ತುಮಕೂರು : ಯುವ ಸಮುದಾಯ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಕಾನೂನುಪಾಲನೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ನಗರದ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ನಗರದ ಪೋಲೀಸ್ ಇಲಾಖೆ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಎಸ್ ಎಸ್ ಐ ಟಿ ಕ್ಯಾಂಪಸ್ ನ ಪಿ. ಜಿ ಸೆಮಿನಾರ್ ಸಭಾಂಗಣದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ನಗರದ ತಿಲಕ್ ಪಾರ್ಕ್ ಠಾಣೆಯ ಪೋಲೀಸ್ ಇನ್ಸಪೆಕ್ಟರ್ ಮುನಿರಾಜು ಅವರು ವಿದ್ಯಾರ್ಥಿಗಳಿಗೆ ಕಾನೂನಿನ ನಿಯಮವನ್ನು ಪಾಲನೆ ಮಾಡಬೇಕು. ಕಾನೂನಿಗೆ ಬದ್ಧರಾಗಿ ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದರು.
ಕುಡಿತ ಮತ್ತು ಕೆಟ್ಟ ವ್ಯಸನಗಳಿಗೆ ಬಲಿಯಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು ಅಪರಾಧ ಚಟುವಟಿಕೆಗಳು , ಕ್ರೈಂ, ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆಯ ಸಲಹೆಗಳನ್ನು ನೀಡಿದರು.
ಪೊಲೀಸ್ ಸಬ್ ಇನ್ಸಪೆಕ್ಟರ್ ವಿದ್ಯಾಶ್ರೀ ಅವರು ಮಾತನಾಡಿ, ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾವನ್ನು ಹೇಗೆ ಬಳಕೆ ಮತ್ತು ಸೈಬರ್ ಕ್ರೈಂ , ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿದರು. ಭಾರತೀಯ ಯೋಧ ಮತ್ತು ಪೊಲೀಸ್ ಸಬ್ ಇನ್ಸಪೆಕ್ಟರ್ ರಾದ ಟಿ. ಮೂರ್ತಿ ಮಾತನಾಡಿ, ಅಪರಾಧ ಜಗತ್ತಿನಿಂದ ದೂರವಿದ್ದು, ಶಿಸ್ತು ಪಾಲನೆ ಮಾಡುವುದರ ಮೂಲಕ ಗುರಿ ಸಾಧಿಸಿ ,ದೇಶಕ್ಕೆ ಒಳ್ಳೆ ಪ್ರಜೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಪರೀಕ್ಷಾಂಗ ಕುಲಸಚಿವರಾದ ಡಾ.ಕೆ.ಕರುಣಾಕರ್ , ಪ್ರೊ.ರಾಜಾನಾಯಕ್, ಎನ್ ಸಿ ಸಿ ಅಧಿಕಾರಿ ಡಾ. ಜಯಪ್ರಕಾಶ್ , ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಚನ್ನೇಗೌಡ, ರಾಧಾಕೃಷ್ಣ, ಕ್ರೈಂ ಬ್ರಾಂಚ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಭಾಗ್ಯಲಕ್ಷ್ಮಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಚಂದ್ರಕಲಾ, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.