ಶ್ರೀ ಗಣೇಶ : ಚತುರ್ಥಿ ಮಹತ್ವ

ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.

ವಿಧಗಳು

ಶುಕ್ಲ ಪಕ್ಷದಲ್ಲಿನ ಚತುರ್ಥಿಗೆ ವಿನಾಯಕೀ ಮತ್ತು ಕೃಷ್ಣ ಪಕ್ಷದಲ್ಲಿನ ಚತುರ್ಥಿಗೆ ಸಂಕಷ್ಟಿ ಎನ್ನುತ್ತಾರೆ.

ವಿನಾಯಕೀ : ಈ ದಿನದ ಪೂಜಾವಿಧಿಯಲ್ಲಿ ಸಂಕಷ್ಟಿಯಂತೆ ಚಂದ್ರದರ್ಶನ ಮತ್ತು ಚಂದ್ರಪೂಜೆ ಇರುವುದಿಲ್ಲ. ದಿನವಿಡೀ ಉಪವಾಸ ಮಾಡಿ ಮರುದಿನ ಪಾರಣೆ (ಊಟ) ಮಾಡುತ್ತಾರೆ. ಈ ವ್ರತದ ದೇವತೆ ‘ಶ್ರೀ ಸಿದ್ಧಿವಿನಾಯಕ’ನಾಗಿದ್ದು, ಎಲ್ಲವೂ ಒಳ್ಳೆಯದಾಗಬೇಕೆಂದು ವಿನಾಯಕೀಯನ್ನು ಮಾಡುತ್ತಾರೆ.

ಸಂಕಷ್ಟಿ : ಸಂಕಷ್ಟವೆಂದರೆ ಸಂಕಟ. ನಾವು ಪೃಥ್ವಿಯಿಂದ ಬರುವ ೩೬೦ ಲಹರಿಗಳಿಂದ ಆವರಿಸಲ್ಪಟ್ಟಿರುತ್ತೇವೆ, ಇದರಿಂದ ಶರೀರದಲ್ಲಿನ ಪ್ರವಾಹಗಳು ಬಂಧಿತವಾಗುತ್ತವೆ. ಇದನ್ನೇ ಸಂಕಟ ಎನ್ನುತ್ತಾರೆ. ಕೃಷ್ಣ ಪಕ್ಷದಲ್ಲಿ ಈ ೩೬೦ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದರಿಂದ ಶರೀರದಲ್ಲಿನ ಎಲ್ಲ ನಾಡಿಗಳಲ್ಲಿನ ಪ್ರವಾಹವು ಬಂಧಿತವಾಗುತ್ತವೆ. ಈ ಸಂಕಟದ ನಿವಾರಣೆಗಾಗಿ ಸಂಕಷ್ಟಿಯನ್ನು ಮಾಡುತ್ತಾರೆ. ೩೬೦ ಲಹರಿಗಳ ಮೇಲೆ ಗಣಪತಿಯ ಅಧಿಪತ್ಯವಿದೆ; ಅವನ ಉಪಾಸನೆಯಿಂದ ೩೬೦ ಲಹರಿಗಳ ಸಂಕಟದಿಂದ ಮುಕ್ತಿ ಸಿಗುತ್ತದೆ.

ಈ ದಿನ ದಿನವಿಡೀ ಉಪವಾಸ ಮಾಡಬೇಕು. ಸಂಪೂರ್ಣ ನಿರಾಹಾರಿಯಾಗಿರಬೇಕು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆಯ ಸಿದ್ಧತೆಯನ್ನು ಮಾಡಬೇಕು. ರಾತ್ರಿ ಚಂದ್ರದರ್ಶನದ ನಂತರ, ಮನೆಯಲ್ಲಿ ಶ್ರೀ ಗಣೇಶನ ವಿಗ್ರಹವಿದ್ದರೆ ಅದಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ವಿಗ್ರಹವಿಲ್ಲದಿದ್ದರೆ ಅಕ್ಷತೆಯ ಮೇಲೆ ಬಟ್ಟಲಡಿಕೆಯನ್ನಿಟ್ಟು ಅದೇ ರೀತಿ ಪೂಜೆಯನ್ನು ಮಾಡಬೇಕು. ಅಥರ್ವಶೀರ್ಷದ ಇಪ್ಪತ್ತೊಂದು ಆವರ್ತನಗಳನ್ನು ಹೇಳಬೇಕು. ಚಂದ್ರನಿಗೆ ಅರ್ಘ್ಯವನ್ನು ಕೊಡಬೇಕು ಮತ್ತು ಅವನ ದಿಕ್ಕಿಗೆ ಗಂಧ, ಹೂವು ಮತ್ತು ಅಕ್ಷತೆಯನ್ನು ಹಾರಿಸಿ ನಮಸ್ಕಾರ ಮಾಡಬೇಕು. ಚತುರ್ಥಿಯ ತಿಥಿಗೆ ಹರಿವಾಣದಲ್ಲಿ ಅರ್ಘ್ಯವನ್ನು ಕೊಡಬೇಕು. ಕೊನೆಗೆ ಮಹಾನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ‘ಶ್ರೀ ವಿಘ್ನವಿನಾಯಕ’ನು ಈ ವ್ರತದ ದೇವನಾಗಿದ್ದಾನೆ.

ಅಂಗಾರಕ : ಮಂಗಳವಾರ ಚತುರ್ಥಿ ಬಂದರೆ ಅದಕ್ಕೆ ಅಂಗಾರಕ ಎನ್ನುತ್ತಾರೆ. ಅಂಗಾರ ಎಂದರೆ ಮಂಗಳಗ್ರಹ ಅಥವಾ ಭೂಮಿ. ಗಣಪತಿಯ ಅಧಿಪತ್ಯವು ಪೃಥ್ವಿಯ ಮೇಲೆ ಇರುವಂತೆ ಮಂಗಳ ಗ್ರಹದ ಮೇಲೂ ಇದೆ. ಗಣಪತಿ ಮತ್ತು ಮಂಗಳ ಗ್ರಹದ ಬಣ್ಣವೂ ಒಂದೇ ಆಗಿದೆ. ಅಂಗಾರಕದ ದಿನ ಪೃಥ್ವಿಯ ಮೇಲೆ ಗಣೇಶನ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಹಾಗೆಯೇ ಮಂಗಳ ಗ್ರಹದಿಂದಲೂ ಗಣೇಶನ ಸ್ಪಂದನಗಳು ಪೃಥ್ವಿಯ ಮೇಲೆ ಬರುತ್ತವೆ. ಇದರಿಂದಾಗಿ ಚಂದ್ರನಿಂದ ಬರುವ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ನಾಶವಾಗುತ್ತವೆ; ಆದುದರಿಂದಲೇ ‘ಅಂಗಾರಕ ವಿನಾಯಕೀ’ ಮತ್ತು ‘ಅಂಗಾರಕ ಸಂಕಷ್ಟಿ’ಯ ಫಲವು ವರ್ಷಪೂರ್ತಿ ಮಾಡಿದ ಕ್ರಮವಾಗಿ ವಿನಾಯಕಿ ಮತ್ತು ಸಂಕಷ್ಟಿಗಳಷ್ಟೇ ಇರುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ನಿರ್ಮಿಸಿದ ಗ್ರಂಥ ‘ಶ್ರೀ ಗಣಪತಿ’)

ಶ್ರೀ ಗಣಪತಿಯ ಪೂಜೆಯ ಬಗ್ಗೆ ಶಾಸ್ತ್ರೀಯ ಮಾಹಿತಿಯನ್ನು ಪಡೆಯಲು ಇಂದೇ ಡೌನ್ಲೋಡ್ ಮಾಡಿ Ganesh Puja and Aarti  App : https://play.google.com/store/apps/details?id=ganesh.puja.aarti

ಸಂಗ್ರಹ – ಶ್ರೀ. ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 93425 99299

Leave a Reply

Your email address will not be published. Required fields are marked *

error: Content is protected !!