ತುಮಕೂರು- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪಾರದರ್ಶಕ, ಪ್ರಾಮಾಣಿಕ ಹಾಗೂ ಮೌಲ್ಯಯುತ ಗುಣಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪೋದಾರ್ ಶಾಲೆಯ ಪ್ರಾಂಶುಪಾಲರಾದ ಡಾ. ಲವ ಎಂ.ಬಿ. ಕರೆ ನೀಡಿದರು.
ನಗರದ ಹೊರವಲಯದ ಗೂಳೂರು ಸಮೀಪ ಇರುವ ಪೋದಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮರ ಆದರ್ಶ ಗುಣಗಳನ್ನು ಪಾಲಿಸುವ ಮೂಲಕ ವಿದ್ಯಾರ್ಥಿಗಳು ರಾಷ್ಟ್ರದ ಅಭಿದ್ಧಿಗೆ ಶ್ರಮಿಸಬೇಕು ಎಂದು ಅವರು ಸಲಹೆ ಮಾಡಿದರು.
ಗಾಂಧೀಜಿಯವರ ವೈಯುಕ್ತಿಕ ಹಾಗೂ ಸಾರ್ವಜನಿಕ ಜೀವನ ಸಂಪೂರ್ಣವಾಗಿ ಪಾರದರ್ಶಕತೆಯಿಂದ ಕೂಡಿತ್ತು. ಪಾರದರ್ಶಕತೆಯಿಂದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದೆಂದು ಅವರು ಮನಗಂಡಿದ್ದರು. ಅತ್ಯಂತ ಸರಳ ಜೀವನ ಹಾಗೂ ಉತ್ತಮ ಚಿಂತನೆ ಗಾಂಧೀಜಿಯವರ ಮತ್ತೊಂದು ವಿಶೇಷವಾಗಿತ್ತು ಎಂದರು.
ಬದುಕನ್ನು ಸುಂದರವಾಗಿಸಿಕೊಳ್ಳಲು ಸರಳತೆ ಇರಬೇಕು. ನಮ್ಮ ಮುಂದಿನ ಪೀಳಿಗೆಗೂ ಸರಳತೆ ಹಾಗೂ ಉತ್ತಮ ಚಿಂತನೆಯ ಶ್ರೇಷ್ಠತೆ ಬಗ್ಗೆ ತಿಳಿಸಬೇಕು. ಖಾದಿ ಧರಿಸಿದ ಕೂಡಲೇ ಗಾಂಧಿ ಆದರ್ಶಗಳನ್ನು ರೂಢಿಸಿಕೊಂಡಂತಾಗುವುದಿಲ್ಲ. ಅವರ ತತ್ವಾದರ್ಶಗಳನ್ನು ಪಾಲಿಸಿದಾಗ ಮಾತ್ರ ಗಾಂಧೀಜಿಯವರಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದು ಹೇಳಿದರು.
ಹಾಗೆಯೇ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಸಹ ಅಧಿಕಾರ ಇದ್ದರೂ ಯಾವುದೇ ರೀತಿಯ ಅಹಂ ತೋರದೆ ಮಾನವೀಯ ಮೌಲ್ಯಗಳೊಂದಿಗೆ ಅಧಿಕಾರ ನಡೆಸುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.