ಮಂಗಳೂರು- ನವರಾತ್ರಿ ಬಂತೆಂದರೆ ಸಾಕು ಕರಾವಳಿಯಲ್ಲಿ ಹುಲಿವೇಷದ ಜೊತೆಗೆ ವಿವಿಧ ವೇಷಗಳು ಅಲ್ಲಲ್ಲಿ ಕಾಣುತ್ತದೆ. ಸಾಮಾನ್ಯವಾಗಿ ದಸರಾ ಸಂದರ್ಭದಲ್ಲಿ ಕಲಾವಿದರು ಹುಲಿವೇಷದ ತಂಡವನ್ನು ರಚಿಸಿ ನವರಾತ್ರಿಯ ಒಂಭತ್ತು ದಿನಗಳ ಕಾಲ ಊರೂರು ತಿರುಗಿ, ಹುಲಿಕುಣಿತ ಮಾಡುತ್ತಾರೆ. ಹೀಗೆ ಒಂಭತ್ತು ದಿನ ಜನ ನೀಡಿದ ಹಣವನ್ನು ಒಂಭತ್ತನೆಯ ದಿನದಂದು ದೇವಿ ಸನ್ನಿಧಿಗೆ ಹೋಗಿ, ಬಂದ ಹಣದಲ್ಲಿ ದೇವಸ್ಥಾನಕ್ಕೆ ಅರ್ಧಪಾಲು ನೀಡಿ ಹರಕೆ ತೀರಿಸಿಕೊಳ್ಳುತ್ತಾರೆ.
ಹುಲಿವೇಷದ ಜೊತಗೆ ಬಾವಲಿ, ಯಕ್ಷಗಾನ ವೇಷಧಾರಿಗಳು, ಮಂತ್ರವಾದಿ, ಕರಡಿ, ಸಿಂಹ ವೇಷಗಳೂ ದಸರಾ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಕಾಣಸಿಗುತ್ತವೆ. ಆದರೆ ಈ ಬಾರಿ ಜನಮೆಚ್ಚುಗೆ ಗಳಿಸಿರುವುದು ಆನೆಯ ವೇಷ.
ವಿಭಿನ್ನವಾಗಿರುವ ಆನೆ ವೇಷ ಸದ್ಯ ಕರಾವಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಗೋಣಿ ಚೀಲದಲ್ಲಿ ತಯಾರಿಸಿರುವ ಆನೆ ವೇಷ ನಿಜ ಆನೆಯನ್ನೇ ಹೋಲುತ್ತಿದೆ. ಆನೆಯ ವೇಷದೊಳಗೆ ಶಶಿಕಾಂತ್ ಮತ್ತು ಗಣೇಶ್ ಎಂಬುವವರಿದ್ದರೆ, ಮಾವುತನಾಗಿ ದಿನೇಶ್ ಸೇವೆ ಸಲ್ಲಿಸುತ್ತಿದ್ದಾರೆ.
ಕೇವಲ ಒಂದು ಸಾವಿರ ರೂಪಾಯಿ ಒಳಗೆ ಈ ಆನೆಯ ಪೃತಿಕೃತಿಯನ್ನು ತಯಾರಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ದೇವಿಯ ಸೇವೆಗಾಗಿ ವೇಷಗಳನ್ನು ಮಾಡುತ್ತಿದ್ದೇವೆ. ಕಳೆದ ವರ್ಷಗಳಲ್ಲಿ ಸಿಂಹ ಸೇರಿದಂತೆ ವಿವಿಧ ವೇಷಗಳನ್ನು ಮಾಡಿದ್ದೇವು, ಈ ಬಾರಿ ಆನೆಯ ವೇಷ ಮಾಡಿದ್ದೇವೆ. ಜನರಿಗೆ ತುಂಬಾ ಖುಷಿಯಾಗಿದೆ. ಈ ಕಾರ್ಯ ಹಣಕ್ಕಾಗಿ ಮಾಡುತ್ತಿಲ್ಲ. ದೇವಿಯ ಸೇವೆ ಅಂತಾ ಪರಿಗಣಿಸಿ ಮಾಡುತ್ತಿದ್ದೇವೆ ಅಂತಾ ದಿನೇಶ್ ಹೇಳಿದ್ದಾರೆ.