ತುಮಕೂರು- ಸಹಕಾರಿ ಸಚಿವಾಲಯ ಸ್ಥಾಪಿಸಿ ಸಹಕಾರಿ ರಂಗವನ್ನು ಉತ್ತೇಜಿಸುವ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಂಯುಕ್ತ ಸಹಕಾರಿ ಅಧ್ಯಕ್ಷ ಕೃಷ್ಣಾರೆಡ್ಡಿ ತಿಳಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾದ ಮೇಲೆ ಸಹಕಾರಿ ಸಚಿವಾಲಯವನ್ನು ಸ್ಥಾಪಿಸಲಾಗಿದ್ದು, ಪ್ರತಿ ಎರಡು ಹಳ್ಳಿಗೊಂದು ಫ್ಯಾಕ್ಸ್ ಸ್ಥಾಪನೆ ಮಾಡುವುದರೊಂದಿಗೆ ಪಾರದರ್ಶಕ ಆಡಳಿತ ನೀಡುವ ಭರವಸೆಯನ್ನು ಕೇಂದ್ರ ಸಚಿವ ಅಮಿತ್ ಶಾ ನೀಡಿದ್ದಾರೆ ಎಂದರು.
32 ಕೋಟಿ ಜನರಿಗೆ ಸಹಕಾರಿ ಸದಸ್ಯತ್ವನ್ನು ನೀಡಲಾಗಿದೆ. ಹಾರ್ದ ಕಾಯ್ದೆ ಬಂದು ಇಪ್ಪತ್ತು ವರ್ಷಗಳಾದರೂ ಸಹಕಾರಿ ಕಾಯ್ದೆಯಲ್ಲಿ ತಿದ್ದುಪಡಿಗಳಾಗಿರಲಿಲ್ಲ. ಎಸ್.ಟಿ. ಸೋಮಶೇಖರ್ ಅವರು ಸಹಕಾರಿ ಸಚಿವರಾದ ನಂತರ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರಾಜ್ಯದ ಎಲ್ಲ ಸಹಕಾರಿಗಳಿಗೂ ಸಹಾಯ ಮಾಡಿದ್ದಾರೆ ಎಂದರು.
ದೇಶದ ಒಂಭತ್ತು ರಾಜ್ಯಗಳಲ್ಲಿ ಸ್ವತಂತ್ರವಾಗಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದಲ್ಲಿ ಮಾತ್ರ ಫೆಡರೇಶನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಹಕಾರಿಗಳಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೌಹಾರ್ದ ಸಹಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ತಪ್ಪು ಮಾಡಿದ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ಮೇಲೆ ದೂರು ದಾಖಲಿಸುವ ಅಧಿಕಾರ ಇದೆ ಎಂದರು.
ಜನವರಿಯಲ್ಲಿ ಕೇಂದ್ರ ಸಹಕಾರಿ ಸಚಿವರಾಗಿರುವ ಅಮಿತ್ ಶಾ ಅವರು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಕೇಂದ್ರ ಕಚೇರಿಯನ್ನು ಉದ್ಘಾಟಿಸಲಿದ್ದು, ರಾಜ್ಯ ಸರ್ಕಾರದಿಂದ ಆಮಂತ್ರಣ ಪತ್ರ ತಲುಪಿಸಲಾಗಿದ್ದು, ಆದಾಯ ತೆರಿಗೆ ಇಲಾಖೆಯಿಂದ ಸಹಕಾರಿ ಸಂಸ್ಥೆಗಳಿಗೆ ಆಗುತ್ತಿದ್ದ ತೊಂದರೆಯನ್ನು ಕೇಂದ್ರ ಸರ್ಕಾರ ನಿವಾರಿಸಿದೆ ಎಂದರು.
ಸಹಕಾರಿ ಸಂಸ್ಥೆಗಳು ಕೋವಿಡ್ ನಂತರ ಸಮಸ್ಯೆಗೆ ಸಿಲುಕಿವೆ. ಆದರೂ ಕೋವಿಡ್ ನಿರ್ವಹಣೆಗೆ ಸರ್ಕಾರದೊಂದಿಗೆ ಕೈಜೋಡಿಸಿದ್ದು, 12 ಸಾವಿರ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ಸಹಾಯಧನವನ್ನು ನೀಡಿದ್ದಲ್ಲದೆ, ಕೋವಿಡ್ ಲಸಿಕೆ, ಆಕ್ಸಿಜನ್ ಸಿಲಿಂಡರ್ ನೀಡುವ ಕಾರ್ಯಕ್ಕೆ ಸಹಕಾರ ನೀಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳು ಇ ಸ್ಟಾಪಿಂಗ್ ಮಾರಾಟ ಮಾಡುವ ಮೂಲಕ ಒಂದು ಕೋಟಿ ರಾಜಸ್ವವನ್ನು ನೀಡುತ್ತಿದ್ದು, ರಾಜ್ಯದಲ್ಲಿಯೇ ಒಂದು ಕೋಟಿ ಸಹಕಾರಿ ಸದಸ್ಯರಿದ್ದಾರೆ. ಸಹಕಾರ ರಂಗ ಸಾರ್ವಜನಿಕ ಸೇವೆ ಮಾಡುತ್ತಿದ್ದು, ಸ್ವಹಿತಾಸಕ್ತಿ ಇಲ್ಲದೆ ಸಹಕಾರಿ ರಂಗ ಬೆಳೆಯುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೌಹಾರ್ದ ಸಹಕಾರಿ ನಿರ್ದೇಶಕ ಗಂಗಾಧರಯ್ಯ, ಸಹಕಾರಿಗಳಾದ ಲೂಯಸ್ ಪಾಯಸ್, ಬಿ.ಎಸ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.