ತುಮಕೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಒಂದು ಕ್ವಿಂಟಾಲ್‌ಗೆ 7275 ರೂ.ದರದಂತೆ ಗುಣಮಟ್ಟದ ’ಹೆಸರುಕಾಳು’ ಖರೀದಿಸಲು ಜಿಲ್ಲೆಯ 4 ತಾಲೂಕುಗಳಲ್ಲಿ 5 ಖರೀದಿ ಕೇಂದ್ರಗಳು ಆರಂಭವಾಗಲಿವೆ. ಜಿಲ್ಲೆಯ ಕುಣಿಗಲ್, ತಿಪಟೂರು, ಚಿಕ್ಕನಾಯಕನಹಳ್ಳಿ, ಹುಳಿಯಾರು ಹಾಗೂ ತುರುವೇಕೆರೆಯಲ್ಲಿ ಖರೀದಿ ಕೇಂದ್ರಗಳು ಪ್ರಾರಂಭವಾಗಲಿವೆ.
ಪ್ರಸಕ್ತ 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 8831 ಮೆ.ಟನ್ ಹೆಸರಿ ಕಾಳು ಉತ್ಪಾದನೆ ಗುರಿಯಿದ್ದು, ಅದರಲ್ಲಿ 8437 ಮೆ.ಟನ್ ನಿರೀಕ್ಷಿತ ಉತ್ಪಾದನೆಯಾಗಿದೆ. ಹೆಸರುಕಾಳು ಹೆಚ್ಚು ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆಗೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.
ಸೆಪ್ಟೆಂಬರ್ 13ರಿಂದ ನೋಂದಣಿ:-
ಖರೀದಿ ಕೇಂದ್ರಗಳ ಆರಂಭ ಪೂರ್ವ ಸಿದ್ಧತಾ ಪ್ರಕ್ರಿಯೆಯು ನಡೆಯುತ್ತಿದ್ದು ಸೆಪ್ಟೆಂಬರ್ 12ರೊಳಗಾಗಿ ಪ್ರಾರಂಭಗೊಳ್ಳಲಿವೆ. ರೈತರು ಖರೀದಿ ಕೇಂದ್ರಗಳಲ್ಲಿ ಹೆಸರುಕಾಳು ಮಾರಾಟ ಮಾಡಲು ಸೆಪ್ಟೆಂಬರ್ 13 ರಿಂದ 27ರವರೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ತದನಂತರ ಸೆ.೨೯ ರಿಂದ ಹೆಸರು ಕಾಳು ಖರೀದಿಯೊಂದಿಗೆ ನೋಂದಣಿ ಕಾರ್ಯವೂ ನಡೆಯಲಿದೆ.
ಫ್ರೂಟ್ ತಂತ್ರಾಂಶದೊಂದಿಗೆ ಸಂಯೋಜನೆ:-
ಹೆಸರುಕಾಳು ಖರೀದಿಸಲು ಗುರುತಿಸಿರುವ 5 ಖರೀದಿ ಕೇಂದ್ರಗಳಲ್ಲಿ ಎನ್‌ಐಸಿ ಸಂಸ್ಥೆಯು ಈಗಾಗಲೇ ರಾಗಿ/ಭತ್ತದ ಬೆಳೆಗೆ ಅಭಿವೃದ್ಧಿ ಪಡಿಸಿರುವ ಫ್ರೂಟ್ ತಂತ್ರಾಂಶದೊಂದಿಗೆ ಸಂಯೋಜಿಸಿ ಹೆಸರುಕಾಳು ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ಇಂದಿಕರಿಸಲಾಗುವುದು. ಎನ್‌ಐಸಿ ತಂತ್ರಾಂಶದೊಂದಿಗೆ ನಾಫೆಡ್ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ಮಾಹಿತಿ ಒದಗಿಸಲಾಗುವುದು.
ಗುಣಮಟ್ಟದ ಹೆಸರುಕಾಳು ತರಬೇಕು:-
ಹೆಸರುಕಾಳು ಖರೀದಿ ಪ್ರಕ್ರಿಯೆಯಲ್ಲಿ ಫ್ರೂಟ್ ದತ್ತಾಂಶದಲ್ಲಿ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ರೈತರು ಆಧಾರ್ ಕಾರ್ಡ್‌ನ್ನು ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಿ, ಕೇಂದ್ರದಿಂದ ನೀಡುವ ಎಫ್‌ಐಡಿ ಸಂಖ್ಯೆಯನ್ನು ಮೂಲ ಆಧಾರ್ ಕಾರ್ಡ್‌ನೊಂದಿಗೆ ಖರೀದಿ ಕೇಂದ್ರಕ್ಕೆ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನಿಗಧಿಪಡಿಸಿದ ದಿನಾಂಕದೊಳಗೆ ಹೆಸರುಕಾಳನ್ನು ಒಣಗಿಸಿ, ಸ್ವಚ್ಛಗೊಳಿಸಿ 50 ಕೆ.ಜಿ. ಉತ್ತಮವಾದ ಗೋಣಿ ಚೀಲದಲ್ಲಿ ತುಂಬಿ (ಫೇರ್ ಅವರೇಜ್ ಕ್ವಾಲಿಟಿ-ಈಂಕಿ) ಗುಣಮಟ್ಟದ ಹೆಸರುಕಾಳನ್ನು ಖರೀದಿ ಕೇಂದ್ರಕ್ಕೆ ತರಬೇಕು.
ಗುಣಮಟ್ಟದ ಪರಿಶೀಲನೆ:-
ಹೆಸರುಕಾಳು ಬೆಂಬಲ ಬೆಲೆ ಯೋಜನೆಯಡಿ ರೈತರು ನೋಂದಣಿ ಮಾಡಿದ ನಂತರ ಹೆಸರುಕಾಳಿನ ಗುಣಮಟ್ಟದ ಬಗ್ಗೆ ಕೇಂದ್ರ ಸರ್ಕಾರವು ನಿಗಧಿಪಡಿಸಿರುವ ತೇವಾಂಶ, ಕಲ್ಮಷಗಳು, ಇತ್ಯಾದಿ ಗುಣಧರ್ಮಗಳ ಮಾನದಂಡಗಳಂತೆ ಪರಿಶೀಲಿಸಲಾಗುವುದು. ಹೆಸರುಕಾಳು ಖರೀದಿ ಹಣವನ್ನು ರೈತರ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮಾ ಆಗಲಿದೆ.
ಕೋವಿಡ್ ನಿಯಮ ಪಾಲಿಸಿ:-
ಪ್ರತಿ ಖರೀದಿ ಕೇಂದ್ರದಲ್ಲೂ ಕೋವಿಡ್-19ರ ನಿಯಮದಂತೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಖರೀದಿ ಕೇಂದ್ರಗಳು ತಮ್ಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲಿವೆ.
ಹೆಸರುಕಾಳು ಮಾರಾಟಕ್ಕೆ ತೊಂದರೆಯಿಲ್ಲ:-
ಖರೀದಿ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನ ಅಂದರೆ ನೋಂದಣಿ ಅವಧಿಯಲ್ಲಿ ಖರೀದಿ ಕೇಂದ್ರಗಳಿಗೆ ಅಗತ್ಯವಿರುವ ಸಿಬ್ಬಂದಿ, ಲೋಡಿಂಗ್, ಅನ್‌ಲೋಡಿಂಗ್, ಸಾಗಾಣಿಕೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾವುದೇ ರೀತಿಯಲ್ಲಿ ಖರೀದಿ ಕೇಂದ್ರದ ಚಟುವಟಿಕೆಗಳಿಗೆ ಹಾಗೂ ರೈತರಿಂದ ಹೆಸರುಕಾಳು ಮಾರಾಟಕ್ಕೆ ತೊಂದರೆಯಾಗದಂತೆ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಲೋಪದೋಷಗಳಾಗದಂತೆ ನಿಗಾವಹಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.