ತುಮಕೂರು: ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಗೆ ಮಹತ್ವದ ಸ್ಥಾನವಿದ್ದು ನಮ್ಮ ಭಾಷೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವತ್ತ ಕನ್ನಡಿಗರು ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ನಮ್ಮ ರಾಜ್ಯ ಅತ್ಯುನ್ನತ ಸಾಂಸ್ಕೃತಿಕ ಪಾರಂಪರಿಕ ವೈಭವವನ್ನು ಉಳಿಸಿ, ಬೆಳೆಸಿ ಪೋಷಿಸುವ ಮತ್ತು ಉನ್ನತೀಕರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ನಮ್ಮ ಕನ್ನಡ ಬಾವುಟದ ಬಣ್ಣದ ಸಂಕೇತ, ಹರಿಶಿನ ಮತ್ತು ಕುಂಕುಮವಾಗಿದೆ, ಅರಿಶಿನ ಶಾಂತಿ ಮಂತ್ರ ನೀಡಿದರೆ, ಕುಂಕುಮ ಕ್ರಾಂತಿಯ ಸಂಕೇತವಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯಾಚರಣೆ ದಿನವಾಗಬೇಕು, ಈ ನಿಟ್ಟಿನಲ್ಲಿ ನಾವೆಲ್ಲರೂ ಸಜ್ಜಾಗಬೇಕಾಗಿದೆ ಎಂದು ಶ್ರೀದೇವಿ ವೈದ್ಯಕೀಯ ಅಧೀಕ್ಷಕರಾದ ಡಾ. ಚೆನ್ನಮಲ್ಲಯ್ಯನವರು ತಿಳಿಸಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ನ.1 ರಂದು ಬೆಳಿಗ್ಗೆ 10 ಗಂಟೆಗೆ 66 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಂ.ಆರ್. ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್ ಹಾಗೂ ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್‌ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಪೂಜಿಸುತ್ತಾ ಮಾತನಾಡುತ್ತಾ ಅವರು ಕನ್ನಡ ಭಾಷೆಯು ಕೇವಲ ಭಾಷೆಯಲ್ಲ, ಅದೊಂದು ನಾಡಿನ ಜನತೆಯ ಜೀವನ ಕ್ರಮ ಸಾಂಸ್ಕೃತಿಕ ಮತ್ತು ಪರಂಪರೆಯ ಪ್ರತೀತವಾಗಿದ್ದು ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಕನ್ನಡ ಭಾಷೆಯನ್ನು ಉಳಿಸಲು ಮತ್ತು ಬೆಳೆಸಲು ಸಂಕಲ್ಪ ಮಾಡಬೇಕು, ಜಗತ್ತಿನ ಭಾಷೆಗಳಿಂತಲೂ ಕನ್ನಡ ಭಾಷೆಯು ವೈಜ್ಞಾನಿಕ ಮತ್ತು ಕ್ರಮಬದ್ಧ ಭಾಷೆಯಾಗಿದೆ. ಕನ್ನಡ ಕಂಪನ್ನು ದೇಶ ವಿದೇಶಗಳಲ್ಲಿಯೂ ಪಸರಿಸುವ ಕೆಲಸ ಎಲ್ಲರದಾಗಲಿ, ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉತ್ತಂಗಕ್ಕೆ ಏರಿಸಿ ನಾಡು, ನುಡಿ ಜಲಕ್ಕಾಗಿ ಶ್ರಮಿಸಿದ ಮಹನೀಯರ ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀದೇವಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಡಾ.ಟಿ.ಎ.ಈಶ್ವರಪ್ಪನವರು ಮಾತನಾಡುತ್ತಾ ಕನ್ನಡದ ರತ್ನತ್ರಯರರಾದ ಪಂಪ, ಪೊನ್ನ, ರನ್ನ, ನೆನಪಿಸಿಕೊಳ್ಳುತ್ತಾ ಕರ್ನಾಟಕದಂತಹ ಭವ್ಯ ನಾಡಿನಲ್ಲಿ ವಾಸಿಸುತ್ತಿರುವ ನಾವು ನಮ್ಮ ನಾಡಿನ ಏಳಿಗೆಗೆ ದುಡಿದ ಮಹನೀಯರನ್ನು ಸ್ಮರಿಸುತ್ತಾ ನಾಡಿನ ಇತಿಹಾಸ, ಸಂಸ್ಕೃತಿಯನ್ನು ಮೆಲುಕು ಹಾಕುತ್ತಾ ರಾಜ್ಯೋತ್ಸವ ಸಂಭ್ರಮಾ ಚರಣೆಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದು, ಆಡಳಿತ ಭಾಷೆಯಾಗಿ ಕನ್ನಡವನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ವೈದ್ಯಕೀಯ ಅಧೀಕ್ಷಕರಾದ ಡಾ. ಚೆನ್ನಮಲ್ಲಯ್ಯ, ಶ್ರೀದೇವಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಡಾ.ಟಿ.ಎ.ಈಶ್ವರಪ್ಪ, ಬೀರೆಂದ್ರಪಾಟೀಲ್.ಜಿ.ಆರ್, ಭದ್ರತಾ ಸಿಬ್ಬಂದಿಯ ಮುಖ್ಯಸ್ಥರಾದ ಶ್ರೀಧರ್, ಸೂಪರ್‌ವೈಸರ್ ರಾಮು, ನಿಜಲಿಂಗಪ್ಪ, ಪ್ರಜ್ವಲ್, ಪ್ರದೀಪ್, ಗಂಗರಾಜು, ಅನಿಲ್, ಹಾಗೂ ವಿವಿಧ ವಿಭಾಗದ ವೈದ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.