ತುಮಕೂರು – ಇತ್ತೀಚಿನ ದಿನಗಳಲ್ಲಿ ಅನ್ಯಭಾಷಿಗರ ಹಾವಳಿಯಿಂದ ಕನ್ನಡ ಭಾಷೆಯು ಅಳಿವಿನಂಚಿಗೆ ಬರುತ್ತಿದ್ದು, ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದೊದಗಿದೆ ಎಂದು ಸಾಹಿತಿ ಕವಿತಾ ಕೃಷ್ಣ ಆತಂಕ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಲ್ಲಿ ಮಾತನಾಡಿ, ಇಂಗ್ಲೀಷ್, ತೆಲುಗು ಸೇರಿ ಅನ್ಯ ಭಾಷೆಗಳ ವ್ಯಾಮೋಹದಿಂದ ಕನ್ನಡ ಕಣ್ಮರೆಯಾಗುತಿದೆ. ಕನ್ನಡ , ನಾಡು , ನುಡಿ ರಕ್ಷಣೆ ಎಲ್ಲರ ಜವಾಬ್ದಾರಿ ಆಗಿದ್ದು ಅಂತಹ ಕೆಲಸವನ್ನು ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ಮಾಡುತ್ತಾ ಬಂದಿದೆ. ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ, ಬಡ ಇಂಜಿನಿಯರ್ ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು, ವೆಚ್ಚ ಸೇರಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಇವರ ಸಮಾಜಮುಖಿ ಕಾರ್ಯಗಳು ಮುಂದುವರೆಯಲಿ ಎಂದರು. ಸ್ಫೂರ್ತಿ ಡೆವಲರ್ಸ್ ಮಾಲೀಕ ಎಸ್.ಪಿ. ಚಿದಾನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಈಗಾಗಲೆ 7 ವರ್ಷಗಳ ಕನ್ನಡ ಹಬ್ಬವನ್ನು ನಡೆಸಿ, 8ನೇ ವರ್ಷದ ಕನ್ನಡ ಹಬ್ಬವನ್ನು ನಡೆಸುತ್ತಿರುವ ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯ ಕಾರ್ಯಕ್ರಮಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವೈ.ಎನ್.ಹೊಸಕೋಟೆ ನಟರಾಜ್ ಮಾತನಾಡಿ, ಕನ್ನಡ ನಾಡು ನುಡಿ, ಸಂಸ್ಕೃತಿಯ ಉಳಿವಿಗಾಗಿ ಸತತ 8 ವರ್ಷಗಳಿಂದ ಹೋರಾಟಗಳನ್ನು ಮಾಡಿ, ಹತ್ತು ಹಲವು ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇನೆ ಎಂದರು.
ತಮ್ಮ ನಿಧನದ ನಂತರ ತಮ್ಮ ಎರಡು ಕಣ್ಣುಗಳನ್ನು ಡಾ. ರಾಜಕುಮಾರ್ ನೇತ್ರ ನಿಧಿ ಕೇಂದ್ರಕ್ಕೆ ನೀಡುವುದಾಗಿ ಹಾಗೂ ಅಂಗಾಂಗಗಳನ್ನು ದಾನ ನೀಡುವುದಾಗಿ ಘೋಷಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಬಿಜೆಪಿ ಹಿಂದುಳಿದ ಜಿಲ್ಲಾ ಉಪಾಧ್ಯಕ್ಷ ಮಲ್ಲಸಂದ್ರ ಶಿವಣ್ಣ, ಕೆಸಿಡಿಸಿ ನಿರ್ದೇಶಕ ಟಿ.ಆರ್.ಸದಾಶಿವಯ್ಯ, ಬಿಜೆಪಿ (ಒಬಿಸಿ) ಉಪಾಧ್ಯಕ್ಷ ಬನಶಂಕರಿ ಬಾಬು, ಕಾನೂನು ಸಲಹೆಗಾರ ಗಣೇಶ್ ಪ್ರಸಾಸ್, ಮಹಿಳಾ ಘಟಕದ ಅಧ್ಯಕ್ಷೆ ಸುಧಾ, ಅಧ್ಯಾಪಕರಾದ ರಾಘವೇಂದ್ರ, ಭಾವಸಾರ ಯುವ ಬ್ರಿಗೇಡ್ ಅಧ್ಯಕ್ಷ ನಾಗೇಶ್ ವಿ.ಬಿ.ತೇಲ್ಕರ್, ಶ್ರೀಮತಿ ಸೌಮ್ಯಶ್ರೀ, ಟಿ.ಕೆ.ಗಗನ್ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.