ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಪಕ್ಷ ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಬಿಎಸ್. ಯಡಿಯೂರಪ್ಪ ಅವರನ್ನು ಜಗದೀಶ್ ಶೆಟ್ಟರ್ ಅವರು ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬಿಎಸ್ ವೈ ನಿವಾಸದಲ್ಲಿ ಕೆಲ ಗಂಟೆಗಳ ಕಾಲ ಚರ್ಚೆ ನಡೆಸಿರುವ ಇಬ್ಬರು ನಾಯಕರು ಅಮಿತ್ ಶಾ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಬಹಳಷ್ಟು ಸಮಯವಿದ್ದು, ಈ ಹೊತ್ತಿನಲ್ಲಿ ಇಂತಹ ಹೇಳಿಕೆಯ ಅಗತ್ಯವೇನಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ದಿನಗಳ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಮಾತನಾಡಿದ್ದ ಸಚಿವ ಈಶ್ವರಪ್ಪ ಅವರು, ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವನ್ನು ನಾವು ಬಯಸುತ್ತೇವೆ’ ಎಂಬ ಹೇಳಿಕೆ ನೀಡಿದ್ದು, ಅಮಿತ್ ಶಾ ಹೇಳಿಕೆ ರಾಜ್ಯದ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.