ದಶರಥ ರಾಮೇಶ್ವರ ಕ್ಷೇತ್ರ

  1. ಹೊಸದುರ್ಗ ಪಟ್ಟಣದಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಗುಡ್ಡದ ನೇರಲಕೆರೆಯ ‘ದಶರಥ ರಾಮೇಶ್ವರ ವಜ್ರ’ ಅತ್ಯಂತ ಪ್ರಾಚೀನ ಕ್ಷೇತ್ರ. ವೃದ್ಧ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತು ಅವರಿಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣ ಕುಮಾರನ ಪ್ರಸಂಗ ‘ರಾಮಾಯಣ’ದಲ್ಲಿ ಉಲ್ಲೇಖವಾಗಿದೆ. ಮಾತಾ ಪಿತೃಗಳ ಸೇವೆಗೆ ಹೆಸರಾದವನು ಶ್ರವಣ ಕುಮಾರ. ಅಂಧರಾದ ತಂದೆ ತಾಯಿಗೆ (ತಂದೆ ತಾಂಡವಮುನಿ) ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುವ ಸಂದರ್ಭದಲ್ಲಿ ಗುಡ್ಡದ ನೇರಲಕೆರೆ ಪ್ರದೇಶಕ್ಕೆ ಬರುತ್ತಾನೆ. ಬಾಯಾರಿದ್ದ ತಂದೆ ತಾಯಿಯರನ್ನು ಒಂದು ಮರದ ಕೆಳಗೆ ಕುಳ್ಳಿರಿಸಿ ನೀರು ತರಲು ಸಮೀಪದ ಕೊಳದ ಬಳಿಗೆ ಹೋಗುತ್ತಾನೆ. ಇದೇ ಸಮಯದಲ್ಲಿ ಅಲ್ಲಿ ದಶರಥ ಮಹಾರಾಜ ಶಬ್ಧವೇಧಿ ಬಾಣ ಪ್ರಯೋಗದಲ್ಲಿ ನಿರತನಾಗಿರುತ್ತಾನೆ. ಕೊಳದಲ್ಲಿ ನೀರಿನ ಶಬ್ದ ಕೇಳುತ್ತದೆ. ಯಾವುದೋ ಕಾಡು ಪ್ರಾಣಿ ನೀರು ಕುಡಿಯುತ್ತಿದೆ ಎಂದು ಭಾವಿಸಿದ ದಶರಥ ಶಬ್ದ ಬಂದ ದಿಕ್ಕಿಗೆ ಬಾಣ ಪ್ರಯೋಗಿಸುತ್ತಾನೆ. ಅದು ಶ್ರವಣನಿಗೆ ತಗುಲುತ್ತದೆ. ನೋವಿನಿಂದ ಶ್ರವಣ ಕೂಗಿಕೊಳ್ಳುತ್ತಾನೆ. ಅದನ್ನು ಕೇಳಿಸಿಕೊಂಡ ದಶರಥ ಅಲ್ಲಿಗೆ ಬರುತ್ತಾನೆ. ಬಾಯಾರಿದ ತನ್ನ ತಂದೆ ತಾಯಿಗಳಿಗೆ ನೀರು ಒಯ್ಯಲು ಬಂದುದಾಗಿ ಶ್ರವಣ ದಶರಥನಿಗೆ ತಿಳಿಸಿ ಅಲ್ಲೇ ಪ್ರಾಣ ಬಿಡುತ್ತಾನೆ.

ನಂತರ ದಶರಥನೇ ಶ್ರವಣ ಕುಮಾರನ ತಂದೆ ತಾಯಿಗಳ ಬಳಿ ಹೋಗಿ ಅವರಿಗೆ ನೀರು ಕೊಡುತ್ತಾನೆ. ತನ್ನಿಂದ ಆದ ಅಚಾತುರ್ಯವನ್ನು ತಿಳಿಸಿ ನಿಮ್ಮ ಮಗ ಮೃತಪಟ್ಟನೆಂದು ಹೇಳುತ್ತಾನೆ. ಮಗ ಹತನಾದ ಸಂಗತಿ ತಿಳಿದು ಕೋಪಗೊಂಡ ಶ್ರವಣನ ತಂದೆ ತಾಯಿ ದಶರಥನಿಗೆ ಶಾಪ ಕೊಡುತ್ತಾರೆ. ಮಗನ ಅಗಲಿಕೆ ನೋವು ತಾಳಲಾರದೆ ಪ್ರಾಣ ಬಿಡುತ್ತಾರೆ. ದಶರಥ ಶಾಪ ವಿಮೋಚನೆಗಾಗಿ ಮಗ ಶ್ರೀರಾಮನೊಂದಿಗೆ ಸಮೀಪದ ಗವಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾನೆ. ದಶರಥ ಮತ್ತು ರಾಮ ಇಬ್ಬರೂ ಸೇರಿ ಪೂಜಿಸಿದ ಲಿಂಗಕ್ಕೆ ದಶರಥ ರಾಮೇಶ್ವರ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ.

ಪುರಾಣ ಕಾಲದಿಂದ ಈ ಕ್ಷೇತ್ರಕ್ಕೆ ‘ದಶರಥ ರಾಮೇಶ್ವರ ವಜ್ರ’ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದೆ. ಇಲ್ಲಿ ಶ್ರವಣಕುಮಾರ ಮತ್ತು ಅವನ ತಂದೆ ಹಾಗೂ ತಾಯಿಯರ ಸಮಾಧಿಗಳಿವೆ. ಕುರುಚಲು ಕಾಡಿದೆ.
ಇಲ್ಲಿ ಶ್ರವಣ ಕುಮಾರನಿಗೂ ಪೂಜೆ ಸಲ್ಲುತ್ತದೆ.
ಇಲ್ಲಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ ಸಮುದಾಯ ಭವನವಿದ್ದು ಸರಳ ವಿವಾಹಗಳು ನಡೆಯುತ್ತವೆ. ಬೆಂಗಳೂರಿನಿಂದ ತುಮಕೂರು ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಹಳಿಯಾರಿಗೆ ಬಂದು ಅಲ್ಲಿಂದ ನೇರಲೆಕೆರೆಗೆ ಹೋಗಬಹುದು. ನಮ್ಮ ನಾಡಿನಲ್ಲೇ ಇರುವ ಈ ಕ್ಷೇತ್ರವನ್ನು ನಮ್ಮ ಪ್ರಯಾಣದ ಪಟ್ಟಿಯಲ್ಲಿ ಸೇರಿಸಿಕೊಳ್ಳೋಣ.

Leave a Reply

Your email address will not be published. Required fields are marked *

error: Content is protected !!