ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಐಷಾರಾಮಿ ಪ್ರದೇಶಗಳಲ್ಲಿ ಒಂದು ಎಂದೇ ಕರೆಸಿಕೊಳ್ಳುವ ಇಂದಿರಾನಗರದ 100 ಅಡಿ ರಸ್ತೆ ಗುಂಡಿಗಳಿಂದನೇ ತುಂಬಿ ಹೋಗಿದ್ದು, ಅವ್ಯವಸ್ಥೆಯ ಆಗರವಾಗಿದೆ.
ಇಂದಿರಾನಗರ ನೂರು (100) ಅಡಿ ರಸ್ತೆ, ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆ ಜೊತೆ ಹಳೆ ಮದ್ರಾಸ್ ರಸ್ತೆ ಸಂಪರ್ಕಿಸುತ್ತದೆ. ಒಂದು ಕೊನೆಯಲ್ಲಿ ಮಧ್ಯಂತರ ವರ್ತುಲ ರಸ್ತೆ ಫ್ಲೈಓವರ್ ಜಂಕ್ಷನ್ (ದೊಮ್ಮಲೂರು ಜಂಕ್ಷನ್), ಮತ್ತೊಂದು ಕೊನೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆ ಇದೆ. ಕಳೆದ ಕೆಲವು ವರ್ಷಗಳಿಂದ 100 ಅಡಿ ರಸ್ತೆ ಬೆಂಗಳೂರು ವಾಣಿಜ್ಯಿಕವಾಗಿ ಪ್ರಮುಖ ಉನ್ನತ ರಸ್ತೆಗಳ ಆಗಿ ಮಾರ್ಪಟ್ಟಿದೆ.
ರಸ್ತೆಯ ಕೆಟ್ಟ ಪರಿಸ್ಥಿತಿ ಬಗ್ಗೆ ಸಾರ್ವಜನಿಕರು ಕೂ ಮಾಡಿದ್ದೂ, ದಿನ ಬೆಳಿಗ್ಗೆ ಈ ರಸ್ತೆಯಲ್ಲಿ ಕಚೇರಿಗೆ ಹೋಗುವುದೆಂದರೆ ಯಮ ಯಾತನೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
‘ಐಟಿ ಕಂಪೆನಿಗಳೇ ಸಾಲು ಸಾಲು ಚಕ್ಕಳ ಮಕ್ಕಳ ಹಾಕಿ ಕೂತಂತಿರುವ ಇಂದಿರಾನಗರದ ರೋಡು ಮೈಕೈ ತೂತು ಮಾಡಿಕೊಂಡು ಸೊರಗಿ ಸತ್ತು ಹೋಗಿದೆ.. ಅದರ ಅವಸ್ಥೆ ನೋಡಿದರೆ ಆ ರೋಡಿಗೆ ಜನ್ಮವಿತ್ತವರ ಮುಖ ನೋಡ್ಬೇಕಲ್ಲ ಅನ್ಸತ್ತೆ, ಅದನ್ನ ಏನಾದ್ರು ಮಾಡ್ರಿ ರೀ ಶ್ರೀಮಾನ್ ಬೆಂಗಳೂರನವ್ರೆ! ಪಾಪ ಕೆಂಪೇಗೌಡ್ರು!’ ಎಂದು ಸುನಿಲ್ ಎನ್ನುವವರು ಕೂ ಮಾಡಿದ್ದಾರೆ.