ಶಿರಾ:- ಶಿರಾ ತಾಲೂಕಿನ ಬರಗೂರು ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯತ್ ಬರಗೂರು ಮತ್ತು ಸಿಎಮ್ಸಿಎ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆಯುತ್ತಿರುವ ನನ್ನ ಒಳಿತಿಗಾಗಿ ಗ್ರಂಥಾಲಯ ಕಾರ್ಯಕ್ರಮ ಉದ್ಘಾಟನೆಯಲ್ಲಿ ಬರಗೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಯುತ ಜಯರಾಮಯ್ಯ ರವರು ಮಕ್ಕಳಿಗೆ ಚಟುವಟಿಕೆಗಳ ಹಾಳೆಗಳನ್ನು ನೀಡುವ ಮೂಲಕ ಉದ್ಘಾಟನೆಯನ್ನು ಮಾಡಿದರು.
ಮಕ್ಕಳು ಹೆಚ್ಚೆಚ್ಚು ಜ್ಞಾನವನ್ನು ಸಂಪಾದನೆಯನ್ನು ಮಾಡಿಕೊಳ್ಳುವುದರ ಕಡೆ ಗಮನವನ್ನು ಹರಿಸಬೇಕು. ಇದರ ಭಾಗವಾಗಿ ಗ್ರಂಥಾಲಯಗಳಿಗೆ ಭೇಟಿ ನೀಡಿ ಹೆಚ್ಚೆಚ್ಚು ಓದುವುದನ್ನು ಅಭ್ಯಾಸವನ್ನು ಮಾಡಿಕೊಳ್ಳಬೇಕು. ನಮ್ಮ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಮಕ್ಕಳ ಹಾಜರಾತಿ ಹೆಚ್ಚಬೇಕು. ಜೊತೆಗೆ ನಮ್ಮ ಗ್ರಂಥಾಲಯದಲ್ಲಿ ಸಿಎಮ್ಸಿಎ ಸಂಸ್ಥೆಯು ಓದುವ ಬೆಳಕು ಕಾರ್ಯಕ್ರಮದ ಭಾಗವಾಗಿ ನನ್ನ ಒಳಿತಿಗಾಗಿ ಗ್ರಂಥಾಲಯ ದ ಮೂಲಕ ಪ್ರತಿ ಮಗುವಿಗೂ ಅಗತ್ಯ ಕೌಶಲ್ಯಗಳನ್ನು ಕಲಿಸಲು ಮುಂದಾಗಿರುವುದು ಶ್ಲಾಘನೀಯವಾದುದು. ಈ ಮೂಲಕ ಪ್ರತಿ ಮಗುವಿಗೂ ಅಗತ್ಯ ಕೌಶಲ್ಯಗಳನ್ನು ಕಲಿಸಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ನಾಗರಾಜಯ್ಯ ರವರು ರವರು ತಿಳಿಸಿದರು.
ಸಿಎಮ್ಸಿಎ ಬಗ್ಗೆಯು ಸಂಸ್ಥೆಯು 21 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಲಾಭರಹಿತ ಸಂಸ್ಥೆಯಾಗಿದ್ದು, ಸಮಾಜದ ಸರ್ವಜನರನ್ನೊಳಗೊಂಡತಹ ಸುಸ್ಥಿರ ಭಾರತದ ನಿರ್ಮಾಣಕ್ಕಾಗಿ, ಯುವಜನರಲ್ಲಿ ಸಾಮಾಜಿಕ ಕಳಕಳಿ ಮೂಡಿಸಿ, ಅವರನ್ನು ಚಿಂತನಶೀಲರನ್ನಾಗಿ ರೂಪಿಸಿ, ಸಕ್ರಿಯ ನಾಗರಿಕರಾಗುವಂತೆ ಪ್ರೇರೇಪಿಸಿ ಪರಿವರ್ತಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ. ನನ್ನ ಒಳಿತಿಗಾಗಿ ಗ್ರಂಥಾಲಯಕಾರ್ಯಕ್ರಮ ಉದ್ದೇಶಗಳೆಂದರೆ – ಪ್ರತೀ ಮಗುವೂ ಹೊಂದಿರಬೇಕಾದ ಪ್ರಮುಖ ಜೀವನ ಕೌಶಲ್ಯಗಳನ್ನು ಕಲಿಯುವುದು, ಓದುವ ಬಗೆಗೆ ಪ್ರೀತಿ, ಪ್ರಾಣಿ ಮತ್ತು ಗಿಡಗಳನ್ನು ಆರೈಕೆ ಮಾಡುವುದು, ಇತರರಿಗೆ ಕಾಳಜಿ ತೋರಿಸುವುದು, ನೀವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಉತ್ತಮ ನಾಗರಿಕರಾಗುವುದು, ನಿಮಗೆ ನೀವು ಸಹಾಯ ಮಾಡಿಕೊಳ್ಳುವುದನ್ನು ಕಲಿಯುವುದು, ನಿರಾಶೆಯನ್ನು ನಿಭಾಯಿಸುವುದನ್ನು ಕಲಿಯುವುದು, ಗುರಿಯನ್ನು ನಿಗಧಿಪಡಿಸಿ ಅವುಗಳನ್ನು ಸಾಧಿಸುವ ಬಗೆಯನ್ನು ತಿಳಿಯುವುದಾಗಿರುತ್ತದೆ ಎಂದು ಸಿಎಮ್ಸಿಎ ಸಂಸ್ಥೆಯ ಗ್ರಂಥಾಲಯ ಕಾರ್ಯಕ್ರಮದ ಸಂಯೋಜಕರಾದ ಮಂಜುನಾಥ್ ಅಮಲಗೊಂದಿ ರವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನನ್ನ ಒಳಿತಿಗಾಗಿ ಗ್ರಂಥಾಲಯ ಕಾರ್ಯಕ್ರಮದ ಮೆಂಟರ್ ರವರಾದ ಕವಿತಾ ರವರು ಮಕ್ಕಳಿಗೆ ದೇಶಿ ವಿದೇಶಿ ಚಟುವಟಿಕೆಯನ್ನು ಮಾಡಿಸಿದರು. ಮಕ್ಕಳು ಅನೇಕ ಚಟುವಟಿಕೆಗಳನ್ನು ಸ್ಥಳದಲ್ಲಿಯೇ ಮಾಡಿ ಮುಗಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಕ್ಕಳನ್ನು ನೊಂದಣಿ ಮಾಡಿಕೊಳ್ಳಲಾಯಿತು. ಕೆಲವು ಮಕ್ಕಳು ಮಾತನಾಡಿ ಪ್ರತಿ ಭಾನುವಾರದಂದು ಗ್ರಂಥಾಲಯಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. ತಾಲೂಕಿನ 6 ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿಯೂ ಸಹ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು. ಪ್ರತಿ ಗ್ರಾಮ ಪಂಚಾಯತ್ ನಲ್ಲಿ 15 ರಿಂದ 20 ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಯಶೋಧ ದೇವರಾಜ್ ಅರಸ್, ಸದಸ್ಯರಾದ ಮಂಜುನಾಥ್, ಕಾಂತರಾಜು, ಗ್ರಂಥಾಲಯ ಮೇಲ್ವಿಚಾರಕರಾದ ಯಶೋಧ ಎಸ್, ನನ್ನ ಒಳಿತಿಗಾಗಿ ಗ್ರಂಥಾಲಯ ಕಾರ್ಯಕ್ರಮದ ಮೆಂಟರ್ರಾದ ಕವಿತಾಚಿದಾನಂದ್ ರವರು, ರೂಪಾರವರು, ಪಂಚಾಯತ್ ಸಿಬ್ಬಂದಿ ಮತ್ತು ಮಕ್ಕಳು ಹಾಜರಿದ್ದರು.