಮಾಡಲಾಗಿದದ ಶಾಲೆಗಳನ್ನು ಬೆಂಗಳೂರಿನಲ್ಲಿ ಬಂದ್ ಮತ್ತೆ ಮಾಡಲಾಗಿತ್ತು. ಅವುಗಳನ್ನು ಮುಂದಿನ ವಾರದಿಂದಲೇ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಖಚಿತಪಡಿಸಿದರು.
ಕಳೆದ ವಾರ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲೇ ಶಾಲೆ ಆರಂಭದ ಬಗ್ಗೆ ಚರ್ಚಿಸಲಾಗಿತ್ತು. ಇದೀಗ 29ರಂದು ನಡೆಯುವ ತಜ್ಞರ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ರಾಜ್ಯದ 19 ಜಿಲ್ಲೆಗಳಲ್ಲಿ 246 ಶಾಲೆಗಳನ್ನು ಕೋವಿಡ್ ಕಾರಣದಿಂದ ಬಂದ್ ಮಾಡಲಾಗಿತ್ತು. ಅದರಲ್ಲೂ ಮೂರರಿಂದ 7 ದಿನಗಳವರೆಗೆ ಮಾತ್ರ ಬಂದ್ ಮಾಡಿ ಮತ್ತೆ ಆರಂಭಿಸಲಾಗಿದೆ. 5 ಜಿಲ್ಲೆಗಳಲ್ಲಿ ಶಾಲೆಗಳನ್ನೇ ಸಂಪೂರ್ಣ ಬಂದ್ ಮಾಡಿಲ್ಲ.
ಈಗಾಗಲೇ ಮಾರ್ಚ್ 28ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಿಗದಿ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಪರೀಕ್ಷೆ ನಡೆಸಲಾಗುವುದು. ಈ ಸಂಬಂಧ ಈಗಾಗಲೇ ಶಿಕ್ಷಣ ಮಂಡಳಿಗೆ ತಿಳಿಸಲಾಗಿದೆ. ಕಳೆದ ಬಾರಿಯಂತೆಯೇ ಈ ಬಾರಿ ಕೂಡ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.