ತಿಪಟೂರು: ಸಾರ್ಥವಳ್ಳಿ ಗ್ರಾಮವನ್ನು ತಂಬಾಕು ಮುಕ್ತ ಮಾದರಿ ಗ್ರಾಮ’ ಮಾಡುವಲ್ಲಿ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸಂಪೂರ್ಣ ಸಹಕಾರ ಮತ್ತು ಸಹಯೋಗ ನೀಡಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ. ರೂಪ ಕರೆ ನೀಡಿದ್ದಾರೆ.
ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕಿನ ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ಮತ್ತು ಬೆಂಗಳೂರಿನ ಐ.ಪಿ.ಹೆಚ್. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ‘ತಂಬಾಕು ಮುಕ್ತ ಮಾದರಿ ಗ್ರಾಮ’ ದ ಕುರಿತು ಆಯೋಜಿಸಲಾಗಿದ್ದ ಬೀದಿ ನಾಟಕವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದ ಅವರು, “ತಂಬಾಕು ಒಂದು ಸಾಮಾಜಿಕ ಪಿಡುಗಾಗಿದೆ, ಇದರಿಂದ ಧೂಮಪಾನ ಮಾಡದವರು, ಮಕ್ಕಳು ಮತ್ತು ಯುವಕರನ್ನು ನಾವು ರಕ್ಷಿಸಬೇಕಾಗಿದೆ. ಐ.ಪಿ.ಹೆಚ್. ಸಂಸ್ಥೆಯು ಸಾರ್ಥವಳ್ಳಿ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿಸಬೇಕೆಂದು ನಮ್ಮನ್ನು ಸಂಪರ್ಕಿಸಿದಾಗ, ಇದು ಒಂದು ಒಳ್ಳೆಯ ಉದ್ದೇಶವಾಗಿರುವುದರಿಂದ ನಾವು ನಮ್ಮ ಸಂಪೂರ್ಣ ಸಹಕಾರ ನೀಡಲು ಒಪ್ಪಿದ್ದೇವೆ. ಈ ಒಂದು ಯೋಜನೆಯ ಕುರಿತಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಹ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ಮೊದಲ ಹಂತದಲ್ಲಿ ಗ್ರಾಮದ ಜನತೆಯಲ್ಲಿ ತಂಬಾಕು ಕುರಿತಾಗಿ ಅರಿವು ಮೂಡಿಸಲು ಬೀದಿ ನಾಟಕವನ್ನು ನಡೆಸಲಾಗಿದೆ” ಎಂದು ತಿಳಿಸಿದರು.
ಐ.ಪಿ.ಹೆಚ್. ಸಂಸ್ಥೆಯ ಸಂಪನ್ಮೂಲ ಅಧಿಕಾರಿ ಅಚ್ಯುತ ಎನ್.ಜಿ. ರವರು ಮಾತನಾಡಿ, “ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಸ್ವಸ್ಥ ಗ್ರಾಮವನ್ನು ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಥಾಟ್‌ವರ್ಕ್ಸ್ ಸಂಸ್ಥೆಯ ಸಹಯೋಗದಲ್ಲಿ, ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳು ಯೋಜನೆಯಡಿ ತುಮಕೂರು ಜಿಲ್ಲೆಯ, ತಿಪಟೂರು ತಾಲ್ಲೂಕಿನ ಸಾರ್ಥವಳ್ಳಿ ಗ್ರಾಮವನ್ನು ಆಯ್ಕೆ ಮಾಡಿ ಈ ಗ್ರಾಮವನ್ನು ತಂಬಾಕು ಮುಕ್ತ ಮಾದರಿ ಗ್ರಾಮವನ್ನಾಗಿ ಮಾಡಲು ಯೋಜನೆಯನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯನ್ನು ನಾವು ಸಂಪರ್ಕಿಸಿದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿ.ಡಿ.ಓ. ರವರುಗಳು ಇದಕ್ಕೆ ಸಂಪೂರ್ಣ ಸಹಕಾರ ನೀಡಲು ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ ಜನರು ಹೆಚ್ಚಾಗಿ ಸೇರುವ ಹಾಲಿನ ಡೈರಿ, ಜಗಲಿಕಟ್ಟೆ, ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ “ಬೀದಿ ನಾಟಕಗಳ”ದ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮನೆಮನೆ ಅರಿವು ಕಾರ್ಯಕ್ರಮ, ಮಕ್ಕಳಿಂದ ತಂಬಾಕು ವಿರುದ್ಧ ಜಾಗೃತಿ ನಡಿಗೆ, ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ತರುವುದು ಹಾಗು ಆ ಮೂಲಕ ಗ್ರಾಮವನ್ನು ತಂಬಾಕು ಮುಕ್ತ ಮಾಡುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಬೀದಿ ನಾಟಕದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.