ಸೋಲಾರ್ ಪಾರ್ಕ್ ಗೆ ಜಮೀನು ಕೊಟ್ಟ ಮಾಲಿಕರ ಗುತ್ತಿಗೆ ಹಣ ಹೆಚ್ಚಳ ಮಾಡುತ್ತೇವೆ: ಇಂಧನ ಸಚಿವ ಸುನೀಲ್ ಕುಮಾರ್

ಪಾವಗಡ: ದೇಶದ ಅತಿ ದೊಡ್ಡ ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕಾಗಿ ಭೂಮಿ ನೀಡಿದ ಪಾವಗಡ ರೈತರ ಕುಟುಂಬಗಳ ಕಲ್ಯಾಣ ಹಾಗೂ ಆ ಭಾಗದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ರವರು ಹೇಳಿದ್ದಾರೆ.

ಪಾವಗಡದ ನಾಗಲಮಡಿಕೆ ಹೋಬಳಿಯ ತಿರುಮಣಿ ಗ್ರಾಮದಲ್ಲಿ 2,050 ಮೆಗಾವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಯೋಜನೆಗಾಗಿ 12,718 ಎಕರೆ ಜಮೀನನ್ನು ರೈತರು ಗುತ್ತಿಗೆಗೆ ನೀಡಿದ್ದು, ಅವರಿಗೆ ವಾರ್ಷಿಕ 21 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ ಅದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು,

ಶಾಲೆ, ಕುಡಿಯುವ ನೀರು ಮೊದಲಾದ ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕೆಂದು ಸ್ಥಳೀಯ ರೈತರು ಮನವಿ ಮಾಡಿದ್ದಾರೆ. ಹೀಗಾಗಿ, ಸೋಲಾರ್‌ ವಿದ್ಯುತ್‌ ಉತ್ಪಾದಕ ಕಂಪನಿಗಳ ಸಿಎಸ್‌ಆರ್‌ ನಿಧಿ ಬಳಸಿ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಈ ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಜೊತೆಗೆ ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ವಾಹನದ ಅಗತ್ಯವಿದೆ ಎಂದು ಸ್ಥಳೀಯರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪಾವಗಡ ಸೋಲಾರ್ ಪಾರ್ಕ್ ನಿಂದ ದೇಶ ಹಾಗೂ ರಾಜ್ಯದ ಇತರೆ ಭಾಗಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಪಾರ್ಕ್ ನಿರ್ಮಾಣಕ್ಕೆ ಜಮೀನು ನೀಡಿದ ಎಲ್ಲಾ ರೈತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು

ಶಾಸಕರಾದ ವೆಂಕಟರಮಣಪ್ಪ ನವರು ಮಾತನಾಡಿ ಸೋಲಾರ್ ಪಾರ್ಕ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಬೇಕು ನಮ್ಮ ತಾಲ್ಲೂಕಿನಲ್ಲಿ ಐಟಿಐ, ಇಂಜಿನಿಯರಿಂಗ್, ಪದವಿ ಪಡೆದ ಹೆಚ್ಚಿನ ನಿರುದ್ಯೋಗಿಗಳಿದ್ದು ಅವರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ತಿರುಮಣಿ ಯ ಸುತ್ತಮುತ್ತಲು ಜಮೀನನ್ನು ಸೋಲಾರ್ ಪಾರ್ಕ ರೈತರು ಕೊಡಲು ಮುಂದೆ ಬಂದಿದ್ದು ಜಮೀನನ್ನು ಗುತ್ತಿಗೆ ಪಡೆಯಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು ಇನ್ನು ಕೆಲವೇ ದಿನಗಳಲ್ಲಿ ವಳ್ಳೂರು ಮತ್ತು ತಿರುಮಣಿ ಗ್ರಾಮ ಪಂಚಾಯಿತಿಗಳಲ್ಲಿ ಶಾಲಾಭಿವೃದ್ಧಿ ಸಿಸಿ ರಸ್ತೆ ನಿರ್ಮಾಣ ಶೌಚಾಲಯ ನಿರ್ಮಾಣ ಮೊದಲಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಇದಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ,ಡಿ.ವೈ.ಎಸ್.ಪಿ ರಾಮಕೃಷ್ಣಯ್ಯ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!