ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭೇಟಿ

ತುಮಕೂರು ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ತುಮಕೂರಿನ ವಿವಿಧ ಬಡಾವಣೆಗಳಲ್ಲಿ ಹಲವಾರು ಮನೆಗಳು ಬಿದಿದ್ದು ಹಾಗೂ ಹಲವಾರು ಮನೆಗಳಿಗೆ ಮಳೆಯ ನೀರು ನುಗ್ಗಿ ಸಮಸ್ಯೆ ಉಂಟಾಗಿದ್ದು, ಈ ಪ್ರದೇಶಗಳಿಗೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ದಿಬ್ಬೂರು ರಸ್ತೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಅಮಾನಿಕೆರೆಯ ಕೋಡಿಯಿಂದ ಭೀಮಸಂದ್ರದ ಕೆರೆಯವರೆಗೂ ರಾಜಗಾಲುವೆಯ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಕೆರೆಯ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಭೀಮಸಂದ್ರ ರೈಲ್ವೇ ಅಂಡರ್‌ಪಾಸ್‌ಗೆ ಭೇಟಿ ನೀಡಿ, ಈಗಾಗಲೇ ರೈಲ್ವೇ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ನೀಡಲಾಗಿದ್ದು, ಮೂಲಭೂತ ಸೌಕರ್ಯ ಇಲಾಖೆಯಡಿಯಲ್ಲಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.


ನಂತರ ನಗರದ ಜಯಪುರದಲ್ಲಿ ಸುಮಾರು ೮ ಮನೆಗಳು ಭಾರಿ ಮಳೆಗೆ ಬಿದ್ದು ಹೋಗಿದ್ದು, ಸದರಿ ಬಿದ್ದ ಮನೆಗಳ ಕುಟುಂಬವನ್ನು ಸಂಪರ್ಕಿಸಿ, ಮಹಾನಗರಪಾಲಿಕೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ದೊರೆಯುವ ಸಹಾಯವನ್ನು ತುರ್ತಾಗಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಯಾತಸಂದ್ರದ ಎಸ್.ಎಲ್.ಎನ್ ನಗರ, ಎಳ್ಳಾರಬಂಡೆಯಲ್ಲೂ ಸಹ ಮಳೆಗೆ ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಈ ಪ್ರದೇಶಗಳಿಗೆ ಭೇಟಿ ನೀಡಿ, ತುರ್ತಾಗಿ ರಕ್ಷಣಾ ಕಾರ್ಯ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.


ಗಂಗಸಂದ್ರದ ಯು.ಜಿ.ಡಿ ಸಂಸ್ಕರಣಾ ಘಟಕಕ್ಕೆ ಶಾಸಕರು ಭೇಟಿ ನೀಡಿ, ಯು.ಜಿ.ಡಿ ನೀರು ಅಕ್ಕಪಕ್ಕದ ಕೃಷಿ ಭೂಮಿಗಳಿಗೆ ಹಾಗೆಯೇ ಹರಿಯ ಬಿಡಲಾಗಿದೆ ಎಂದು ನನ್ನ ಬಳಿ ಹಲವಾರು ರೈತರು ದೂರನ್ನು ಸಲ್ಲಿಸಿದ್ದಾರೆ, ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕೆಂದು ಕರ್ನಾಟಕ ನೀರು ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಸದಸ್ಯರಾದ ವೀಣಾ ಮನೋಹರಗೌಡ, ಪ್ರಭಾವತಿ ಸುಧೀಶ್ವರ್, ಶಶಿಕಲಾ ಗಂಗಹನುಮಯ್ಯ, ನವೀನ ಅರುಣ ಹಾಗೂ ಮುಂತಾದ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!