ಔಷಧೀಯ ಗಣಿ – ಔದುಂಬರ ವೃಕ್ಷ (ಅತ್ತಿ ಮರ)

ಮರಗಳ ಪೈಕಿ ಪೂಜನೀಯ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಅತ್ತಿ ಮರ ಇತ್ತೀಚೆಗೆ ಕಾಣಿಸುವುದು ಅಪರೂಪವಾಗುತ್ತಿದೆ. ಮೊದಲೆಲ್ಲ ಮಲೆನಾಡಿನಲ್ಲಿ ಹೇರಳವಾಗಿ ಕಂಡು ಬರುತ್ತಿತ್ತು. ಈಗ ಅದು ಕೂಡ ಅವಸಾನದ ಅಂಚಿಗೆ ಸಾಗುತ್ತಿದೆ. ಇತರೆ ಮರಗಳಂತೆ ಇದು ಮರಮುಟ್ಟಾಗಿ ಉಪಯೋಗಕ್ಕೆ ಬಾರದಿದ್ದರೂ ಆರೋಗ್ಯದ ದೃಷ್ಠಿಯಿಂದ ಸರ್ವ ರೀತಿಯಲ್ಲೂ ಮನುಷ್ಯನಿಗೆ ಉಪಯುಕ್ತವಾಗಿರುವುದಂತು ಸತ್ಯ.
ಧಾರ್ಮಿಕವಾಗಿ ಈ ಮರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಮುಂಜಾನೆ ಈ ಮರಗಳಿಗೆ ಪ್ರದಕ್ಷಿಣೆಗೆ ಬರುವ ರೂಢಿಯಿದೆ. ಧಾರ್ಮಿಕವಾಗಿ ಏನೇ ನಂಬಿಕೆಯಿದ್ದರೂ, ವೈಜ್ಞಾನಿಕವಾಗಿ ಮುಂಜಾನೆ ಈ ಮರದ ಸುತ್ತಲೂ ಒಂದು ರೀತಿಯ ರಸಾಯನಿಕ ವಿಕಿರಣ ಬಿಡುಗಡೆಯಾಗುವುದರಿಂದ ಮಾನಸಿಕ ಆರೋಗ್ಯದ ವೃದ್ಧಿಗೆ ಸಹಕಾರಿಯಾಗುತ್ತದೆ. ಇನ್ನು ಹೋಮಗಳಲ್ಲಿಯೂ ಅತ್ತಿಯ ಕಟ್ಟಿಗೆ ಬಳಸಲಾಗುತ್ತದೆ. ಇದು ಹವೆಯನ್ನು ಶುದ್ಧಗೊಳಿಸಿ ಮನಸ್ಸನ್ನು ಪ್ರಪುಲ್ಲಗೊಳಿಸಲು ಕಾರಣವಾಗುತ್ತದೆ.

ಧಾರ್ಮಿಕ ಪ್ರಾಶಸ್ತ್ಯ ಹೊಂದಿದ ಮರ
‌ ಅತ್ತಿಯ ಬಗ್ಗೆ ತಿಳಿಯುತ್ತಾ ಹೋದರೆ ಇದರಲ್ಲಿ ಅಡಗಿರುವ ಆರೋಗ್ಯಕಾರಿ ಗುಣಗಳ ದೊಡ್ಡ ರಹಸ್ಯವೇ ಬಯಲಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಹಿಂದಿನ ಕಾಲದವರು ಪ್ರಕೃತಿಯ ಮಡಿಲಲ್ಲಿ ಆರೋಗ್ಯವಾಗಿ, ಸುಖವಾಗಿ ಬದುಕಲು ಏಕೆ ಸಾಧ್ಯವಾಗುತ್ತಿತ್ತು ಎಂಬುದಕ್ಕೆ ಕಾರಣಗಳೂ ಸಿಗುತ್ತವೆ. ಅತ್ತಿಯ ವೈಜ್ಞಾನಿಕ ಹೆಸರು ಫೀಕಸ್ ಗ್ಲೊಮೆರಟಾ, ಆಂಗ್ಲ ಭಾಷೆಯಲ್ಲಿ ಕ್ಲಸ್ಟರ್ ಫಿಗ್ಸ್ ಎಂದು ಕರೆದರೆ, ಇನ್ನು ಇತರೆ ಭಾಷೆಗಳ ಜನ ತಮ್ಮದೇ ಹೆಸರಿನಿಂದ ಕರೆಯುತ್ತಾರೆ.

ಕಣ್ಣಿಗೆ ಗೋಚರಿಸುವುದಿಲ್ಲವಂತೆ ಅತ್ತಿ ಹೂಗಳು
‌ ‌ ಸಾಮಾನ್ಯವಾಗಿ ಅತ್ತಿ ಹೂವಿನ ಬಗ್ಗೆ ಕುತೂಹಲವಿದೆ. ಅದು ಅರಳುವುದು ಯಾರ ಕಣ್ಣಿಗೂ ಗೋಚರಿಸುವುದಿಲ್ಲ. ಕಾಯಿ ಮತ್ತು ಹಣ್ಣು ಮಾತ್ರ ನಮಗೆ ಕಾಣುತ್ತದೆ. ಹೀಗಾಗಿ ಹೂವು ಕುರಿತಂತೆ ಏನೇನೋ ನಂಬಿಕೆ, ಕಥೆಗಳಿದ್ದರೂ ಸಸ್ಯಶಾಸ್ತ್ರಜ್ಞರ ಪ್ರಕಾರ ಮರದಲ್ಲಿ ಹೂವಿದ್ದರೂ ಕಾಣಿಸುವುದಿಲ್ಲ. ಅವು ಚಿಕ್ಕದಾಗಿದ್ದು, ಮೃದು ಮತ್ತು ಮಂದವಾಗಿರುತ್ತದೆ, ಜತೆಗೆ ಒಂದು ಕೋಶದೊಳಗೆ ಇರುವುದರಿಂದ ಕಣ್ಣಿಗೆ ಕಾಣಿಸುವುದಿಲ್ಲ. ಇಂತಹ ಗೊಂಚಲಿಗೆ ಸಸ್ಯಶಾಸ್ತ್ರದಲ್ಲಿ ‘ಹೈಪೋತೋಡಿಯಂ’ ಎಂದು ಕರೆಯಲಾಗುತ್ತದೆ ಎಂದು ವ್ಯಾಖ್ಯಾನ ನೀಡುತ್ತಾರೆ.

ರಸಭರಿತ ಸಿಪ್ಪೆಯನ್ನು ತಿನ್ನುತ್ತಾರೆ
ಇತರೆ ಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಪೋಷಕಾಂಶಗಳು ಮತ್ತು ಆರೋಗ್ಯಕಾರಿ ಗುಣಗಳು ದೊಡ್ಡಮಟ್ಟದಲ್ಲಿವೆ. ಆದರೆ ಇದು ಮಾರುಕಟ್ಟೆಯಲ್ಲಿ ಮಾರಾಟವಾಗುವ ಯಾವುದೇ ಜನಪ್ರಿಯತೆ ಹೊಂದಿಲ್ಲ. ಮರದಲ್ಲೇ ಹಣ್ಣಾಗಿ ಅಲ್ಲಿಯೇ ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಿ ಬಿಡುತ್ತದೆ. ಕೆಲವರು ಹಣ್ಣನ್ನು ಬಿಡಿಸಿ ಅದರೊಳಗಿರುವ ಚಿಕ್ಕದಾದ ಬೀಜಗಳನ್ನೆಲ್ಲ ತೆಗೆದು ಬಳಿಕ ರಸಭರಿತ ಸಿಪ್ಪೆಯನ್ನು ತಿನ್ನುತ್ತಾರೆ. ಆದರೆ ಇದನ್ನು ಆಸ್ವಾದಿಸಿಕೊಂಡು ತಿನ್ನುವುದು ಅಸಾಧ್ಯ. ಕಾರಣ ಮೇಲ್ನೋಟಕ್ಕೆ ಹಣ್ಣು ಸುಂದರವಾಗಿ ಕಂಡರೂ ಒಳಗೆ ಹುಳುಗಳ ಗೂಡಾಗಿರುತ್ತದೆ.

ಅಂಜೂರದಂತಿದ್ದರೂ ಅಂಜೂರವಲ್ಲ ‌ ‌ ‌ ಈ ಅತ್ತಿ
ಅಂಜೂರದಂತೆ ಮೇಲ್ನೋಟಕ್ಕೆ ಕಂಡು ಬಂದರೂ ಅದರಂತೆ ಮಾರಾಟದ ಯಾವುದೇ ಜನಪ್ರಿಯತೆ ಇದಕ್ಕಿಲ್ಲ. ಕಣ್ಣು ಮುಂದೆಯೇ ಇದ್ದರೂ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿಯೇ ಇದು ಪ್ರಾಣಿ ಪಕ್ಷಿಗಳ ಆಹಾರದ ಕೊರತೆಯನ್ನು ನೀಗಿಸುತ್ತಾ ಬಂದಿದೆ. ಅತ್ತಿಕಾಯಿಯನ್ನು ಮಾಗುವ ಮುನ್ನ ಪಲ್ಯ ಮಾಡಿ ತಿನ್ನುವವರೂ ಇದ್ದಾರೆ. ಅತ್ತಿ ಹಣ್ಣಿನ ವಿಷಯ ಹಾಗಿರಲಿ. ಇಡೀ ಮರವೇ ಔಷಧದ ಗಣಿ ಎಂಬುದನ್ನು ಆಯುರ್ವೇದದಲ್ಲಿ ಗುರುತಿಸಲಾಗಿದೆ. ಹಣ್ಣು, ಬೇರು, ತೊಗಟೆ ಎಲ್ಲವೂ ಒಂದೊಂದು ರೀತಿಯ ಔಷಧೀಯ ಗುಣವನ್ನು ಹೊಂದಿದ್ದು, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂಬುದನ್ನು ಕಾಣಬಹುದು.

ಅತ್ತಿಯ ಗುಣವನ್ನು ಚರಕರೇ ಬಣ್ಣಿಸಿದ್ದಾರೆ
‌ ಆಯುರ್ವೇದಲ್ಲಿ ಪ್ರಖ್ಯಾತರಾಗಿದ್ದ ಚರಕರರೇ ಅತ್ತಿಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ಬಣ್ಣಿಸಿರುವುದು ಗಮನಾರ್ಹ. ಅತ್ತಿ ಹಣ್ಣಿನ ಸತ್ವವನ್ನು ಚಮಚೆಯಷ್ಟು ದಿನ ಸೇವಿಸುತ್ತಾ ಬಂದರೆ ಸಿಹಿಮೂತ್ರ ರೋಗವನ್ನು ನಿಯಂತ್ರಿಸಬಹುದಂತೆ. ಅಪಕ್ವವಾದ ಹಣ್ಣನ್ನು ಜೇನುತುಪ್ಪದೊಂದಿಗೆ ಅಥವಾ ಹಣ್ಣಿನ ರಸಕ್ಕೆ ಸಕ್ಕರೆಯನ್ನು ಬೆರೆಸಿ ಸುಮಾರು 15 ದಿನಗಳ ಕಾಲ ನಿತ್ಯ ಸೇವಿಸಿದರೆ ಶೀಘ್ರ ವೀರ್ಯಸ್ಪಲನ ಕಡಿಮೆಯಾಗಿ ಮೂತ್ರ ವಿಸರ್ಜನೆ, ಶ್ವೇತಪದರ, ಗೆನೋರಿಯಾ, ಮೂಗಿನಲ್ಲಿ ರಕ್ತಸ್ರಾವ ಇತ್ಯಾದಿ ವ್ಯಾಧಿಗಳು ಗುಣಮುಖವಾಗುತ್ತವೆ.

ಬಾಯಿಯ ದುರ್ಗಂಧ ತಡೆಗೂ ಸಹಕಾರಿ
‌ ಅತ್ತಿ ಹಣ್ಣನ್ನು ಜೇನುತುಪ್ಪ ಮತ್ತು ಸ್ವಲ್ಪ ಉಪ್ಪಿನೊಂದಿಗೆ ಸೇವಿಸುವುದರಿಂದ ಕಾಮಾಲೆ, ಪಿತ್ತಪ್ರಕೋಪ, ಬಾಯಿಹುಣ್ಣು, ಮನೋರೋಗ, ಗರ್ಭಪಾತ ಮೊದಲಾದವುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಹಣ್ಣನ್ನು ಸೇವಿಸುವುದರಿಂದ ಗೂರಲು, ನರಗಳ ದೌರ್ಬಲ್ಯ ಕಡಿಮೆಯಾಗಿ ಉತ್ತೇಜನ ತುಂಬುತ್ತದೆ. ಅತ್ತಿಯ ಎಳಸಾದ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಜಗಿಯುವುದರಿಂದ ಬಾಯಿಯೊಳಗಿನ ಹುಣ್ಣುಗಳು ಮಾಯವಾಗುತ್ತವೆ. ಅಷ್ಟೇ ಅಲ್ಲದೇ ಬಾಯಿಯ ದುರ್ಗಂಧ ತಡೆಗೂ ಸಾಧ್ಯವಾಗುತ್ತದೆ.

ಮೂಲವ್ಯಾಧಿ ರೋಗಗಳಿಗೂ ರಾಮಬಾಣ
ಎಲೆಯ ರಸವನ್ನು ಗೋಧಿ ಹಿಟ್ಟಿನೊಂದಿಗೆ ಕಲೆಸಿ ಕುರದ ಜಾಗಕ್ಕೆ ಲೇಪಿಸುವುದರಿಂದ ಕುರ ಹಣ್ಣಾಗಿ ಒಡೆಯುತ್ತದೆ. ಆಗತಾನೆ ಕಿತ್ತ ಎಲೆಗಳನ್ನು ಅರೆದು ರಸವನ್ನು ಲೇಪಿಸುವುದರಿಂದ ವೃಣಗಳು ವಾಸಿಯಾಗುತ್ತವೆ. ಎಲೆಗಳ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಕುಡಿಯುವುದರಿಂದ ಪಿತ್ತವಿಕಾರವನ್ನು ತಡೆಗಟ್ಟಬಹುದು. ಎಲೆಗಳ ಮೇಲೆ ಕಂಡು ಬರುವ ಗಂಟುಗಳನ್ನು ತೆಗೆದು ಅವುಗಳನ್ನು ಹಾಲಿನಲ್ಲಿ ಹಾಕಿ ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಸಿಡುಬು ಕಲೆಗಳಿಂದಾದ ಗುಳಿ ಮಾಯವಾಗುತ್ತದೆ ಎಂಬುದಾಗಿ ಡಾ.ಅಟ್ಕಿನ್ಸನ್ ಹೇಳಿದ್ದಾರೆ. ಅತ್ತಿ ಮರದ ತೊಗಟೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನುಣುಪಾಗಿ ಪುಡಿಮಾಡಿ ಸುಮಾರು ಐದರಿಂದ ಹತ್ತು ಗ್ರಾಂ ನಷ್ಟು ಪುಡಿಯನ್ನು ಆಗತಾನೆ ಕಡೆದ ಸಿಹಿ ಮಜ್ಜಿಗೆಯೊಂದಿಗೆ ಒಂದು ಲೋಟದಷ್ಟು ಬೆರೆಸಿ ಎರಡು ತಿಂಗಳ ಕಾಲ ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸುವುದರಿಂದ ಅಮಶಂಕೆ, ಅತಿಸಾರ, ಮೂಲವ್ಯಾಧಿ ರೋಗಗಳು ಗುಣಮುಖವಾಗುತ್ತವೆ.

ಆಯುರ್ವೇದ ಔಷಧಿಯಲ್ಲಿ ಪ್ರಮುಖ ಪಾತ್ರ
ಹತ್ತು ಗ್ರಾಂ ಅತ್ತಿ ತೊಗಟೆಯ ಪುಡಿಗೆ ಅರ್ಧ ಔನ್ಸ್‍ನಷ್ಟು ಹಾಗಲಕಾಯಿ ರಸವನ್ನು ಸೇರಿಸಿ ಕುಡಿಯುವುದರಿಂದ ಸಿಹಿ ಮೂತ್ರ ರೋಗವನ್ನು ತಡೆಯಲು ಸಾಧ್ಯವಿದೆ. ಬೇರನ್ನು ಚೆನ್ನಾಗಿ ಕುಟ್ಟಿ ರಸ ತೆಗೆದು ಅದಕ್ಕೆ ಜೀರಿಗೆ ಬೆರೆಸಿ ಎಳನೀರಿನೊಂದಿಗೆ ಮುಂಜಾನೆ ಗೆನೋರಿಯಾ ಕಾಯಿಲೆಯನ್ನು ತಡೆಗಟ್ಟಬಹುದಂತೆ. ಬೇರಿನ ರಸವನ್ನು ತೆಗೆದು ದಿನಕ್ಕೆ ಒಂದೆರಡು ಚಮಚದಷ್ಟು ಸೇವಿಸುತ್ತಾ ಬಂದರೆ ಆರೋಗ್ಯ ವೃದ್ಧಿಯಾಗುತ್ತದೆಯಂತೆ.
ಒಟ್ಟಾರೆ ಆಯುರ್ವೇದ ಔಷಧಿಯಲ್ಲಿ ತನ್ನದೇ ಪಾತ್ರವಹಿಸುತ್ತಾ ಔಷಧಿಯ ಗುಣ ಹೊತ್ತಿರುವ ಅತ್ತಿ ಕಾಡುಮರವಾಗಿ ನಮ್ಮಿಂದ ದೂರವಿರುವ ಕಾರಣ ಅದನ್ನು ಸದುಪಯೋಗಿಸಿಕೊಳ್ಳುವಲ್ಲಿ ನಾವು ನಿರ್ಲಕ್ಷ್ಯ ತೋರುತ್ತಿದ್ದೇವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

error: Content is protected !!