ರಾಷ್ಟ್ರೀಯ ಯುವ ಆಯೋಗ ಸ್ಥಾಪನೆಗೆ ಒತ್ತಾಯ

ತುಮಕೂರು: ಯುವಕರ ಸಮಗ್ರ ಅಭಿವೃದ್ಧಿಗಾಗಿ ದೇಶದಲ್ಲಿ ರಾಷ್ಟ್ರೀಯ ಯುವ ಆಯೋಗ ಸ್ಥಾಪನೆಯಾಗಬೇಕಿದೆ ಎಂದು ಯುವಚೇತನ ನವದೆಹಲಿ ಇದರ ರಾಷ್ಟ್ರೀಯ ಸಂಚಾಲಕ ರೋಹಿತ್ ಕುಮಾರ್ ಸಿಂಗ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ’ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಯುವಕರ ಪಾತ್ರ’ ಕುರಿತು ಮಾತನಾಡಿದ ಅವರು, ನಾವು ಜಾತಿ, ವರ್ಗ, ವರ್ಣಗಳನ್ನು ಮೀರಿ ಬೆಳೆಯಬೇಕಿದೆ. ದೇಶವೇ ನಮ್ಮ ಮನೆ ಎಂದು ದುಡಿಯಬೇಕಿದೆ. ಈ ಪ್ರವೃತ್ತಿ ನಮ್ಮಲ್ಲಿ ಬೆಳೆದರೆ ಭಾರತ ವಿಶ್ವಗುರು ಆಗುವುದರಲ್ಲಿ ಅನುಮಾನವಿಲ್ಲ ಎಂದರು.

ಭಾರತದ ಸ್ವಾತಂತ್ರ್ಯ ಚಳುವಳಿ, ನವನಿರ್ಮಾಣ ಚಳುವಳಿಯಲ್ಲಿ ಯುವಕರು ವಿಶೇಷ ಪಾತ್ರವಹಿಸಿದ್ದಾರೆ. ಅನೇಕ ವಿಧಗಳಲ್ಲಿ ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಂಡಿದ್ದಾರೆ ಎಂದರು. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 65ರಷ್ಟು ಯುವಕರಿದ್ದಾರೆ. ದೇಶದ ಪ್ರಗತಿಯಲ್ಲಿ ಅವರ ಕೊಡುಗೆ ಅಪಾರ. ಕೋವಿಡ್‌ನ ಎರಡೂ ಅಲೆಗಳಲ್ಲಿ ವೈದ್ಯರು, ಪ್ಯಾರಾ ಮೆಡಿಕಲ್, ಪೋಲೀಸ್ ಇಲಾಖೆಯ ಯುವಕರು ದೇಶದ ಜನತೆಯ ಸೇವೆ ಸಲ್ಲಿಸಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಸ್ವಾಮಿ ಅಭಿಷೇಕ್ ಬ್ರಹ್ಮಾಚಾರಿಜೀ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲು ಅಳವಡಿಸಿದ ರಾಜ್ಯ ಕರ್ನಾಟಕ, ಮೊದಲ ವಿಶ್ವವಿದ್ಯಾಲಯ ತುಮಕೂರು ವಿಶ್ವವಿದ್ಯಾನಿಲಯ ಎಂದು ಪ್ರಶಂಸಿಸಿದರು. ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್ ಮುಂತಾದ ಯುವಕರು ದೇಶಕ್ಕಾಗಿ ವಿಶೇಷ ಕೊಡುಗೆ ನೀಡಿದ್ದಾರೆ. ಪಾರಂಪರಿಕ ಸಾಂಸ್ಕೃತಿಕ ಚರಿತ್ರೆಯ ಹಿನ್ನೆಲೆಯಲ್ಲಿ ಭಾರತವನ್ನು ಕಟ್ಟಬೇಕಿದೆ ಎಂದರು.

ಅಧ್ಯಕ್ಷೀಯ ಭಾಷಣ ಮಾಡಿದ ತುಮಕೂರು ವಿವಿ ಕುಲಪತಿ ಕರ್ನಲ್ (ಪ್ರೊ) ವೈ.ಎಸ್. ಸಿದ್ದೇಗೌಡ, ರಾಷ್ಟ್ರೀಯ ಶಿಕ್ಷಣ ನೀತಿ ಮಕ್ಕಳಲ್ಲಿ ಹೊಸತನವನ್ನು ತಂದುಕೊಡುತ್ತದೆ. ಮಕ್ಕಳಲ್ಲಿ ಜ್ಞಾನದೊಂದಿಗೆ ಮೌಲ್ಯಗಳ ಅಳವಡಿಕೆ ಆಗಬೇಕಿದೆ. ಇಂದಿನ ಯುವಜನತೆ ಮಾರ್ಗದರ್ಶನವನ್ನು ಮಾತ್ರ ಬಯಸುತ್ತಾರೆ ಎಂದರು.

ಪ್ರೊ ಕೆ ಶಿವಚಿತ್ತಪ್ಪ, ಕುಲಸಚಿವರು, ತುಮಕೂರು ವಿಶ್ವವಿದ್ಯಾನಿಲಯ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪ್ರೊ ಪಿ. ಪರಮಶಿವಯ್ಯ ವಂದನಾರ್ಪಣೆ ನೆರವೇರಿಸಿದರು. ಉಪ ಕುಲಸಚಿವ ಡಾ. ಸುರೇಶ್ ಡಿ. ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!