ತುಮಕೂರು : ತುಮಕೂರು ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣೆ ರಂಗೇರಿದ್ದು ಇನ್ನೇನು ಎರಡೇ ದಿನ ಬಾಕಿ ಇದೆ ಎನ್ನುವಾಗಲೇ ಹಲವಾರು ಊಹಾಪೋಹಗಳು, ಗಾಸಿಪ್‌ಗಳಿಗೆ ಪುಷ್ಠಿ ನೀಡುವಂತೆ ಕಾಣುತ್ತಿದೆ, ಅಲ್ಲದೇ ತುಮಕೂರು ಜಿಲ್ಲೆಯ ಮೇಲ್ಮನೆ ಸ್ಥಾನ ಕೆಲವರಿಗೆ ಪ್ರತಿಷ್ಠೆಯ ಕಣವಾಗಿದ್ದರೆ, ಇನ್ನೂ ಕೆಲವರಿಗೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ತಮ್ಮ ಅಸ್ತಿತ್ವ ಎಷ್ಟಿದೇ ಎಂಬುದು ತೋರುವುದರ ಸಾಂಕೇತವಾಗಿದೆ.
ಇನ್ನು ಚುನಾವಣಾ ಕಣದಲ್ಲಿ ಬಿಜೆಪಿ ಪಕ್ಷದಿಂದ ಲೋಕೇಶ್ ಗೌಡ, ಕಾಂಗ್ರೆಸ್ ಪಕ್ಷದಿಂದ ರಾಜೇಂದ್ರ ರಾಜಣ್ಣ, ಜೆಡಿಎಸ್ ಪಕ್ಷದಿಂದ ಅನಿಲ್ ಕುಮಾರ್ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು ಎಂದು ಎಲ್ಲರೂ ಭಾವಿಸಿದ್ದರು, ಆದರೆ ಇದೀಗ ಕೊನೆ ಕ್ಷಣದಲ್ಲಿ ಇದು ತ್ರಿಕೋನ ಸ್ಪರ್ಧೆಯಲ್ಲಿ ಬರೀ ಎರಡೇ ಪಕ್ಷದ ಸ್ಪರ್ಧೆ ಎಂದು ತೋರ್ಪಡುತ್ತಿದೆ ಎಂದರೇ ತಪ್ಪಾಗಲಾರದು.
ಏಕೆಂದರೆ ಬಿಜೆಪಿ ಮತ್ತು ಜೆಡಿಎಸ್ ತುಮಕೂರು ಜಿಲ್ಲೆಯಲ್ಲಿ ಒಳ ಒಪ್ಪಂದವಾಗಿದೆ ಎಂಬ ಗುಸು ಗುಸು ಈಗಷ್ಟೇ ಕೇಳಿ ಬರುತ್ತಿದ್ದು, ಹೇಗಾದರೂ ಮಾಡಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣನನ್ನು ಶತಾಯಗತಾಯ ಸೋಲಿಸಲೇ ಬೇಕು ಎಂದು ಕೆಲವರು ಪಣ ತೊಟ್ಟಿದ್ದಾರೆ ಎಂದು ಹೇಳಬಹುದು, ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ಪಕ್ಷದ ಅಭ್ಯರ್ಥಿಯು ತಾನು ಹುಟ್ಟಿದ್ದು ತುಮಕೂರು ಜಿಲ್ಲೆಯಲ್ಲಾದರೂ ಬೆಳೆದದ್ದು, ವ್ಯವಹರಿಸಿದ್ದು, ರಾಜಕೀಯವಾಗಿ ಮುಂದುವರೆದಿದ್ದು ಮಾತ್ರ ನೆರೆಯ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ, ಹಾಗಿದ್ದರೂ ಸಹ ತಮ್ಮ ಪಕ್ಷದ ಶಾಸಕರು, ಮುಖಂಡರು, ಸಂಸದರು ತನ್ನನ್ನು ಕೈಹಿಡಿದು ಮುನ್ನಡೆಸುತ್ತಾರೆ ಎಂಬ ಛಲದಿಂದ ಇಲ್ಲಿ ಬಂದು ಪರಿಷತ್ ಚುನಾವಣೆಯನ್ನು ಎದುರಿಸುತ್ತಿದ್ದೇನೆಂದು ಅಂದುಕೊಂಡಿದ್ದರೇನೋ ಗೊತ್ತಿಲ್ಲ, ಇತ್ತೀಚೆಗೆ ಮಾತ್ರ ಅವರು ಬಲಿಪಶು ಆದಂತೆ ಕಾಣುತ್ತಿದೆ! ಇದಕ್ಕೆ ಪುಷ್ಠಿ ಎಂಬಂತೆ ಅವರು ಸಾಧಾರಣ ವ್ಯಕ್ತಿಗಳ ಕೈಗೆ ಸಿಗುತ್ತಿಲ್ಲ, ಪಕ್ಷದ ಕೆಲ ಮುಖಂಡರನ್ನು ಕೇಳಿದರೇ, ಇನ್ನೊಬ್ಬ ಮುಖಂಡರ ಹೆಸರು ಹೇಳಿ ಅವರನ್ನು ಕೇಳಿ ಎನ್ನುತ್ತಾರೆ, ಅವರನ್ನು ಕೇಳಿದರೇ ಇನ್ನೊಬ್ಬರಿಗೆ ಸೂಚಿಸುತ್ತಾರೆ, ಹೀಗೆ ಅವರನ್ನು ಸಂಪರ್ಕಿಸಲು ಹೊರಟರೆ ಆತ ಸಿಗುವುದೇ ಕಷ್ಠಕರವಾಗಿದೆ, ಅಲ್ಲದೇ ಅವರದೇ ಪಕ್ಷದ ಮುಖಂಡರುಗಳಿಗೆ ಅವರ ಸಂಪರ್ಕದ ಬಗ್ಗೆಯೇ ಮಾಹಿತಿ ಇಲ್ಲ, ಅವರುಗಳು ಹೇಳುವುದು ಇಷ್ಟೇ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕಷ್ಟ ಪಡುತ್ತಿದ್ದೇವೆ ಅಂತಾ; ಅದೇನು ಕಷ್ಟ ಪಡುತ್ತಿದ್ದಾರೋ ಗೊತ್ತಿಲ್ಲ!!!
ಮುಂದುವರೆದು ಬಿಜೆಪಿ ಪಕ್ಷದ ಒಂದು ಹಂತದ ಮುಖಂಡರು ಜೆಡಿಎಸ್‌ನ ಕೆಲ ಮುಖಂಡರೊಂದಿಗೆ ಕೈ ಮಿಲಾಯಿಸಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ, ಅಲ್ಲದೇ ಒಬ್ಬ ಸಾಮಾನ್ಯ ಪಂಚಾಯಿತಿ ಸದಸ್ಯನ ಕೈಗೆ ಸಿಗದ ವ್ಯಕ್ತಿ ತಾನು ಚುನಾಯಿತ ಪ್ರತನಿಧಿ ಆದ ನಂತರ ಈ ಜಿಲ್ಲೆಗೆ ಬಂದು ಸಾಧಿಸುವುದಾದರೂ ಏನು? ಎಂಬುದು ಮತದಾರನ ಪ್ರಶ್ನೆಯಾಗಿದೆ.
ಇನ್ನು ಕಾಂಗ್ರೆಸ್ ವಿಚಾರಕ್ಕೆ ಬಂದರೇ ಕಾಂಗ್ರೆಸ್ ಪಕ್ಷದ ಬಹುತೇಕ ಎಲ್ಲಾ ಮುಖಂಡರು ಸಹಕಾರಿ ಕ್ಷೇತ್ರದ ಅಪ್ರತಿಮ ನಾಯಕ, ಸ್ನೇಹಜೀವಿ ರಾಜಣ್ಣನವರ ಮಗನಾದ ರಾಜೇಂದ್ರ ರಾಜಣ್ಣನನ್ನು ಗೆಲ್ಲಿಸಲು ಶತ ಪ್ರಯತ್ನ ಮಾಡುತ್ತಿದ್ದರೂ ಸಹ, ಕೆಲವರು ಅವರ ವಿರುದ್ಧವೇ ಅಪಪ್ರಚಾರ ಮತ್ತು ಒಡಂಬಡಿಕೆ, ದರ್ಪದ ಮಾತುಗಳನ್ನು ಆಡುತ್ತಾರೆ, ಅಂತಹವರಿಗೆ ಏಕೆ ಮತ ಚಲಾಯಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುತ್ತಿದ್ದಾರೆ, ಅಲ್ಲದೇ ಕಾಂಗ್ರೆಸ್ ಪ್ರಚಾರವು ಕೆಲವು ಭಾಗಗಳಲ್ಲಿ ಮನೆ ಮನೆಗೆ ಸೀಮಿತವಾಗದೇ ಬಹಿರಂಗ ಸಭೆಗಳಿಗೆ ಮಾತ್ರ ಸೀಮಿತವಾಗಿದೆ ಎಂಬುದು ಮತದಾರರ ಅಪೇಕ್ಷೆಯಾಗಿದೆ, ಉಳಿದಂತೆ ಬಹುತೇಕ ಮತದಾರರು ರಾಜೇಂದ್ರ ರಾಜಣ್ಣನ ಕಡೆ ಒಲವು ತೋರಿದ್ದಾರೆ ಎಂದರೂ ತಪ್ಪಾಗಲಾರದು, ಏಕೆಂದರೆ ರಾಜಣ್ಣನವರ ವ್ಯಕ್ತಿತ್ವ ಮತ್ತು ಅವರಿಗೆ ಶ್ರೀರಕ್ಷೆ ಆಗಬಹುದೇನೋ ಗೊತ್ತಿಲ್ಲ ! ಉಳಿದಂತೆ ಕಳೆದ ಬಾರಿ ತನ್ನ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂಬ ಕೊರಗು ಇರುವುದರ ಕಾರಣ ಈ ಭಾರಿ ಹೇಗಾದರೂ ಮಾಡಿ ತನ್ನ ಮಗನನ್ನು ಮೇಲ್ಮನೆಗೆ ಆಯ್ಕೆ ಮಾಡಲೇ ಬೇಕು ಎಂಬ ಹಠವನ್ನು ಹಿಡಿದಿದ್ದಾರೆ. ಅಲ್ಲದೇ ಯಾವುದೇ ಮತದಾರ, ಸಾಮಾನ್ಯ ಪ್ರಜೆಯು ರಾಜಣ್ಣನವರನ್ನು ನೇರವಾಗಿ ಸಂಪರ್ಕ ಮಾಡಬಹುದು, ಏಕೆಂದರೆ ಅವರಾಗಲೀ ಅವರ ಬೆಂಬಲಿಗರಾಗಲೀ ಪ್ರತಿಯೊಬ್ಬರಿಗೂ ಕೈಗೆ ಸಿಗುವಂತಹ ವ್ಯಕ್ತಿ ಎಂಬ ಭಾವನೆ ಎಲ್ಲರ ಮನಸ್ಸಿನಲ್ಲಿಯೂ ಮೂಡಿರುವುದು ವಿಶೇಷ ಸಂಗತಿಯಾಗಿದೆ.
ಇತ್ತ ಸೈಲಂಟಾಗಿ ಎಂಟ್ರಿ ಕೊಟ್ಟಿದ್ದ ಮಾಜಿ ಸರ್ಕಾರಿ ಕೆ.ಎ.ಎಸ್. ಗ್ರೇಡ್ ಅಧಿಕಾರಿ ತಾನು ರಾಜಕೀಯಕ್ಕೆ ಏಕೆ ಬಂದೆನೋ ಎಂಬುದೇ ಅರಿವಿಲ್ಲದಂತೆ ರಾಜಕೀಯಕ್ಕೆ ಧುಮಿಕಿ ಏಕಾಏಕಿ ಮೇಲ್ಮನವಿಗೆ ಆಯ್ಕೆಯಾಗಲು ಹೊರಟಿರುವುದಲ್ಲದೇ, ತಮ್ಮ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿಯವರ ದಿವ್ಯ ಕೃಪಾಶೀರ್ವಾದವೇ ತನಗೆ ಶ್ರೀರಕ್ಷೆ ಎಂದು ಭಾವಿಸಿದ್ದಾರೇನೋ ಗೊತ್ತಿಲ್ಲ, ಅಲ್ಲದೇ, ಸ್ವತಃ ದೇವೇಗೌಡರೇ ತಮ್ಮ ಇಳಿ ವಯಸ್ಸಿನಲ್ಲಿ ಜಿಲ್ಲೆಯಲ್ಲಿ ಕೆಲವು ಭಾಗಗಳಲ್ಲಿ ಓಡಾಡಿ ತಮ್ಮ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡಿರುವುದಲ್ಲದೇ ಮುಂಬರುವ ಚುನಾವಣೆಗಳಲ್ಲೂ ಸಹ ತಾವು ತುಮಕೂರಿನಲ್ಲಿರುವುದಾಗಿ ಬಹಿರಂಗ ಹೇಳಿಕೆಯನ್ನು ಕೊಟ್ಟಿದ್ದಾರೆ, ಇನ್ನು ಜಿಲ್ಲೆಯ ಬಹುತೇಕ ಎಲ್ಲಾ ಜೆಡಿಎಸ್ ನಾಯಕರು ತೆರೆ-ಮರೆಯಲ್ಲಿ ಅಲ್ಲದೇ, ಬಹಿರಂಗವಾಗಿಯೇ ತಮ್ಮ ಪಕ್ಷಕ್ಕೆ ಬಂದ ನೂತನ ಸದಸ್ಯನನ್ನು ಮೇಲ್ಮನಗೆ ಕಳುಹಿಸಲು ಶತಪ್ರಯತ್ನ ಮಾಡುತ್ತಿದ್ದಾರೆ, ಇಷ್ಟರ ಮಧ್ಯೆಯಲ್ಲಿ ಕೆಲವು ಮುಖಂಡರು ಕೆಲ ಪಕ್ಷದೊಂದಿಗೆ ಕೈ ಮಿಲಾಯಿಸಿ ತಮ್ಮ ಬೆಂಬಲಿಗರ ಮತವನ್ನು ಜೆಡಿಎಸ್ ಪಕ್ಷಕ್ಕೆ ಚಲಾಯಿಸುವಂತೆ ಕೋರಿರುವುದಲ್ಲದೇ, ಕೆಲವರ ಸೇಡನ್ನು ತೀರಿಸಿಕೊಳ್ಳಲು ಇದು ಸೂಕ್ತ ಕಾಲವೆಂದು ಪ್ರತಿಯೊಬ್ಬರಿಗೂ ಮನವರಿಕೆ ಆಗುವಂತೆ ಪ್ರಚಾರ ಮಾಡುತ್ತಿದ್ದಾರೆ. ಇನ್ನುಳಿದಂತೆ ಪಕ್ಷದ ಮುಖಂಡರು ಮತದಾರರಲ್ಲಿ ತಮ್ಮನ್ನು ಭೇಟಿ ಮಾಡಿ ಸಾಕು, ಅನಿಲ್‌ರವರಿಂದ ಏನು ಕೆಲಸ ಆಗಬೇಕೋ ಅದನ್ನು ಅವರನ್ನೇ ಭೇಟಿ ಮಾಡಿ ಮಾಡಿಸಿಕೊಳ್ಳಲೇಬೇಕು ಅಂತೇನಿಲ್ಲಾ, ನಾವೇ ವೈಯುಕ್ತಿಕವಾಗಿ ನಿಮ್ಮ ಅಹವಾಲುಗಳನ್ನು ಸ್ವೀಕರಿಸಿ, ನಿಮಗೆ ಪರಿಹಾರ ದೊರಕಿಸಿಕೊಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ, ಮುಂದಿನ ದಿನಗಳಲ್ಲಿ ಅವರೂ ಸಹ ನಮ್ಮಂತೆಯೇ ಇಲ್ಲೇ ಇದ್ದು ಕೆಲಸ ಮಾಡುತ್ತಾರೆಂದು ಬಿಂಬಿಸುತ್ತಿದ್ದಾರೆ.
ಈ ಎಲ್ಲಾ ವಿಶ್ಲೇಷಣೆಗಳನ್ನು ಗಮನಿಸಿದರೆ, ಎಲ್ಲೋ ಒಂದು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರತರವಾದ ಪೈಪೋಟಿ ಇದೆಯೇನೋ ಎಂದು ಕಾಡುತ್ತಿದೆ, ಯಾವುದಕ್ಕೂ ಮತದಾರನೇ ಅಂತಿಮ ತೀರ್ಮಾನವನ್ನು ಮಾಡುವುದು, ಯಾವುದಕ್ಕೂ ಕಾದು ನೋಡಬೇಕಾಗಿದೆ, ಪ್ರಸ್ತುತ ಕಾಣದಲ್ಲಿರುವ ಮೂವರೂ ಹೇಗೆ ತಮ್ಮ ರಾಜಕೀಯವಾಗಿ ಮುಂದುವರೆಯುತ್ತಾರೋ ನೋಡಬೇಕಾಗಿದೆ.