ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಕಳೆದ ಒಂದು ವಾರದಿಂದ ಬಹಳ ವೇಗವಾಗಿ ಹರಡುತ್ತಿದ್ದು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆದು ನೈಟ್ ಕರ್ಫ್ಯೂ ಎರಡು ವಾರ ಮುಂದುವರಿಕೆ, ವಾರಾಂತ್ಯದ ಕರ್ಫ್ಯೂ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಮಂಗಳವಾರ ರಾತ್ರಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದು ಕೋವಿಡ್ ಲಾಕ್ಡೌನ್, ಕೋವಿಡ್ ಕರ್ಫ್ಯೂ ಅಲ್ಲ. ಇದು ಬಿಜೆಪಿ ಕರ್ಫ್ಯೂ, ಬಿಜೆಪಿಯ ಲಾಕ್ಡೌನ್. ಅವರಿಗೆ ರಾಜಕಾರಣ ಮಾಡಲು ಈಗ ಟಫ್ ಆಗುತ್ತಿದೆ. ತಮ್ಮ ರಾಜಕಾರಣಕ್ಕಾಗಿ ಟಫ್ ರೂಲ್ಸ್ ತಂದಿದ್ದಾರೆ. ಮೆರವಣಿಗೆ ಮಾಡಬೇಡಿ, ಪ್ರತಿಭಟನೆ ಮಾಡಬೇಡಿ ಅಂದಿದ್ದಾರೆ. ನಾವು ಮೆರವಣಿಗೆ ಮಾಡಲ್ಲ, ನೀರಿಗಾಗಿ ನಡೆಯುತ್ತೇವೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಾವು ಕುಡಿಯುವ ನೀರಿಗಾಗಿ ನಡೆಯುತ್ತೇವೆ. ನಾವು ವಾಕ್ ಫಾರ್ ವಾಟರ್ ಮಾಡುತ್ತೇವೆ. ಅವರಿಗೂ ಕಾವೇರಿ ನೀರು ಕುಡಿಸುತ್ತೇವೆ. ವರ್ತಕರು, ವ್ಯಾಪಾರಿಗಳ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ರಾಜಕಾರಣ, ನಮ್ಮ ಮೇಲಿನ ದ್ವೇಷಕ್ಕೆ ವೀಕೆಂಡ್ ಲಾಕ್ಡೌನ್ ಜಾರಿಗೊಳಿಸಿದ್ದಾರೆ. ನೈಟ್ ಕರ್ಫ್ಯೂ ಜಾರಿ ಮಾಡಿ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸಿದ್ದಾರೆ. ಈ ಸರ್ಕಾರ ವರ್ತಕರ ಕೊಲೆ ಮಾಡುವುದೊಂದು ಬಾಕಿಯಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಯಾರೂ ನಡೆಯದಂತೆ ನೋಡಿಕೊಳ್ಳಲು ಆಗುತ್ತಾ. ಅವರಿಗೆ ಜನರ ಪ್ರಾಣ ಮುಖ್ಯವಲ್ಲ, ಅವರ ಪಕ್ಷ ಮುಖ್ಯವಾಗಿದೆ. ಮೊದಲ ಅಲೆಯಲ್ಲಿ ಸ್ವಿಮ್ಮಿಂಗ್ ಪೂಲ್ಗೆ ಇಳಿದಿದ್ದರಲ್ಲ. ಸಚಿವ ಸುಧಾಕರ್ ವಿರುದ್ಧ ಮೊದಲು ಪ್ರಕರಣ ದಾಖಲಿಸಲಿ. ಸಚಿವ ಬಿ. ಶ್ರೀರಾಮುಲು, ಬಿ.ಎಸ್. ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಲಿ. ಸಿಎಂ ಮದುವೆಯಲ್ಲಿ ಭಾಗಿಯಾಗಿದ್ದರಲ್ಲ ಕೇಸ್ ದಾಖಲಿಸಲಿ ಎಂದು ಸವಾಲು ಹಾಕಿದರು.
ಬೆಂಗಳೂರಿನ ಜನರಿಗೆ ನೀರು ಸಿಗಲು ಪ್ರಾರ್ಥನೆ ಮಾಡಲು ನಡೆಯುತ್ತೇವೆ. ನಮ್ಮದು ಪ್ರತಿಭಟನೆ ಅಲ್ಲ ಪ್ರಾರ್ಥನೆ. ನಾವು ಧರಣಿ ಮಾಡುತ್ತಿಲ್ಲ. ಯಾವ ಬದಲಾವಣೆ ಇಲ್ಲ. ಈಗಾಗಲೇ ಶಾಸಕಾಂಗ ಪಕ್ಷದ ನಾಯಕರ ಹತ್ತಿರ ಮಾತನಾಡಿದ್ದೇನೆ. ನಿಯಮದ ಪ್ರಕಾರವೇ ನಡೆಯುತ್ತೇವೆ. ನಮ್ಮ ಮೇಲಿನ ರಾಜಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ಕೊರೊನಾ ಹೊಸ ಮಾರ್ಗಸೂಚಿಗಳೇನು?
* ಕರ್ನಾಟಕ ರಾಜ್ಯದಾದ್ಯಂತ 6ನೇ ತಾರೀಖಿನಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ ಇರುತ್ತದೆ.
* ವೀಕೆಂಡ್ ಕರ್ಫ್ಯೂ ವೇಳೆ ಆಹಾರ ವಸ್ತು, ಹೋಟೆಲ್ಗಳಲ್ಲಿ ಪಾರ್ಸೆಲ್, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
* ಸರ್ಕಾರಿ ಕಚೇರಿಗಳು, ಮಾಲ್ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ಚಿತ್ರಮಂದಿರ, ಮಾಲ್, ಬಾರ್, ಪಬ್ಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ (50:50 ನಿಯಮ) ಪ್ರವೇಶ ಇರುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಲಸಿಕೆ ಕಡ್ಡಾಯ ಆಗಿರಲಿದೆ.
* ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಡಬಲ್ ಡೋಸ್ ಕಡ್ಡಾಯ ಆಗಿರಲಿದೆ. ಮದುವೆ ಹೊರಾಂಗಣದಲ್ಲಿದ್ದರೆ 200, ಒಳಾಂಗಣದಲ್ಲಿದ್ದರೆ 100 ಜನರಿಗೆ ಮಾತ್ರ ಅವಕಾಶ. ಅವರಿಗೂ 2 ಡೋಸ್ ಆಗಿರಬೇಕು.
* ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ಕಡ್ಡಾಯ ಆಗಿರಲಿದೆ.
* ವಿದೇಶಿ ಪ್ರಯಾಣಿಕರ ಟ್ರ್ಯಾಕಿಂಗ್-ಟ್ರೇಸಿಂಗ್ ಬಲಪಡಿಸಲು ತೀರ್ಮಾನಿಸಲಾಗಿದೆ. ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಶಾಲಾ ಕಾಲೇಜು ರಜೆ ಬೆಂಗಳೂರಿಗೆ ಮಾತ್ರ ಅನ್ವಯ ಆಗುತ್ತದೆ. ಆದರೆ, ಉಳಿದ ನಿಯಮಗಳು ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ.