ನಿಜವಾದ ಪುಷ್ಪಾರ್ಚನೆ
ಭಗವಂತನನ್ನು ದೇವಾಲಯಗಳಲ್ಲಿ ಮತ್ತು ಮನೆಗಳಲ್ಲೂ ಸಹ ಸಾಮಾನ್ಯವಾಗಿ ಹೂವಿನಿಂದ ಪೂಜಿಸುತ್ತೇವೆ. ಎಷ್ಟು ತುಟ್ಟಿಯಾದ (ಹೆಚ್ಚು ಬೆಲೆಯುಳ್ಳ) ಹೂವಿನಿಂದ ಪೂಜಿಸುತ್ತೇವೆಯೋ ಅಷ್ಟು ಪುಣ್ಯ ಬರುತ್ತದೆ ಎಂದು ನಮ್ಮಲ್ಲನೇಕರು ಭಾವಿಸುತ್ತೇವೆ.
ಎಷ್ಟು ದುಡ್ಡು ಖರ್ಚು ಮಾಡಿ ಪೂಜೆ ಮಾಡಿದೆವು ಎಂದು ಹಲವರು ಸಂಭ್ರಮದಿಂದ ಹೇಳಿಕೊಳ್ಳುವುದನ್ನೂ ಸಹ ಸಾಮಾನ್ಯವಾಗಿ ನೋಡುತ್ತಿರುತ್ತೇವೆ.
ಗಿಡಗಳಲ್ಲಿ ಬಿಡುವ ಹೂವು ಸಾಲದೆಂದು ಕೆಲವು ಧನವಂತರು ಬಂಗಾರದ ಹೂವುಗಳನ್ನು ಮಾಡಿಸುತ್ತಾರೆ.
ಶಿವನಿಗೆ ಬಂಗಾರದ ಬಿಲ್ವಪತ್ರೆಗಳನ್ನೂ, ವಿಷ್ಣುವಿಗೆ ಬಂಗಾರದ ತುಳಸೀ ದಳಗಳನ್ನೂ, ಅಮ್ಮನವರಿಗೆ ಬಂಗಾರದ ಹೂವುಗಳಿಂದ ಅರ್ಚಿಸಿ ಅದು ತಮ್ಮ ಉನ್ನತವಾದ ಭಕ್ತಿಗೆ ನಿದರ್ಶನವೆಂದು ಭಾವಿಸುತ್ತಾರೆ.
ಭೋಗಗಳಿಗೆ ನಿಲಯವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ನಿವಾಸವಿರುವ ಭಾರತೀಯರಲ್ಲಿ ಈ ಲಕ್ಷಣಗಳು ಸ್ವಲ್ಪ ಹೆಚ್ಚಾಗಿಯೇ ಕಂಡುಬರುತ್ತವೆ.
ಆದರೆ,
ಭಗವಂತನು, ಹೂವುಗಳ ಬೆಲೆಯನ್ನಾಧರಿಸಿ ವರ್ತಕನಂತೆ ಪುಣ್ಯವನ್ನು ಕರುಣಿಸುವುದಿಲ್ಲ.
ಪುಷ್ಪಾರ್ಚನೆಯ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯವಾದುದು ಭಕ್ತಿಯಾಗಿದೆ.
ಇದೇ ವಿಷಯವನ್ನು ಗೀತೆಯಲ್ಲಿ *ಪತ್ರಂ, ಪುಷ್ಪಂ, ಫಲಂ, ತೋಯಂ* (ಎಲೆ, ಹೂವು, ಹಣ್ಣು, ನೀರು) ಇವುಗಳಲ್ಲಿ ಯಾವುದನ್ನಾದರೂ ನನಗೆ ಭಕ್ತಿಯಿಂದ ಅರ್ಪಿಸಿದರೆ ಸಾಕು ಎಂದು ಸ್ವಯಂ ಕೃಷ್ಣನೇ ಅಪ್ಪಣೆ ಕೊಡಿಸಿದ್ದಾನೆ.
ದೇವರಿಗೆ ಸಮರ್ಪಿಸ ಬೇಕಾಗಿರುವುದು ಮನಸ್ಸು ಎನ್ನುವ ಪುಷ್ಪ ಎಂದು ಆದಿ ಶಂಕರರು ತಮ್ಮ ಶಿವಾನಂದ ಲಹರಿಯಲ್ಲಿ ವಿವರಿಸಿದ್ದಾರೆ.
ಹಾಗಾದರೆ,
ಭಗವಂತನಿಗೆ ಇಷ್ಟವಾದ ಪುಷ್ಪವಾವುದು.?
ತಾವರೆ, ನೈದಿಲೆ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ಕಣಗಿಲೆ, ಇವೆಲ್ಲಾ ಹೂವುಗಳನ್ನೂ ಸಹ ದೇವರ ಪೂಜೆಗೆ ಬಳಸಬಹುದು ನಿಜ. ಆದರೆ, ನಿಜವಾಗಿ ಅರ್ಪಿಸ ಬೇಕಾಗಿರುವುದು ಅವನಿಗೆ ಇಷ್ಟವಾದ ಎಂಟು ಪುಷ್ಪಗಳನ್ನು.
*ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಾಃ*
*ಸರ್ವಭೂತ ದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ l*
*ಶಾಂತಿಪುಷ್ಪಂ ತಪಃsಪುಷ್ಪಂ ಧ್ಯಾನಪುಷ್ಪಂ ತಥೈವ ಚ*
*ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್ ll*
ಭಗವಂತನಿಗೆ ಪ್ರಿಯವಾದ ಪುಷ್ಪಗಳಲ್ಲಿ ಮೊದಲನೆಯದೆ *ಅಹಿಂಸೆ.*
ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾಗಿ ಕಷ್ಟಕ್ಕೆ ಗುರಿ ಮಾಡಬಾರದು.
ಒಬ್ಬರ ಮನಸ್ಸನ್ನು ಮಾತುಗಳ ಮೂಲಕವೂ ನೋಯಿಸಬಾರದು.
ಮನಸ್ಸಿನಲ್ಲಿಯೂ ಸಹ ಯಾರಿಗೂ ಕೇಡು ಎಣಿಸಬಾರದು.
ಎರಡನೆಯ ಪುಷ್ಟವೆ *ಇಂದ್ರಿಯ ನಿಗ್ರಹ.*
ಮನಸ್ಸಿನಲ್ಲಿ ಬಯಕೆ ಹುಟ್ಟುವುದೇ ತಡ ನ್ಯಾಯಾ ನ್ಯಾಯಗಳನ್ನು, ಧರ್ಮಾ ಧರ್ಮಾಗಳನ್ನು ನೋಡದೆ.
ಇತರರಿಗೆ ಅದರಿಂದ ಯಾವ ವಿಧವಾದ ಕೆಡುಕಾಗ ಬಹುದೆನ್ನುವ ವಿವೇಚನೆಯಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು.
ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲವೆನ್ನುವುದರ ಲಕ್ಷಣಗಳು.
*ಇಂದ್ರಿಯ ನಿಗ್ರಹವು* ದೇವರಿಗೆ ಇಷ್ಟವಾದ ಮತ್ತೊಂದು ಪುಷ್ಪ.
*ಸರ್ವಭೂತ ದಯೆ* ಮೂರನೆಯ ಪುಷ್ಪ.
ಸಹ ಮಾನವರ ಮೇಲೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಲ್ಲಿ – ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳು, ಸಸ್ಯಗಳ ಮೇಲೆಯೂ ದಯೆ ತೋರ ಬೇಕೆನ್ನುವುದು ಸನಾತನ ಭಾರತೀಯ ತತ್ತ್ವ.
ನಾಲ್ಕನೇ ಪುಷ್ಪವೇ *ಕ್ಷಮಾಗುಣ.* ನಮಗೆ ಅಪಕಾರ ಮಾಡಿದವರಿಗೂ ಸಹ ಉಪಕಾರ ಮಾಡಬೇಕು ಅವರ ಮೇಲೆ ಪ್ರತೀಕಾರ ಸಲ್ಲದು ಎನ್ನುವುದೇ ಕ್ಷಮಾಗುಣ.
*ಶಾಂತಿ* ಐದನೆಯ ಪುಷ್ಪ. ಮನಸ್ಸು ಉದ್ವೇಗಕ್ಕೆ ಒಳಗಾಗ ಬಾರದು.
ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಹೊಗಳಿದರೆ ಉಬ್ಬಿ ಹೋಗುವುದು, ತೆಗಳಿದರೆ ಕುಗ್ಗಿ ಹೋಗುವುದು ಒಳ್ಳೆಯದಲ್ಲ, ಮನಸ್ಸನ್ನು ಪ್ರಶಾಂತವಾಗಿರಿಸಿ ಕೊಳ್ಳಬೇಕು.
ಆರನೆಯ ಪುಷ್ಪವೆ *ತಪಸ್ಸು.* ತಪಸ್ಸೆಂದರೆ ಸುತ್ತಲೂ ಹುತ್ತ ಬೆಳೆಯುವವರೆಗೆ ಒಂಟಿಕಾಲಿನ ಮೇಲೆ ನಿಲ್ಲುವುದೆಂದಲ್ಲ.
ಆ ಮಾತಿಗೆ ಅರ್ಥ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ಕಾರ್ಯಗಳನ್ನು ಸಾಧಿಸುವ ಚಲವನ್ನು ಹೊಂದಿರುವುದು.
ಏಳನೆಯ ಪುಷ್ಪವೆ *ಧ್ಯಾನ.* ಶಂಖದಿಂದ ಬಿದ್ದರೇನೆ ತೀರ್ಥ ಎನ್ನುವಂತೆ ಆಧುನಿಕ ವೈದ್ಯರೂ ಸಹ ಧ್ಯಾನವು ಮಾನಸಿಕ ಹಾಗು ಶಾರೀರಿಕ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ.
ಕಡೆಯದಾಗಿ ಹೇಳಿದ್ದರೂ ಸಹ ಮೊದಲನೆಯ ಸ್ಥಾನದಲ್ಲಿರ ಬೇಕಾಗಿರುವುದು ಎಂಟನೆಯ ಪುಷ್ಪವಾದ *ಸತ್ಯ.*
ಯಾವಾಗಲೂ ಸುಳ್ಳನ್ನು ಆಡದೇ ಇರುವುದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಮೋಸ ಮಾಡದೇ ಇರುವುದು, ಮೊದಲಾದವು ಸತ್ಯಪರಿಪಾಲನೆಯ ಕೆಳಗೆ ಬರುತ್ತವೆ.
ಭಗವಂತನನ್ನು ಸಾಮಾನ್ಯವಾದ ಹೂವುಗಳಿಂದಾಗಲಿ, ಬಂಗಾರದ ಹೂವುಗಳಿಂದಾಗಲಿ ಪೂಜಿಸಬಹುದು.
ಆದರೆ,
ಪೂಜಾ ಸಮಯದಲ್ಲಿ ತಪ್ಪದೇ ಅರ್ಪಿಸಬೇಕಾದದ್ದು ಮೇಲೆ ಹೇಳಿದ ಎಂಟು ಪುಷ್ಟಗಳನ್ನೆ.
*ಭಗವಂತನಿಗೆ ಪ್ರಿಯವಾದ ಎಂಟು ಪುಷ್ಪಗಳು.*
*- ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಶಾಂತಿ, ತಪಸ್ಸು, ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ ಎನ್ನುವುದನ್ನು ಮರೆಯಬಾರದು.*.(ಸಂಗ್ರಹ)