ತುಮಕೂರು: ಜ್ಞಾನಪ್ರಧಾನ ಜಗತ್ತಿನಲ್ಲಿ ಮಾಧ್ಯಮ ಶಿಕ್ಷಣಕ್ಕೆ ಉಜ್ವಲ ಭವಿಷ್ಯವಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಬದಲಾಗುವ ಜಗತ್ತಿಗೆ ತಕ್ಕಂತೆ ಮಾಧ್ಯಮ ವಿದ್ಯಾರ್ಥಿಗಳು ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಮಾಧ್ಯಮರಂಗ ಹೊಸಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಡಿಜಿಟಲ್ ಮಾಧ್ಯಮಗಳ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಸಮಾಜಕ್ಕೆ ಮಾಹಿತಿ ಹಾಗೂ ಜ್ಞಾನವನ್ನು ಧಾರೆಯೆರೆಯುವ ಮಾಧ್ಯಮರಂಗದ ಭವಿಷ್ಯ ಎಂದಿಗೂ ಮಸುಕಾಗದು ಎಂದರು.
ಮಾಧ್ಯಮಗಳು ಸಮಾಜದ ವಿಶೇಷ ಮನ್ನಣೆಗೆ ಪಾತ್ರವಾಗಿವೆ. ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಅವುಗಳ ಪಾತ್ರ ಹಿರಿದು. ಪತ್ರಿಕೋದ್ಯಮ ಶಿಕ್ಷಣ ಹಾಗೂ ತರಬೇತಿಯನ್ನು ಪಡೆಯಲು ಗ್ರಾಮೀಣ ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ವಹಿಸಬೇಕು ಎಂದರು.
ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಮಾತನಾಡಿ, ಮಾಧ್ಯಮರಂಗ ಪ್ರತೀದಿನ ಬದಲಾಗುತ್ತಿದೆ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಮಾಧ್ಯಮಗಳ ಕಾರ್ಯವೈಖರಿ ಹಾಗೂ ಸ್ವರೂಪದಲ್ಲಿ ಮಹತ್ತರ ಸ್ಥಿತ್ಯಂತರಗಳಾಗಿವೆ. ಇವುಗಳನ್ನು ಅರ್ಥಮಾಡಿಕೊಂಡ ವಿದ್ಯಾರ್ಥಿಗಳಿಗೆ ಮುಂದೆ ಅಪಾರ ಅವಕಾಶವಿದೆ ಎಂದರು.
ಉತ್ತಮ ಭಾಷೆ ಹಾಗೂ ತಾಂತ್ರಿಕ ಕೌಶಲಗಳನ್ನು ಮೈಗೂಡಿಸಿಕೊಳ್ಳಿ. ಮಾಧ್ಯಮ ಕ್ಷೇತ್ರ ಬಯಸುವ ಬದ್ಧತೆ, ಸಮಯಪ್ರಜ್ಞೆ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸಿಕೊಳ್ಳಿ. ಮಾಧ್ಯಮಗಳ ವಿಶ್ವಾಸಾರ್ಹತೆ ಕುಸಿಯದಂತೆ ನಿಮ್ಮ ಕೈಲಾದ ಪ್ರಯತ್ನಗಳನ್ನು ಮಾಡಿ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಅಭಿಷೇಕ್ ಎಂ. ವಿ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಡಾ. ಪೃಥ್ವೀರಾಜ ಟಿ., ಕೋಕಿಲ ಎಂ. ಎಸ್., ಅನನ್ಯ ಎಂ. ಉಪಸ್ಥಿತರಿದ್ದರು.