ಕಾಲೇಜು ಲವ್ ಬ್ರೇಕ್ ಅಪ್ ಸ್ಟೋರಿ ವಸ್ತು ವಿಷಯವನ್ನು ಇಟ್ಟುಕೊಂಡು ಈಗಾಗಲೇ ’ಲವ್ ವೈರಸ್’ ಎಂದು ಹರೆಯದ ವಯಸ್ಸಿನ ತಳಮಳಗಳ ಆಲ್ಬಂ ಗೀತೆಯನ್ನು ಚಿತ್ರೀಕರಿಸಿ ಗೆದ್ದಿದ್ದ ತಂಡ ಮತ್ತೆ ಒಂದಾಗಿದೆ. ’ನಿನ್ನ ಸ್ಮೈಲಿಗೆ’ ಎಂದು ಹುಚ್ಚು ಕೋಡಿ ಮನಸ್ಸಿಗೆ ಪ್ರೀತಿ ಬೀಜವನ್ನು ಬಿತ್ತಲು ಸಿದ್ಧವಾಗಿದೆ. ಎಲ್ಲಾ ಹೊಸಬರೇ ತುಂಬಿರುವ ತಂಡದಲ್ಲಿ ಸಾಹಿತ್ಯ-ಪರಿಕಲ್ಪನೆಯೊಂದಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ತುಮಕೂರಿನ ಲಕ್ಷ್ಮೀಕಾಂತ್ ಎಲ್.ವಿ ಅವರು ತಮ್ಮ ಬಿಡುವಿರದ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಹವ್ಯಾಸವಾಗಿ ಸಂಗೀತ-ಸಾಹಿತ್ಯ ಗೀಳನ್ನು ಹಚ್ಚಿಕೊಂಡು ಸಾತ್ವಿಕಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಲವ್ ವೈರಸ್ ಎಂಬ ಆಲ್ಬಂ ಗೀತೆಯಲ್ಲಿ ಹೊಸಬರನ್ನೇ ಪರಿಚಯಿಸಿದ್ದು ಹೊಸಬರ ಹಾಡನ್ನು ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದಾರೆ. ಇದರ ನಡುವೆಯೇ ರೈತರಿಗಾಗಿ ’ಬೆವರಿನ ಕೂಗು’ ಎಂಬ ಅರ್ಪಿತ ಗೀತೆಯೊಂದನ್ನು ತಮ್ಮದೇ ಯೂಟ್ಯೂಬ್ ಚಾನಲ್ ಹುಟ್ಟು ಹಾಕಿ ಅಪ್‌ಲೋಡ್ ಮಾಡಿ ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸುವಂತೆ ಮಾಡಿದ್ದು ಅವರ ಸಾಹಿತ್ಯ ಪ್ರೀತಿಯನ್ನು ಮೆಚ್ಚುವಂತದ್ದು.
ಇದೀಗ ಸದ್ದಿಲ್ಲದೆ ಸಿದ್ಧವಾಗಿ ಇಂದು ಬಿಡುಗಡೆಯಾಗುತ್ತಿದೆ ನಿನ್ನ ಸ್ಮೈಲಿಗೆ ಎಂಬ ಮತ್ತೊಂದು ಆಲ್ಬಂ ಗೀತೆ. ಇನ್ನು ಹಾಡಿಗೆ ಮ್ಯಾಜಿಕಲ್ ಕಂಪೋಸರ್ ರಾಘವ್ ಸುಭಾಷ್ ಅವರ ಸಂಗೀತ ಸಂಯೋಜನೆಯಿದ್ದು, ಸೀಮಾ ಪ್ರಶಸ್ತಿ ಮುಡಿಗೇರಿಸಿಕೊಂಡ ಸುಪ್ರಸಿದ್ಧ ಹಿನ್ನೆಲೆ ಗಾಯಕ ಚಿಂತನ್ ವಿಕಾಸ್ ಹಾಗೂ ಗಾಯಕಿ ಅಪೂರ್ವ ಶ್ರೀಧರ್ ಅವರ ಗಾಯನವಿದೆ. ನಿನ್ನ ಸ್ಮೈಲಿಗೆ ಹಾಡಿನಲ್ಲೂ ಮತ್ತೆ ಹೊಸಬರನ್ನೇ ಪರಿಚಯಿಸಲಾಗಿದ್ದು ಇದೂ ಕೂಡ ಲವ್ ವೈರಸ್‌ನಂತೆ ಜನಮೆಚ್ಚುಗೆ ಪಡಯುವಲ್ಲಿ ಅದರಲ್ಲೂ ಹದಿಹರೆಯದ ಮನಸ್ಸಿಗೆ ಖಂಡಿತಾ ಕಚಗುಳಿ ಇಟ್ಟಿದೆ ಎನ್ನುತ್ತಾರೆ ನಿರ್ದೇಶಕ ಲಕ್ಷ್ಮೀಕಾಂತ್.
ಇನ್ನು ತಾರಾ ಬಳಗದಲ್ಲಿ ತುಮಕೂರಿನ ಸುಪ್ರಸಿದ್ಧ ಡ್ಯಾನ್ಸ್ ಅಕಾಡೆಮಿಯಾದ ಕನಸು ನೃತ್ಯ ಅಕಾಡೆಮಿಯ ಸ್ಟೈಲಿಶ್‌ಸ್ಟಾರ್ ನವೀನ್ ಮುಖ್ಯಭೂಮಿಕೆಯಲ್ಲಿದ್ದು, ಸುಪ್ರಿತಾ ಎಂಬ ನಾಯಕಿಯನ್ನು ಈ ಆಲ್ಬಂ ಗೀತೆಯಲ್ಲಿ ಪರಿಚಯಿಸಲಾಗಿದೆ. ನವೀನ್ ಮತ್ತು ಮಹಿ.ಡಿ ಅವರ ಕಾಂಬಿನೇಶನ್‌ನಲ್ಲಿ ನೃತ್ಯ ಸಂಯೋಜನೆ ಇದ್ದು ಒಳ್ಳೊಳ್ಳೆ ಡ್ಯಾನ್ಸ್ ಸ್ಟೆಪ್‌ಗಳು ನೋಡುಗರ ಮನಸೂರೆಗೊಂಡಿದೆ. ಇನ್ನು ಹಾಡಿನ ಬಹುತೇಕ ಚಿತ್ರೀಕರಣ ಕಳಸ, ಚಿಕ್ಕಮಗಳೂರು, ಮಲ್ಪೆ, ತುಮಕೂರಿನಲ್ಲಿ ನಡೆದಿದ್ದು ದೃಶ್ಯಕಾವ್ಯವನ್ನು ತೋರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಒಟ್ಟಿನಲ್ಲಿ ಸದ್ದಿಲ್ಲದೆ ಬಿಡುಗಡೆಯಾಗುತ್ತಿರುವ ನಿನ್ನ ಸ್ಮೈಲಿಗೆ ಆಲ್ಬಂ ಗೀತೆ ಯಶಸ್ಸು ಕಾಣಲಿ ಎಂದು ಹಾರೈಸುತ್ತಾ ತಂಡಕ್ಕೆ ಶುಭ ಕೋರೋಣ.