ಕೋವಿಡ್ ಮೂರನೇ ಅಲೆ ಭಯದಲ್ಲೇ ಇರುವ ಜನರು

ನವದೆಹಲಿ: ಕೊರೊನಾ ಸೋಂಕಿನ ಮುಂದಿನ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವುದಾಗಿ ತಜ್ಞರು ಅಂದಾಜು ಮಾಡಿದ್ದು, ಈ ಮಾರ್ಚ್‌ ತಿಂಗಳಿನಿಂದ ಸದ್ದಿಲ್ಲದೇ ಮಕ್ಕಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದಾಗಿ ತಜ್ಞರ ಸಮಿತಿ ಕೇಂದ್ರಕ್ಕೆ ಎಚ್ಚರ ನೀಡಿದೆ.

ದೇಶದ ವೈದ್ಯಕೀಯ ಮೂಲಸೌಕರ್ಯ ಹಾಗೂ ಕೊರೊನಾ ಸೋಂಕಿನ ನಿರ್ವಹಣೆಯಲ್ಲಿ ತೊಡಗಿರುವ ಎಂಪವರ್ಡ್ ಗ್ರೂಪ್ -1 (ಇಜಿ-01, ಒಟ್ಟಾರೆ ಕೊರೊನಾ ಸಕ್ರಿಯ ಪ್ರಕರಣಗಳಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂಬುದನ್ನು ದತ್ತಾಂಶಗಳ ಮೂಲಕ ತೋರಿಸಿದೆ.


ಅಂಕಿ ಅಂಶಗಳ ಪ್ರಕಾರ, ಕೊರೊನಾ ಸಕ್ರಿಯ ಪ್ರಕರಣಗಳಲ್ಲಿ 1ರಿಂದ 10 ವರ್ಷದ ಮಕ್ಕಳ ಪಾಲು ಈ ಮಾರ್ಚ್‌ನಲ್ಲಿ 2.80% ಇದ್ದದ್ದು ಆಗಸ್ಟ್‌ ತಿಂಗಳಿನಲ್ಲಿ 7.04%ಗೆ ಏರಿಕೆಯಾಗಿದೆ. ಪ್ರತಿ ನೂರು ಸಕ್ರಿಯ ಪ್ರಕರಣಗಳಲ್ಲಿ ಸುಮಾರು ಏಳು ಮಕ್ಕಳು ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಮಕ್ಕಳೆಡೆಗೆ ಈ ಸೋಂಕು ಕನಿಷ್ಠ ಪರಿಣಾಮ ಬೀರಬಹುದು. ಹಾಗೆಂದು ಸೋಂಕು ಯಾವುದೇ ತಿರುವು ಪಡೆಯುವುದನ್ನು ನಿರ್ಲಕ್ಷಿಸುವಂತಿಲ್ಲ ಎಂದು ನೀತಿ ಆಯೋಗ ಸದಸ್ಯ ವಿ.ಕೆ. ಪೌಲ್ ನೇತೃತ್ವದ ತಂಡ ತಿಳಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜೂನ್ 2020ರಿಂದ ಫೆಬ್ರವರಿ 2021ರವರೆಗಿನ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 1-10 ವಯಸ್ಸಿನ ಮಕ್ಕಳ ಪಾಲು 2.72% ಇಂದ 3.59% ಇದೆ ಎಂದು ದತ್ತಾಂಶ ವಿವರಣೆ ನೀಡಿದೆ.

ದತ್ತಾಂಶ ಲಭ್ಯವಿರುವ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಮಕ್ಕಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಿಜೋರಾಂನಲ್ಲಿ ಅತಿ ಹೆಚ್ಚಿದೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ 16.48% ಇದೆ. ದೆಹಲಿಯಲ್ಲಿ ಅತಿ ಕಡಿಮೆ, ಅಂದರೆ 2.25% ಇದೆ ಎಂದು ದತ್ತಾಂಶ ತಿಳಿಸಿದೆ.

ಸೆಪ್ಟೆಂಬರ್ -ಅಕ್ಟೋಬರ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳು ಉತ್ತುಂಗ ತಲುಪಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಆ ಸಮಯದಲ್ಲಿ ದಿನನಿತ್ಯ ಸುಮಾರು 6 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಬಹುದು. ಮಕ್ಕಳ ಮೇಲೆ ಈ ಸೋಂಕು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಮಂಗಳವಾರ ಭಾರತದಲ್ಲಿ ಒಂದೇ ದಿನ 25,404 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,32,89,579ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 339 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,43,213ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ 3,24,84,159 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,62,207 ಆಗಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳು ಹನ್ನೆರಡು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುತ್ತಿವೆ ಹಾಗೂ ಕೆಲವು ದೇಶಗಳಲ್ಲಿ ಚಿಕ್ಕ ಮಕ್ಕಳ ಮೇಲೆ ಕೊರೊನಾ ಸೋಂಕಿನ ವಿರುದ್ಧ ಲಸಿಕೆಗಳ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ವೆನೆಜುಲಾದಂಥ ದೇಶಗಳು ಕಿರಿಯ ಮಕ್ಕಳಿಗೆ ಲಸಿಕೆ ಹಾಕಲು ಯೋಜನೆ ರೂಪಿಸಿರುವುದಾಗಿ ಘೋಷಿಸಿವೆ. ಚಿಲಿ ದೇಶ ಚೀನಾದ ಸಿನೋವ್ಯಾಕ್ ಲಸಿಕೆಗಳನ್ನು ಆರು ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ನೀಡಲು ಅನುಮೋದನೆ ನೀಡಿದೆ.

ಭಾರತದಲ್ಲಿ ಪ್ರಸ್ತುತ ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ಝೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ಕೊಡಲು ಅನುಮೋದನೆ ನೀಡಲಾಗಿದೆ. ದೇಶದಲ್ಲಿ ಮಕ್ಕಳಿಗೆ ನೀಡಲು ಅನುಮೋದನೆ ಪಡೆದ ಏಕೈಕ ಲಸಿಕೆ ಇದಾಗಿದೆ.

Leave a Reply

Your email address will not be published. Required fields are marked *

error: Content is protected !!