ಗಾಂಜಾ; ಆರೋಪಿಯ ₹ 1.68 ಕೋಟಿ ಆಸ್ತಿ ಜಪ್ತಿ

ಬೆಂಗಳೂರು: ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿ ಅಂಜಯ್‌ ಕುಮಾರ್ ಸಿಂಗ್ (54) ಎಂಬಾತನಿಗೆ ಸೇರಿದ್ದ ₹ 1.68 ಕೋಟಿ ಮೌಲ್ಯದ ಆಸ್ತಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಎನ್‌ಡಿಪಿಎಸ್ ಕಾಯ್ದೆ ಪ್ರಕರಣದಲ್ಲಿ ಆರೋಪಿಯಿಂದ ಆಸ್ತಿ ಜಪ್ತಿ ಮಾಡಿದ ರಾಜ್ಯದ ಮೊದಲ ಪ್ರಕರಣ ಇದಾಗಿದೆ.

‘ಬಿಹಾರದ ಅಂಜಯ್‌ ಕುಮಾರ್, 2016ರಲ್ಲಿ ಬೆಂಗಳೂರಿಗೆ ಬಂದಿದ್ದ. ಆನೇಕಲ್ ತಾಲ್ಲೂಕಿನ ಬ್ಯಾಗಡದೇವನಹಳ್ಳಿಯಲ್ಲಿ ವಾಸವಿದ್ದ. ಒಡಿಶಾ ಹಾಗೂ ಆಂಧ್ರಪ್ರದೇಶದಿಂದ ಡ್ರಗ್ಸ್ ಖರೀದಿಸಿ ತಂದು ನಗರದಲ್ಲಿ ಮಾರುತ್ತಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯ ಸಿಟಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಇಲ್ಲಿ ಹೇಳಿದರು.

‘ಆರೋಪಿ ಅಂಜಯ್‌ ಕುಮಾರ್, ತನ್ನ ಸಹೋದರನ ಪುತ್ರ ರಾಹುಲ್ ಹಾಗೂ ಕಾರು ಚಾಲಕ ಮುರಳೀಧರ್‌ ಎಂಬುವರನ್ನು ಬಳಸಿಕೊಂಡು ಡ್ರಗ್ಸ್ ಮಾರುತ್ತಿದ್ದ. ನಗರದ ಕೆಲ ಕಂಪನಿಗಳ ಉದ್ಯೋಗಿಗಳು, ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಕಾರ್ಮಿಕರು ಆರೋಪಿ ಬಳಿ ಗಾಂಜಾ ಖರೀದಿಸುತ್ತಿದ್ದರು.’

‘ಡ್ರಗ್ಸ್ ದಂಧೆಯಿಂದ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದ ಆರೋಪಿ, ಪತ್ನಿ ಶೀಲಾದೇವಿ ಹೆಸರಿನಲ್ಲಿ ಆಸ್ತಿ ಮಾಡಿದ್ದ. ಆತನ ಚರಾಸ್ತಿ ಹಾಗೂ ಸ್ಥಿರಾಸ್ತಿ ಬಗ್ಗೆ ದಾಖಲೆ ಸಮೇತ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆಸ್ತಿ ಜಪ್ತಿಗೆ ನ್ಯಾಯಾಲಯ ಅನುಮತಿ ನೀಡಿತ್ತು.’

’30×40 ಚದರ ಅಡಿ ಅಳತೆಯ ನಿವೇಶನ, 60×40 ಅಳತೆಯ ಎರಡು ನಿವೇಶನ, ಸತ್ಕೀರ್ಥಿ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿರುವ ಒಂದು ಫ್ಲ್ಯಾಟ್‌, ಸ್ಕಾರ್ಪಿಯೊ ಕಾರು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ₹ 9.75 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

Leave a Reply

Your email address will not be published. Required fields are marked *

error: Content is protected !!