ಬದುಕು ನೀಡುವ ಶಿಕ್ಷಣ ನಮ್ಮದಾಗಲಿ

ದಿನಾಂಕ: 05-09-2021 ರಂದು ವಿಚಾರ ಮಂಟಪ ಸಾಹಿತ್ಯ ವೇದಿಕೆ, ತನುಶ್ರೀ ಪ್ರಕಾಶನ- ಸೂಲೇನಹಳ್ಳಿ, ಹಾಗೂ ಕರುನಾಡು ಸಾಹಿತ್ಯ ಪರಿಷತ್ತು – ಕರ್ನಾಟಕ ಇವರ ಸಂಯುಕ್ತ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ “ಶಿಕ್ಷಣ ವ್ಯವಸ್ಥೆ ಹಾಗೂ ನಿರುದ್ಯೋಗ : ಸಮಸ್ಯೆಗಳು ಮತ್ತು ಸವಾಲುಗಳು” ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಡುಪಿಯ ಪತ್ರಕರ್ತರಾದ ಶ್ರೀ ರಾಮ ದಿವಾಣರು ಮಾತನಾಡುತ್ತಾ ಇಂದಿನ ಶಿಕ್ಷಣ ವ್ಯವಸ್ಥೆ ಉದ್ಯೋಗವನ್ನು ಆ ಮೂಲಕ ಘನತೆಯ ಬದುಕನ್ನು ನೀಡುವಲ್ಲಿ ಸಂಪೂರ್ಣ ಹಿಂದೆ ಉಳಿದಿದೆ. ಶಿಕ್ಷಣವು ವಿದ್ಯಾರ್ಥಿಗಳಲ್ಲಿ ದೈರ್ಯ ಹಾಗೂ ಆತ್ಮವಿಶ್ವಾಸವನ್ನು ತುಂಬುವ ಕಾರ್ಯವನ್ನು ಸಹಾ ನ್ಯಾಯವಾಗಿ ನಿರ್ವಹಿಸುತ್ತಿಲ್ಲ. ನಮ್ಮ ಯುವ ಜನರಿಗೆ ನಮ್ಮ ಸಂವಿಧಾನವನ್ನು ಕಲಿಸಬೇಕಾಗಿದೆ, ಆಗ ಮಾತ್ರ ಅವರು ಭವಿಷ್ಯದಲ್ಲಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜೀವಿಸಲು ಸಾಧ್ಯ ಆದರೆ ಈ ಕೆಲಸ ಆಗುತ್ತಿಲ್ಲ. ನಮ್ಮ ಪಠ್ಯಕ್ರಮದಲ್ಲಿ ಸಂವಿಧಾನದ ಮಹತ್ವವನ್ನಾಗಲಿ, ಮೌಲ್ಯ ಗಳನ್ನಾಗಲಿ ತಿಳಿಸುವ ಪ್ರಯತ್ನ ಇಲ್ಲ. ಇಂದು ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇಂದು ಉದ್ಯೋಗ ಸೃಷ್ಠಿ ನಮ್ಮ ಸರ್ಕಾರದ ಮುಂದಿರುವ ಪ್ರಮುಖ ಸವಾಲು. ಸರ್ಕಾರ ಜನರನ್ನು ಹೊರೆಯೆಂದು ಭಾವಿಸದೇ ಸಂಪನ್ಮೂಲಗಳೆಂದು ಭಾವಿಸಿ ಇದಕ್ಕಾಗಿ ಸೂಕ್ತ ನಿರ್ಧಾರಗಳನ್ನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮೊಳಕಾಲ್ಮೂರಿನ ಶ್ರೀಯುತ ಓಬಣ್ಣ ನವರು ಮಾತನಾಡುತ್ತಾ ಶಿಕ್ಷಣ ಎಂದರೇನು ?, ಶಿಕ್ಷಣ ನಮಗೆ ಬದುಕನ್ನು ಕೊಡುವ, ಬದುಕನ್ನು ಕಲಿಸುವ, ಮಾನವೀಯತೆಯನ್ನು ಪಸರಿಸುವ, ಸಚ್ಚಾರಿತ್ರ್ಯವನ್ನು ಬೆಳೆಸುವ, ಶ್ರೇಷ್ಠ ನಾಗರೀಕರನ್ನು ಸೃಷ್ಠಿಸುವುದೇ ಶಿಕ್ಷಣ ಎಂದು ಹಲವಾರು ತಜ್ಞರು ಮಹನೀಯರು ಹೇಳಿದ್ದಾರೆ. ಶಿಕ್ಷಣ ಮಾನವನ ಮೂಲಭೂತ ಹಕ್ಕು ಅಷ್ಟೇ ಅಲ್ಲದೇ ಸಮಾಜದ ಬದಲಾವಣೆಯ ಕೀಲಿಕೈ ಆಗಬೇಕೆಂದು ಅಂಬೇಡ್ಕರರು ಹೇಳಿರುವರು ಆದರೆ ಆ ಸ್ವರೂಪದ ಶಿಕ್ಷಣ ಇಂದು ನಮಗೆ ಸಿಗುತ್ತಿಲ್ಲ. ಇಂದಿನ ಶಿಕ್ಷಣ ಯುವ ಜನರಿಗೆ ಶಿಕ್ಷಣ ಕಲಿಸಿ ಬಂಡವಾಳ ಶಾಹಿಯ ಕಾರ್ಮಿಕರಾಗಿ ದುಡಿಯುವಂತೆ ಮಾಡುತ್ತಿದ್ದೆ. ಮೆಕಾಲೆಯ ಜಾಡನ್ನು ಇಂದಿಗೂ ನಮ್ಮ ಶಿಕ್ಷಣ ಪದ್ಧತಿ ಅನುಸರಿಸುತ್ತಿದ್ದೆ. ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಹಲವು ಆಯೋಗಗಳು, ನೀತಿಗಳು ಬಂದರೂ ಸಹಾ ಅವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಪ್ರಭುತ್ವ ಶಿಕ್ಷಣ ಹಾಗೂ ಸಂಸ್ಕೃತಿಯ ಮೇಲೆ ಹಿಡಿತ ಸಾಧಿಸಿರುವ ಬಂಡವಾಳಶಾಹಿ ವ್ಯವಸ್ಥೆ. ಪ್ರಬಲ ಸಮುದಾಯಗಳು ಇಂದು ಶಿಕ್ಷಣವನ್ನು ನಿಯಂತ್ರಿಸುತ್ತಿವೆ. ಇದರಿಂದ ನಮ್ಮ ವರ್ತನೆಯಲ್ಲಿ ಪರಿವರ್ತನೆ ತರಬೇಕಾದ ಶಿಕ್ಷಣ ಪದ್ಧತಿ ಯಾವುದೇ ಪರಿವರ್ತನರ ತರದೇ ತಟಸ್ಥವಾಗಿದೆ. ಇಂದಿನ ಯುವ ಜನರೂ ಕೇವಲ ಅಕ್ಷರಸ್ಥರಾಗುತ್ತಾ ಇದ್ದಾರೆ ಶಿಕ್ಷಿತರಾಗುತ್ತಿಲ್ಲ. ಇಂದಿನ ಯುವಕರಲ್ಲಿ ಓದುವ ಸಂಸ್ಕೃತಿ ಕಡಿಮೆ ಅಗುತ್ತಾ ಇದೆ. ಸಮುದಾಯದ ಆಶಯಗಳು, ಸಮಾನತೆ ಸಾಧಿಸುವಲ್ಲಿ ಇಂದು ಸರ್ಕಾರಗಳು ವಿಫಲವಾಗುತ್ತಿವೆ. ಬಡತನ, ನಿರುದ್ಯೋಗ, ದೌರ್ಜನ್ಯ ಹೆಚ್ಚುತ್ತಿದೆ. ಅಂಕ ಸಂಸ್ಕೃತಿ ಹೆಚ್ಚುತ್ತಾ ಮಾನವೀಯ ಮೌಲ್ಯಗಳು ಕಣ್ಮರೆ ಅಗುತ್ತವೆ. ಎಂದು ಅಭಿಪ್ರಾಯ ಪಟ್ಟರು.

ನಂತರದ ಚರ್ಚೆಯಲ್ಲಿ ಡಾ ಮಾಲಾ ಬಿ ಎಂ, ಕುಮಾರಿ ಪ್ರೇಮ ಈ, ಶ್ರೀ ಉದಯ್ ಬಡಿಗೇರ್, ಶ್ರೀ ರಾಜುಕವಿ ಸೂಲೇನಹಳ್ಳಿ, ಶ್ರೀ ಅಕ್ರಂಪಾಷ ಕೆ ಎನ್, ವರುಣ್ ರಾಜ್ ಜೀ, ಶ್ರೀ ಅಂಜನ್ ಕುಮಾರ್ ಪಿ ಆರ್ ಮುಂತಾದವರು ಪಾಲ್ಗೊಂಡು ಕಾರ್ಯಕ್ರಮವನ್ನ ಅರ್ಥಪೂರ್ಣಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!