ತುಮಕೂರು: ನಗರದ ವಿವಿಧೆಡೆ ಕಾಗದ ಆಯುವವರ ಯೋಗಕ್ಷೇಮ ಅಭಿವೃದ್ಧಿಗಾಗಿ ಕೆಲಸ ನಿರ್ವಹಣೆ ಮಾಡುತ್ತಿರುವ ಹಸಿರು ದಳ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಮಧುಗಿರಿ ನಗರದ ವಾಲ್ಮೀಕಿ ನಗರ ಮತ್ತು ಶಿರಾ ನಗರದ ಜಾಜಿಕಟ್ಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು, ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ವೈದ್ಯರು ಪರೀಕ್ಷಿಸಿದರು ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷದಗಳನ್ನು ನೀಡಿದರು.
ಆರೋಗ್ಯ ಇದ್ದರೆ ನಾವು ಸುಖವಾಗಿ ಬಾಳಬಹುದು. ಕಷ್ಟಪಟ್ಟು ದುಡಿದ ಹಣವನ್ನು ಆಸ್ಪತ್ರೆಗೆ ಸುರಿಯುವ ಬದಲು ಕಾಯಿಲೆ ಬರದಂತೆ ತಡೆಯುವುದು ಜಾಣತನ. ಆದ್ದರಿಂದ ಎಲ್ಲರೂ ಆರೋಗ್ಯ ದೃಷ್ಟಿಯಿಂದ ಕಾಯಿಲೆ ಬರದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ವೈದ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಹಸಿರು ದಳ ಸಿಬ್ಬಂದಿಯಾದ ಮೋಹನ್ ಕುಮಾರ್, ದಿವ್ಯ ಶ್ರೀ. ಡಿ, ನರಸಿಂಹರಾಜು ಸಿ.ಎಲ್, ವೈದ್ಯರ ತಂಡ, ಸ್ವಯಂಸೇವಕರು ಹಾಗೂ ಇತರೆ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.