ಬೆಂಗಳೂರು : ಜಾತಿ ಗಣತಿ ವರದಿ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಎಂಟು ವಾರಗಳ ಕಾಲ ಮುಂದೂಡಿದೆ.
ಜಾತಿಗಣತಿ ವರದಿ ಜಾರಿಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಚಂದ್ರು ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ವಿಚಾರಣೆಯನ್ನು ನ.18ಕ್ಕೆ ಮುಂದೂಡಿತು.
ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನಮ್ಮನ್ನು ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕೆಂದು ಕೋರಿ ಹಾಸನ ಉದ್ಯಮಿ
ಕೃಷ್ಣೇಗೌಡ ಮತ್ತು ಶಿಕಾರಿಪುರದ ಕಲಾವಿದ ಶಶಿಧರ್ ಶಾನಬೋಗ್ ಅವರು ಸಲ್ಲಿಸಿರುವ ಮಧ್ಯಂತರ ಅರ್ಜಿಗಳು ಕೂಡ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದವು.
ಅರ್ಜಿದಾರರ ಪರ ವಕೀಲ ಅಭಿಷೇಕ್ ಕುಮಾರ್ ಹಾಜರಾಗಿದ್ದರು. ಹಿರಿಯ ವಕೀಲ ಗಂಗಾಧರ್ ಗುರುಮಠ್ ಅವರು ಮಧ್ಯಂತರ ಅರ್ಜಿದಾರರ ಪರ ವಾದ ಮಂಡಿಸಿ ರಾಜ್ಯ ಸರಕಾರಕ್ಕೆ ಜಾತಿ ಜನಗಣತಿ ಮಾಡುವ ಅಧಿಕಾರವಿಲ್ಲ. ಆದರೆ, ಈ ಹಿಂದಿನ ಸರಕಾರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಘೋಷವಾಕ್ಯದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಖಾಂತರ ಕಾನೂನು ತಿದ್ದುಪಡಿ ಮಾಡಿ ಜಾತಿಗಣತಿ ನಡೆಸಿದ್ದಾರೆ.
ಇದು ಅಸಂವಿಧಾನಿಕ ಮತ್ತು ಅವೈಜ್ಞಾನಿಕವಾಗಿದೆ ಎಂದರು. ಮೂಲ ಅರ್ಜಿದಾರರಿಗೆ ಆಕ್ಷೇಪಣೆ ಸಲ್ಲಿಸಲು ಎಂಟು ವಾರಗಳ ಕಾಲ ಕಾಲಾವಕಾಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ನ.18ಕ್ಕೆ ಮುಂದೂಡಿದೆ.