ಶ್ರೀ ಅನಂತ ಚತುರ್ದಶೀ ವ್ರತಮ್

#ಅನಂತಚತುರ್ದಶೀವ್ರತ
#ಭಾನುವಾರ_19ನೇತಾರೀಖು
ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯನ್ನು ‘ಅನಂತ ಚತುರ್ದಶಿ’ ಎಂದು ಕರೆಯುತ್ತಾರೆ. ಈ ದಿನವು ಶ್ರೀ ಗಣೇಶ ಚತುರ್ಥಿ ಆಚರಣೆಯ ಕೊನೆಯ ದಿನವೂ ಹೌದು. ಈ ದಿನದಂದು ಅನೇಕರು ಅನಂತ ವ್ರತವನ್ನು ಆಚರಿಸುತ್ತಾರೆ. ಈ ವ್ರತದ ಬಗ್ಗೆ ಪ್ರಚಲಿತವಿರುವ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂದು ನಂಬಿಕೆಯಿದೆ. ಶ್ರೀ ಅನಂತ ಪದ್ಮನಾಭ ದೇವರು ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರಿಸುತ್ತಾರೆ ಮತ್ತು ಸುಖ, ಆರೋಗ್ಯ, ಸಂಪತ್ತನ್ನು ಪ್ರದಾನಿಸುತ್ತಾರೆ ಎಂದು ನಂಬಿಕೆಯಿದೆ. ಅನಂತ ವ್ರತದ ಬಗ್ಗೆ ಒಂದು ಕಥೆಯನ್ನು ನೋಡೋಣ : ಕೌಂಡಿಲ್ಯ ಮುನಿಯು ವಿವಾಹದ ನಂತರ ಸಪತ್ನೀಕನಾಗಿ ಮನೆಯಿಂದ ಹೊರಟನು. ದಾರಿಯಲ್ಲಿ ನದಿಯ ತೀರದಲ್ಲಿ ಅವರು ನಿತ್ಯ ಕರ್ಮಗಳಿಗೆ ನಿಂತಾಗ, ಅವರ ಪತ್ನಿಯು ಕೆಲವು ಮಹಿಳೆಯರನ್ನು ಒಂದು ವ್ರತವನ್ನು ಆಚರಿಸುತ್ತಿರುವುದನ್ನು ನೋಡಿದರು. ಆ ಮಹಿಳೆಯರನ್ನು ಕೇಳಿದಾಗ ‘ನಾವು ಅನಂತ ವ್ರತವನ್ನು ಆಚರಿಸುತ್ತಿದ್ದೇವೆ’ ಎಂದೂ, ಆ ವ್ರತದಿಂದ ಆಗುವ ಲಾಭಗಳೇನು ಎಂದೂ ತಿಳಿಸಿದರು.

ಇದರಿಂದ ಪ್ರಭಾವಿತರಾದ ಕೌಂಡಿಲ್ಯ ಮುನಿಯ ಪತ್ನಿಯೂ ಕೂಡ ಶೇಷಶಯನನಾದ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಲು ಅನಂತ ವ್ರತವನ್ನು ಆಚರಿಸತೊಡಗಿದಳು. ಇದರಿಂದಾಗಿ ಕೌಂಡಿಲ್ಯ ಮುನಿಯ ಧನ ಸಂಪತ್ತು ವೃದ್ಧಿಯಾಯಿತು. ಅನೇಕ ವರ್ಷಗಳ ನಂತರ ಒಂದು ದಿನ ಕೌಂಡಿಲ್ಯ ಮುನಿಯು ತನ್ನ ಪತ್ನಿಯ ಕೈಯಲ್ಲಿರುವ ಅನಂತ ವ್ರತದ ದಾರವನ್ನು ನೋಡಿ ಅದೇನೆಂದು ವಿಚಾರಿಸಿದನು. ಪತ್ನಿಯು ‘ಇದು ಅನಂತ ವ್ರತದ ದಾರ, ಈ ವ್ರತದಿಂದ ನಮಗೆ ದೇವರು ಸುಖ ಸಂಪತ್ತನ್ನು ಕರುಣಿಸಿದ್ದಾನೆ’ ಎಂದು ಹೇಳಿದಳು. ಇದನ್ನು ಕೇಳಿ ಕೌಂಡಿಲ್ಯ ಮುನಿಯು ಕೋಪಗೊಂಡು ‘ಈ ಸುಖ ಸಂಪತ್ತು ನನ್ನ ಪಾಂಡಿತ್ಯದಿಂದ ನಾನು ಸಂಪಾದಿಸಿದ್ದೇನೆ’ ಎಂದು ಹೇಳಿ, ಪತ್ನಿಯ ಕೈಯಲ್ಲಿರುವ ದಾರವನ್ನು ಕಿತ್ತೆಸೆದನು.

ಕ್ರಮೇಣ ಅವರಲ್ಲಿರುವ ಸಂಪತ್ತು ಕ್ಷೀಣಿಸತೊಡಗಿತು. ಮುಂದೊಂದು ದಿನ ಎಲ್ಲವನ್ನೂ ಕಳೆದುಕೊಂಡ ಕೌಂಡಿಲ್ಯ ಮುನಿಗೆ ತನ್ನ ತಪ್ಪಿನ ಅರಿವಾಯಿತು. ಅಖಂಡ ತಪಸ್ಸನ್ನು ಆಚರಿಸಿ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಿದನು. ಶ್ರೀ ವಿಷ್ಣು ಕೌಂಡಿಲ್ಯ ಮುನಿಗೆ ದರ್ಶನವನ್ನಿತ್ತು, 14 ವರ್ಷಗಳ ಕಾಲ ಅನಂತ ವ್ರತವನ್ನು ಆಚರಿಸಿದರೆ, ಹೋದ ಸುಖ ಸಂಪತ್ತು ಪುನಃ ಗಳಿಸುವುದಾಗಿ ವರವನ್ನು ನೀಡಿದರು. ಅನಂತ ವ್ರತದ ಬಗ್ಗೆ ಇನ್ನೊಂದು ಕಥೆಯನ್ನು ನೋಡೋಣ : ಪಾಂಡವರು ಕೌರವರ ಕೈಯಲ್ಲಿ ರಾಜ್ಯವನ್ನು ಸೋತು 14 ವರ್ಷಗಳ ಕಾಲ ವನವಾಸವನ್ನು ಅನುಭವಿಸಬೇಕಾಯಿತು. ಈ ಸಮಯದಲ್ಲಿ ಶ್ರೀ ಕೃಷ್ಣನು ಪಾಂಡವರಿಂದ ಅನಂತ ವ್ರತವನ್ನು ಆಚರಿಸಿದನು, ಇದರ ಫಲವಾಗಿ ಅವರಿಗೆ ರಾಜ್ಯ ಭಾಗ್ಯ ಮರಳಿ ದೊರೆಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಅನೇಕರು ಅನಂತ ವ್ರತವನ್ನು 14 ವರ್ಷಗಳ ಕಾಲ ಆಚರಿಸುತ್ತಾರೆ. ಕೆಲವರು ಪರಂಪರಾಗತವಾಗಿ ಅನಂತ ವ್ರತವನ್ನು ಆಚರಿಸುತ್ತಾರೆ. ಇನ್ನು ಕೆಲವರು ಶಕ್ತಿಗನುಸಾರ ಆಚರಿಸುತ್ತಾರೆ. ನಿಷ್ಕಲ್ಮಶ ಮನಸ್ಸಿನಿಂದ, ಭಕ್ತಿಯಿಂದ, ಭಾವದಿಂದ ಅನಂತ ಚತುರ್ದಶಿ ವ್ರತವನ್ನು ಆಚರಿಸಿದವರಿಗೆ ಅನಂತ ದೇವರು ಒಲಿದು ಆರೋಗ್ಯ, ಆಯಸ್ಸು, ಸುಖ, ಸಂಪತ್ತು ಪ್ರದಾನಿಸುತ್ತಾರೆ.

ಅನಂತ ಚತುರ್ದಶಿ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂಬ ನಂಬಿಕೆಯಿದೆ. ಇಂದು ಅನಂತ ಪದ್ಮನಾಭ ದೇವರನ್ನು ಪೂಜಿಸಿದರೆ, ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರುತ್ತದೆ ಎಂಬ ನಂಬಿಕೆಯೂ ಇದೆ.ಅನೇಕರು ನಾಳೆಯ ದಿನ ಮನೆಯಲ್ಲಿಟ್ಟು ಪೂಜಿಸುತ್ತಿದ್ದ ಗಣೇಶನನ್ನು ವಿಸರ್ಜನೆ ಮಾಡುತ್ತಾರೆ.

ಹಿಂದೂ ಹಬ್ಬದ 16 ಪರ್ವ ದಿನಗಳಲ್ಲಿ ಒಂದಾದ ಅನಂತನ ಚತುರ್ದಶಿ ಆಚರಣೆ ರೀತಿ ವಿಶಿಷ್ಟ. ಅದರ ಹಿನ್ನೆಲೆ, ಆಚರಣೆ ಬಗ್ಗೆ ಕಿರು ಮಾಹಿತಿ.

ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನ ಬರುವ ಹಬ್ಬವೇ ಅನಂತ ಚತುರ್ದಶಿ. ವಿಷ್ಣು ದೇವರು ಸಾವಿರ ಹೆಡೆಯ ಅನಂತ ಶೇಷನ ಮೇಲೆ ಶಯನಿಸುತ್ತಾರೆ ಎಂಬ ನಂಬಿಕೆಯಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಅದರಲ್ಲೂ ವಿಶೇಷವಾಗಿ ಸಂಪತ್ತು ಹಾಗೂ ಸಂತಾನ ಪ್ರಾಪ್ತಿಗೆ ಕೈಗೊಳ್ಳುವ ವ್ರತ ಅನಂತನ ವ್ರತವಾಗಿದೆ. ಹಾಗಾಗಿ ಇದನ್ನು ಅನಂತ ಪದ್ಮನಾಭ ವ್ರತವೆಂದೂ ಕರೆಯುತ್ತಾರೆ. ಈ ವ್ರತ ಮಾಡಲು ಆರಂಭಿಸಿದವರು 14 ವರ್ಷಗಳವರೆಗೆ ಕಡ್ಡಾಯವಾಗಿ ಆಚರಿಸಬೇಕೆಂಬ ನಿಯಮವಿದೆ. ಅನುಕೂಲವಾದರೆ ಆಚರಣೆಯನ್ನು ಮುಂದುವರಿಸಲೂಬಹುದು. ಅನಂತ ಚತುರ್ದಶಿ ವ್ರತಾಚರಣೆ ವಿಧಾನ: ಮನೆಯ ಯಜಮಾನ ಮತ್ತು ಅವನ ಪತ್ನಿ ಮುಂಜಾನೆಯೇ ಎದ್ದು ಶುಚಿರ್ಭೂತರಾಗಿ ಮನೆಯ ಪಕ್ಕದಲ್ಲಿರುವ ಬಾವಿ ಅಥವಾ ಕೆರೆಯಿಂದ ನೀರನ್ನು ತರುತ್ತಾರೆ. (ಇದಕ್ಕೆ ಯಮುನೆ ನೀರು ಎಂದು ಕರೆಯುತ್ತಾರೆ.) ಕಲಶದಲ್ಲಿ ನೀರನ್ನು ಹಾಕಿ ಅದರ ಮೇಲೆ ದರ್ಬೆ ಹುಲ್ಲಿನಿಂದ ರಚಿಸಿದ ಹಾವಿನ ಹೆಡೆಯನ್ನಿಡುತ್ತಾರೆ. ಮುಂದೆ ಸಾಲಿಗ್ರಾಮವನ್ನಿಟ್ಟು ಪೂಜಿಸುತ್ತಾರೆ.ವ್ರತ ಕೈಗೊಳ್ಳುವ ಯಜಮಾನನ ಬಲಗೈ ತೋಳಿಗೆ ಕುಂಕುಮ ಲೇಪಿತ ಗಂಟು ಕಟ್ಟಿದ ಹಳದಿ ಬಣ್ಣದ ದಾರ ಹಾಗೂ ಆತನ ಪತ್ನಿ ಎಡಗೈ ತೋಳಿಗೆ ದಾರ ಕಟ್ಟಿಕೊಳ್ಳುವ ಶಾಸ್ತ್ರವಿದೆ. ಇದಕ್ಕೆ ಅನಂತನ ದಾರ ಎನ್ನುತ್ತಾರೆ. ವ್ರತ ಕೈಗೊಂಡವರು ಬೆಳಗ್ಗೆ ಹಾಗೂ ಮಧ್ಯಾಹ್ನ ಉಪವಾಸವಿದ್ದು, ರಾತ್ರಿ ದೇವರ ಪ್ರಸಾದವೆಂದು ಭೋಜನ ಸೇವಿಸುತ್ತಾರೆ.

ಅನಂತ ಪದ್ಮನಾಭ ವ್ರತಕ್ಕೆ 14 ಬಗೆಯ ಭಕ್ಷ್ಯಗಳನ್ನು ತಯಾರಿಸುವ ಪದ್ಧತಿಯಿದೆ. ಅನ್ನ, ಕಡುಬು, ಮೋದಕ, ಚಕ್ಕುಲಿ, ಹಾಲು, ಬೆಲ್ಲ ಇತ್ಯಾದಿಗಳನ್ನು ದೇವರ ಮುಂದಿಟ್ಟು ನೈವೇದ್ಯ ಮಾಡುತ್ತಾರೆ. ಪೂಜೆ, ಅನಂತ ಪದ್ಮನಾಭನ ಕಥೆ ಮುಗಿದು ಮಂಗಳಾರತಿ ನಡೆಯುತ್ತದೆ. ಆಗ ಮನೆಯವರು, ಬಂಧುಗಳೆಲ್ಲ ಒಟ್ಟು ಸೇರಿ ಪ್ರಾರ್ಥನೆ ಮಾಡುತ್ತಾರೆ, ತಮ್ಮ ಇಷ್ಟಾರ್ಥ ಸಿದ್ದಿ ನೆರವೇರಿಕೆಗೆ ಸಂಕಲ್ಪ ಮಾಡಿಕೊಳ್ಳುತ್ತಾರೆ. ಮನೆಯವರು ಆ ದಿನ ರಾತ್ರಿಯಿಡೀ ಜಾಗರಣೆ ಕುಳಿತು ದೇವರ ಸ್ಮರಣೆ, ಸ್ತುತಿಯಲ್ಲಿ ನಿರತರಾಗಿರಬೇಕೆಂಬ ನಿಯಮವಿದೆ. ಮಾರನೇ ದಿನ ಪೂಜೆಯ ನೀರನ್ನು ಮತ್ತೆ ಬಾವಿ ಅಥವಾ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜಿಸುತ್ತಾರೆ. ಈ ವೃತವನ್ನು ಆಚರಿಸುವ ಮನೆ ಯಾ ದೇವಸ್ಥಾನ ನಮ್ಮ ವಾಸ್ತವ್ಯಕ್ಕೆ ಹತ್ತಿರ ವಿದ್ದಲ್ಲಿ ಭೇಟಿ ನೀಡಿ ಆ ಕಳಸವನ್ನು ನಮ್ಮ ಕಣ್ಮನಗಳಿಂದ ನೋಡುವುದರಿಂದ ನಮ್ಮ ಇಷ್ಟಾರ್ಥ ಗಳು ಫಲಿಸುವುದರೊಂದಿಗೆ, ಕೆಲವರಿಗಂತೂ ಸಂತಾನಪ್ರಾಪ್ತಿ, ಧನಪ್ರಾಪ್ತಿಯಾದ ಇತಿಹಾಸವು ನೋಡಲು ಸಿಗುತ್ತದೆ. ನಮ್ಮ ಪೂರ್ವಜರು ಅಂದಿನ ಕಷ್ಟದ ಅನಿವಾರ್ಯ ಸನ್ನಿವೇಶದಲ್ಲಿ ಈ ವೃತವನ್ನು ಪ್ರತಿವರ್ಷ ಆಚರಿಸುತ್ತಾ ಸಂತಾನಪ್ರಾಪ್ತಿ, ಸರ್ವಾಭೀಷ್ಟ ಸಿದ್ಧಿ ಯೊಂದಿಗೆ ಧನಪ್ರಾಪ್ತಿಯನ್ನು ಪಡೆದುಕೊಂಡ ಬಗ್ಗೆ ಹಲವಾರು ಕುಟುಂಬಗಳನ್ನು ನಾವು ನೋಡಬಹುದಾಗಿದೆ.

ಭಾದ್ರಪದ ಶುದ್ಧ ಚತುರ್ದಶಿ ಭಾನುವಾರದಂದು “ಶ್ರೀ ಅನಂತಪದ್ಮನಾಭ ವ್ರತ ” – ಈ ವ್ರತದ ಅಧಿದೇವತೆ ಶ್ರೀ ಮಹಾವಿಷ್ಣು ! ಇಂದು ಸ್ವಾಮಿಯು ತನ್ನ ಸಕಲ ದೇವತಾ ಪರಿವಾರದೊಡಗೂಡಿ ಪೂಜಿಸಲ್ಪಡುವುದೇ ವಿಶೇಷ ವಾಗಿದೆ ! ಅನಂತ ದೇವನು ತನ್ನನ್ನು ಭಕ್ತಿಯಿಂದ ಪೂಜಿಸುವವರಿಗೆ ಅನಂತ ಕೀರ್ತಿ ಸಂಪತ್ತು ,ಸುಖಶಾಂತಿ ಸೌಭಾಗ್ಯವನ್ನು ಅನಂತಕಾಲದವರೆಗೂ ಕೊಡುತ್ತಾನೆಂದೇ ಪ್ರತೀತಿಯಿದೆ !!

ಈ ವ್ರತವು ಅನೇಕರ ಮನೆಯಲ್ಲಿ ಇರುವುದಿಲ್ಲ , ಇದನ್ನು ತುಂಬಾ ಮಡಿಯಾಗಿ ಭಕ್ತಿಶ್ರದ್ಧೆಯಿಂದ ಮಾಡಬೇಕು ! ಮನೆಯಲ್ಲಿ ಹಿರಿಯರು ವ್ರತವನ್ನು ಮಾಡುವ ಪದ್ಧತಿ ನೆಡೆಸಿಕೊಂಡು ಬಂದಿದ್ದರೇ ಮುಂದಿನವರು ಅದನ್ನು ಆಚರಿಸುತ್ತಾ ಮುನ್ನೆಡಸಬೇಕು ,

ಈವ್ರತದ ವಿಶೇಷ – ದಂಪತಿಗಳಿಬ್ಬರೂ ಒಟ್ಟಿಗೇ ಕುಳಿತು ಮಾಡಬೇಕಾದ ವ್ರತವಿದು !

ಪದ್ಧತಿ ಇಲ್ಲದವರು – ಮಾಡುವವರ ಮನೆಯಲ್ಲಿ ಅಥವಾ ಮಠ ಮಂದಿರಗಳಲ್ಲಿ ಪೂಜೆ ಮಾಡಿದ ಅನಂತದೇವರ ದಿವ್ಯದರ್ಶನ ಪಡೆದರೂ ಅನಂತ ಫಲ ಸಿಗುವುದಂತೆ !

ಬೆಳಗ್ಗೆ ಶುದ್ಧರಾಗಿ ಮನೆಯ ಅಂಗಳ ಮುಂಬಾಗಿಲು ಗುಡಿಸಿ ಸಾರಿಸಿ ದೊಡ್ಡ ಪದ್ಮರಂಗೋಲಿಯಿರಿಸಿ ಹೊಸಿಲಿಗೆ ಅರಿಶಿನಕುಂಕುಮವಿರಿಸಿ ಮಾವಿನ ತೋರಣ ಕಟ್ಟಿ ಬಾಗಿಲಿಗೆ ತುಳಸಿಗೆ ಗೆಜ್ಜೆವಸ್ತ್ರವಿಟ್ಟು ಪೂಜಿಸಿ ಅನಂತದೇವರ ಮಂಟಪ ಕಟ್ಟಿರುವ ಜಾಗದಲ್ಲಿ ರಂಗೋಲಿಹಾಕಿ ಮಣೆಹಾಕಿ ಅದರ ಮೇಲೆ ತಟ್ಟೆಯಲ್ಲಿ ಗೋಧಿಹರಡಿ ಅದರಮೇಲೆ ಕಲಶಕೂಡಿಸಬೇಕು ! ಮಂಟಪಕ್ಕೆಬಾಳೆಕಂದು ಕಟ್ಟಿ ಮಾವಿನ ತೋರಣ ಕಟ್ಟಿರಬೇಕು ! ಈ ವ್ರತದಲ್ಲಿ ಎರಡು ಕಲಶವಿರುವುದೇ ವಿಶೇಷ ! ಒಂದು ಅನಂತದೇವರು ಮತ್ತು ಯಮುನಾದೇವಿ ಕಲಶ – ಅನಂತದೇವರ ಕಲಶದ ಮೇಲೆ ಧರ್ಭೆಯಿಂದ ಏಳುಹೆಡೆ ಸರ್ಪಕಾರ ಮಾಡಿ ಇಟ್ಟು ಅದರ ಮೇಲೆ ತೆಂಗಿನಕಾಯಿ ಇಡುತ್ತಾರೆ ! ಯಮುನಾದೇವಿ ಕಲಶದ ಪೂಜೆ ತುಂಬಾ ವಿಶೇಷವಾಗಿರುತ್ತದೆ – ದಂಪತಿಗಳು ಮೊದಲು ಹೋದವರ್ಷದ ಪೂಜೆಯ ಹಳೇದಾರವನ್ನು ಧರಿಸಿಕೊಂಡು ಪೂಜೆಗೆ ಕೂಡಬೇಕು . ಮೊದಲು ಶುದ್ಧಗಂಗೆಯನ್ನು ತಂದು ಕಲಶಕ್ಕೆ ಹಾಕಿ ಯಮುನಾದೇವಿಯನ್ನು ಆಹ್ವಾನಿಸಿ ಕಲಶದ ಮೇಲೆ ಮಾವಿನ ಎಲೆ ಇರಿಸಿ – ಅರಿಶಿನಕುಂಕುಮ ಹಚ್ಚಿದತೆಂಗಿನಕಾಯಿ ಇಡುತ್ತಾರೆ ! ಮೊದಲು ಶಾಸ್ತ್ರೋಕ್ತವಾಗಿ ಯಮುನಾದೇವಿಯ ಪೂಜೆ ವಸ್ತ್ರ ಹೂವುಗಳಿಂದ ಅಲಂಕರಿಸಿ ಅರ್ಚನೆ ಮಾಡಿ , ಆಮೇಲೆ ಅನಂತದೇವರ ಕಲಶ ಸ್ಥಾಪನೆ ಮಾಡಿಸಿ ಶೋಡಶೋಪಚಾರ ಪೂಜೆ – ಪಂಚಾಮೃತ , ಶುದ್ಧೋದಕ ಸ್ನಾನ , ಗಂಧ , ಅರಿಶಿನ ವಸ್ತ್ರ ಗಳಿಂದ ಪೂಜಿಸಿ ನಾನಾವಿಧ ಪರಿಮಳ ಪುಷ್ಪಗಳಿಂದ ಪುಷ್ಪ ಮಾಲಿಕೆಯಿಂದ ಸ್ವಾಮಿಯನ್ನು ಅಲಂಕರಿಸಿ ಮುಖ್ಯವಾಗಿ ಕಮಲದ ಪುಷ್ಪದಿಂದ ಪೂಜಿಸಬೇಕು .

ಅನಂತ ಕಲಶಕ್ಕೆ ಹಿಂಬದಿಯಲ್ಲಿ ಹೊದಿಸಲು ಅನಂತಸ್ವಾಮಿಯ ಚಿತ್ರವಿರುವ ವಸ್ತ್ರಕೂಡಾ ಸಿಗುತ್ತದೆ ! ಇದನ್ನು ಕಲಶದ ಹಿಂಬದಿಯಲ್ಲಿ ಹೊದಿಸಿರಬೇಕು , ಅನಂತದಾರವನ್ನು ಕಲಶದ ಪಕ್ಕದಲ್ಲಿ ತಟ್ಟೆಯಲ್ಲಿ ಪೂಜೆಗಿಟ್ಟಿರಬೇಕು , ಹದಿನಾಲ್ಕು ಗಂಟು ಗಳಿಗೂ ವಿಶೇಷವಾದ ಮಂತ್ರಗಳಿಂದ ಪೂಜಿಸಬೇಕು .

ಅನಂತದೇವರ ಅಷ್ಟೋತ್ತರದ ವಿಶೇಷ – ನಾಮದ ಪ್ರತೀ ಪದವೂ “ಅ ” ಇಂದಲೇ ಶುರುವಾಗುವುದು, ಅತೀ ಸುಂದರ ನಾಮಗಳು ವಿಷ್ಣುವಿನದು !! ಅನಂತದೇವರು ವೃದ್ಧ ಬ್ರಾಹ್ಮಣ ರೂಪಿಯಾಗಿ ದರ್ಶನ ಕೊಟ್ಟಿರುವುದರಿಂದ ಇಂದಿನ ನೈವೇದ್ಯದ ಅಡಿಗೆ ಭಕ್ಷಗಳೆಲ್ಲಾ ಮೆತ್ತಗೆ ಮೃದುವಾಗಿರಬೇಕು , ತಟ್ಟೆಇಡ್ಲಿ , ಹಿಟ್ಟಿನಕಡುಬು , ಸಿಹಿ ಖಾರದ್ದು , ಹಾಲುಬಾಯಿ , ಗೋಧಿನುಚ್ಚಿನ ಪಾಯಸ ಮುಖ್ಯವಾಗಿ ಮಾಡಲೇ ಬೇಕು ! ಮಾಡಿದ ಅಡಿಗೆ ಭಕ್ಷ ಮತ್ತು ನಾನಾವಿಧ ಫಲಗಳನ್ನು ನೈವೇದ್ಯ ಮಾಡಬೇಕು , ನಂತರ ಭಕ್ತಿಯಿಂದ ಮಹಾಮಂಗಳಾರತಿ ಮಾಡಿ ಮಂತ್ರಪುಷ್ಪಗಳನ್ನು ಹಾಕಿ ೧೪ ಪ್ರದಕ್ಷಿಣೆ ನಮಸ್ಕಾರ ಮಾಡುತ್ತಾ ನಮ್ಮಅನಂತ ಅಪರಾಧಗಳನ್ನು ಕ್ಷಮಿಸಿ ಅನಂತಕಾಲ ಸೌಭಾಗ್ಯ ಕೊಟ್ಟು ಕಾಪಾಡೆಂದು ಪ್ರಾರ್ಥನೆ ಮಾಡಿಕೊಳ್ಳಬೇಕು .ನಂತರ ಹಿರಿಯರಿಂದ ಪಡೆದ ಹೊಸಾ ಅನಂತದಾರವನ್ನು- ಹಳೆಯದನ್ನು ತೆಗೆದು – ಹೆಂಗಸರು ಕೊರಳಿಗೆ ಗಂಡಸರು ತೋಳಿಗೆ ಕಟ್ಟಿಕೊಳ್ಳುತ್ತಾರೆ !

ಮುಖ್ಯವಾಗಿ ಇಂದು ಬ್ರಾಹ್ಮಣ ಮುತೈದೆಯರನ್ನು ಊಟಕ್ಕೆ ಕರೆದು ಬ್ರಾಹ್ಮಣರಿಗೆ ಉಪಾಯನದಾನ ಗೋಧಿ , ದಕ್ಷಿಣೆ ತಾಂಬೂಲ ಸಮೇತ ಕೊಟ್ಟು ಮುತ್ತೈದೆಗೆ ಬಾಗಿನವನ್ನು ಅನಂತದಾರದ ಸಮೇತ ಕೊಡಬೇಕು .

ನಂತರ ಮನೆಯ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು.

ಮನೆಯವರು, ನೆಂಟರಿಷ್ಟರು , ಬ್ರಾಹ್ಮಣ ಸುವಾಸಿಯರು , ಮಕ್ಕಳಿಗೆಲ್ಲಾ ಆದರ ಉಪಚಾರದೊಡನೆ ಭೋಜನ ಬಡಿಸಿ ತಾವೂ ಪ್ರಸಾದ ಸ್ವೀಕರಿಸಬೇಕು . ಮನೆಯಲ್ಲಿ ಮಡಿಯಿಂದ ಮಾಡುವುದು ಸ್ವಲ್ಪ ಕಷ್ಟವಾದ್ದರಿಂದ ಈಗ ಎಲ್ಲಾ ಮಠಗಳಲ್ಲಿ , ದೇವಸ್ಥಾನಗಳಲ್ಲಿ ಮಾಡಿಸುತ್ತಾರೆ. ಅನಂತವ್ರತ ಮಾಡಲು ಅಡಚಣೆ ಇದ್ದವರು ನವರಾತ್ರಿಯಲ್ಲಿಯೂ ಈವ್ರತವನ್ನು ಮಾಡಬಹುದಾಗಿದೆ —

*********

ಶ್ರೀ ಅನಂತ ಪದ್ಮನಾಭದೇವರು ” ಶ್ರೀ ಅನಂತ ಪದ್ಮನಾಭ ವ್ರತ “.

ಅನಂತ ದೇವಾ ನಮೋ ನಮೋ ।

ಅನಂಗ ಜನಕ ನಮೋ ನಮೋ ।

ಅನಂಗ ಶಯನ ನಮೋ ನಮೋ ।

ಅನಘೋತ್ತಮ ನಮೋ ನಮೋ ।

ಅನನುತ ನಮೋ ನಮೋ ।।

ಅನಾಥ ಬಂಧು ನಮೋ ನಮೋ ।

ಅನಿಮಿತ್ತ ಬಂಧು ನಮೋ ನಮೋ ।

ಅನಿಮಿಶ ನದಿ ಪಿತ ನಮೋ ನಮೋ ।

ಅನಿಲಾಶಶೈಲಾಧಿಪ ನಮೋ ನಮೋ ।

ಅನಲನೇತ್ರ ವಂದ್ಯ ನಮೋ ನಮೋ ।।

ವಿವರಣೆ :

ಅನಂತ = ಶ್ರೀ ಮಹಾವಿಷ್ಣು

ಅನಂಗ ಜನಕ = ಮನ್ಮಥನ ತಂದೆ ಶ್ರೀ ಹರಿ

ಅನಂತ ಶಯನ = ಶೇಷಶಯನ ಶ್ರೀಮನ್ನಾರಾಯಣ

ಅನಘೋತ್ತಮ = ಸರ್ವೋತ್ತಮ

ಅನನುತ = ಶ್ರೀ ವಾಯುದೇವರಿಂದ ಸ್ತುತ್ಯನಾದ ಶ್ರೀ ಹರಿ

ಅನಿಮಿತ್ತ ಬಂಧು = ಆಪತ್ತಿಗೆ ಒದಗುವವ ಶ್ರೀಮನ್ನಾರಾಯಣ

ಅನಿಮಿಶ ನದಿ ಪಿತ = ಗಂಗಾ ಜನಕ ಶ್ರೀ ಹರಿ

ಅನಿಲಾಶನ ಶೈಲಾಧಿಪ = ಗಾಳಿಯನ್ನೇ ಆಹಾರವನ್ನಾಗಿವುಳ್ಳ ಸರ್ಪಗಳಿಗೆ ಅಧಿಪರಾದ ಶ್ರೀ ಶೇಷದೇವರಿಂದ ಅಧಿಷ್ಠಿತ ಪರ್ವತಕ್ಕೆ ಒಡೆದ = ಶೇಷಗಿರಿ ಧೊರೆ ಶ್ರೀ ಶ್ರೀನಿವಾಸ!!

” ಶ್ರೀ ಅನಂತ ಚತುರ್ದಶೀ ವ್ರತಮ್ ”

ಮೂಲ :

ಯತ್ತು ಭವಿಷ್ಯೋತ್ತರ ಪುರಾಣೇ ಭಾದ್ರಪದ ಶುಕ್ಲ ಚತುರ್ದಶ್ಯಾ೦ ” ಮಾಸೀ ಭಾದ್ರಪದೇ ಶುಭೇ ” ಇತ್ಯಾದೀನಾ ಅನಂತವ್ರತಂ ವಿಹಿತಂ ತತ್ರ ವಿಶೇಷಾಭಾವಾತ್ – ” ದೈವೇ ಹ್ಯೌದಾಯಕೀ ಗ್ರಾಹ್ಯಾ ” ಇತ್ಯಾದಿ ಸಾಮಾನ್ಯ ವಚನೈ: ।।

ಮಂಗಳಕರವಾದ ಭಾದ್ರಪದ ಮಾಸದಲ್ಲಿ ಇತ್ಯಾದಿ ವಚನಗಳಿಂದ ಭವಿಷ್ಯೋತ್ತರ ಪುರಾಣದಲ್ಲಿ ಭಾದ್ರಪದ ಶುಕ್ಲ ಚತುರ್ದಶೀ ದಿನ ಶ್ರೀ ಅನಂತ ವ್ರತವನ್ನು ವಿಧಿಸಿದ್ದಾರೆ.

ಈ ಶ್ರೀ ಅನಂತ ವ್ರತದಲ್ಲಿ ವಿಶೇಷವೇನೂ ಇಲ್ಲ.

ದೇವ ಸಂಬಂಧಿಯಾದ ಕಾರ್ಯದಲ್ಲಿ ಉದಯ ವ್ಯಾಪಿನಿಯಾದ ತಿಥಿಯನ್ನು ಸ್ವೀಕರಿಸಬೇಕು ಎಂಬಿತ್ಯಾದಿ ಸಾಮಾನ್ಯ ವಚನಗಳಿಂದ ಈ ವ್ರತಾಚರಣೆಯ ಕಾಲವು ತಿಳಿದು ಬರುತ್ತದೆ.

ಸೋದಯತ್ರಿ ಮುಹೂರ್ತಾ ವಾ ದ್ವಿಮುಹೂರ್ತಾ ಚತುರ್ದಶೀ ।

ತತ್ರಾನಂತವ್ರತಂ ಕುರ್ಯಾತ್ ಸರ್ವ ಸಂಪತ್ಕರಂ ನೃಪ ।।

ವಿದ್ಯಾಧಿಕೇ ಭಾದ್ರ ಶುದ್ಧ ಭೂತೇನಂತವ್ರತಂ ಚರೇತ್ ।

ದ್ವಿ ತ್ರಿ ಮುಹೂರ್ತವತ್ಯೇವ ಭೂತಾನ್ಯನ್ಯಾನಿ ಚಾತ್ರ ಯತ್ ।।

ರಾಜನೇ! ಉದಯವನ್ನು ಆರಂಭಿಸಿ ಮೂರು ಮುಹೂರ್ತವಾಗಲೀ ಅಥವಾ ಎರಡು ಮುಹೂರ್ತವಾಗಲೀ ಚತುರ್ದಶೀ ಇರುವಾಗ ಸರ್ವ ಸಂಪತ್ಕರವಾದ ಶ್ರೀ ಅನಂತ ಚತುರ್ದಶೀ ವ್ರತವನ್ನು ಮಾಡಬೇಕು.

ಹುಣ್ಣಿಮೆಯ ವೇಧವು ಹೆಚ್ಚಾಗಿರುವಾಗ ಭಾದ್ರಪದ ಶುದ್ಧ ಚತುರ್ದಶೀ ದಿನದಲ್ಲಿ ಶ್ರೀ ಅನಂತ ಚತುರ್ದಶೀ ವ್ರತವನ್ನು ಆಚರಿಸಬೇಕು.

ಈ ಶ್ರೀ ಅನಂತ ಚತುರ್ದಶೀ ದಿನದಂದು ಎರಡೂ ಅಥವಾ ಮೂರು ಮುಹೂರ್ತಗಳ ಪರ್ಯಂತ ಚತುರ್ದಶೀ ಇರುವಾಗಲೇ ಎಲ್ಲಾ ಚತುರ್ದಶಿಯ ಸನ್ನಿಧಾನವೂ ಅಷ್ಟರಲ್ಲೇ ಅಂತರ್ಭೂತವಾಗಿರುತ್ತದೆ.

ಇತಿ ಭವಿಷ್ಯೋತ್ ಪದ್ಮಪುರಾಣ ಪುರಾಣಗತೈರ್ವಿಶೇಷವಚನೈಶ್ಚ

ಉದಯ ವ್ಯಾಪಿನೀ ಗ್ರಾಹ್ಯಾ।।

ಇವು ಭವಿಷತ್ ಪುರಾಣ, ಪದ್ಮಪುರಾಣದ ವಿಶೇಷ ವಚನಗಳು.

ಇವುಗಳಿಂದ ಉದಯ ವ್ಯಾಪಿನಿಯಾದ ” ಚತುರ್ದಶಿಯನ್ನೇ ಅನುಷ್ಠಾನಕ್ಕಾಗಿ ಸ್ವೀಕರಿಸ ” ಬೇಕೆಂದು ಸಿದ್ಧವಾಗುತ್ತದೆ.

” ವಿಧಾನ ”

ಶ್ರೀ ಅನಂತ ವ್ರತಕ್ಕೆ…

ತುಳಸೀ ಮತ್ತು ಫಲ ಪುಷ್ಪಗಳು, ಅಲಂಕೃತ ಮಂಟಪ, ನಿರ್ಮಾಲ್ಯ ವಿಸರ್ಜನೆ ಅಭಿಷೇಕಾದಿಗಳನ್ನು ಆಚರಿಸಿ, ಗಂಧ – ಕುಂಕುಮ – ಪತ್ರ – ಧೂಪ ದೀಪಗಳೊಂದಿಗೆ ಯಮುನಾದೇವಿಯನ್ನರ್ಚಿಸಿ, ಕಲಶ ಪೂರಣ ಮಾಡಿ ವಾದ್ಯ – ಮಂತ್ರ ಘೋಷಗಳಿಂದ ಆ ಕಲಶವನ್ನು ತಂದು ಮಂಟಪ ಮಧ್ಯದಲ್ಲಿ ಪದ್ಮ ಮಂಡಲದಲ್ಲಿಟ್ಟು, ಸಪ್ತ ಫಣಾಲಾಂಕೃತ ಧರ್ಭಮಯ ಶೇಷಾಕೃತಿಯನ್ನು ಆ ಕಲಶದ ಮೇಲಿಟ್ಟು, ಅದರ ಮೇಲೆ ಶಾಲಗ್ರಾಮವನ್ನಿಟ್ಟು ಆಸನ ಪ್ರಾಣಾಯಾಮಗಳನ್ನು ಮಾಡಿ ಉದ್ಧೇಶವಿದ್ದವರು ತತ್ತ್ವಾನ್ಯಾಸ, ಮಾತೃಕಾನ್ಯಾಸಗಳನ್ನು ಮಾಡಿ ಸಂಕಲ್ಪಿಸಿ ಶ್ರೀ ಅನಂತ ನಾಮಕ ಶೇಷನ ಮೇಲೆ ಶಯನ ಮಾಡಿದ ಶ್ರೀ ಕೌಂಡಿಣ್ಯ ಮುನಿ ವರದನಾದ, ಮುಖ್ಯವಾಗಿ ಶ್ರೀ ಅನಂತ ನಾಮಕನಾದ ಶ್ರೀ ಪದ್ಮನಾಭ ಮೂರ್ತಿಯನ್ನು ಧ್ಯಾನಿಸುತ್ತಾ ಪೂಜಿಸಬೇಕು.

ಈ ಕೆಳಗಿನ ಶ್ಲೋಕಗಳನ್ನು ಹೇಳುತ್ತಾ ದೇವರ ಹತ್ತಿರ ಇರಿಸಿರುವ ಶ್ರೀ ಅನಂತ ಪದ್ಮನಾಭನ ದಾರವನ್ನು ತೆಗೆದುಕೊಂಡು ಒತ್ತಿಕೊಂಡು ನಮಸ್ಕರಿಸುತ್ತಾ…….

ಅನಂತ ಕಾಮದಂ ದೇವ೦ ಸರ್ವ ಪಾಪ ಪ್ರಣಾಶನ ।

ಅನಂತ ದೋರ ರೂಪೇಣ ಪುತ್ರ ಪೌತ್ರ ಪ್ರವರ್ಧಯ ।।

ಅನಂತ ಸಂಸಾರ ಮಹಾ ಸಮುದ್ರೇ ಮಗ್ನ೦-

ಸಮುಭ್ಯುದ್ಧರ ವಾಸುದೇವ ।

ಅನಂತ ರೂಪಿನ್ ವಿನಿಯೋಜಯಸ್ವ-

ಹ್ಯನಂತಸೂತ್ರಾಯ ನಮೋ ನಮಸ್ತೇ ।।

ಈ ಕೆಳಗಿನ ಶ್ಲೋಕವನ್ನು ಹೇಳುತ್ತಾ ಶ್ರೀ ಅನಂತನ ದಾರವನ್ನು ಬಲ ತೋಳಿಗೆ ಬಲ ತೋಳಿಗೆ ಕಟ್ಟಿ ಕೊಳ್ಳುತ್ತಾ…

ಸಂಸಾರ ಗಹ್ವರ ಗುಹಾಸು ಸುಖಂ ವಿಹರ್ತೃ೦ ವಾಂಛತಿ ।

ಯೇ ಕುರು ಕುಲೋದ್ಭವ ಶುದ್ಧ ಸತ್ತ್ವ: ।

ಸಂಪೂಜ್ಯ ಚಕ್ರೇ ಭುವನೇಶಂ ಅನಂತದೇವಂ ।

ಬದ್ಣಂತಿ ದಕ್ಷಿಣ ಕರೇ ವರ ದೋರಕಂ ತೇ ।।

ಎಂದು ಶ್ಲೋಕ ಹೇಳುತ್ತಾ ದಾರವನ್ನು ಕಟ್ಟಿಕೊಳ್ಳಬೇಕು.

ಹಳೇ ದಾರವನ್ನು ಬಿಚ್ಚುವಾಗ….

ನಮಸ್ತೇ ಸರ್ವದೇವಾಯ ವಿಶ್ವರೂಪ ಧರಾಯ ಚ ।

ಸೂತ್ರ ಗ್ರಂಥಿಷು ಸಂಸ್ಥಾಯ ಅನಂತಾಯ ನಮೋ ನಮಃ ।।

” ಉಪಾಯನ ದಾನ ”

ತಟ್ಟೆಯಲ್ಲಿ ಅಕ್ಕಿ, ಎರಡು ತೆಂಗಿನಕಾಯಿಗಳು, ಬೆಲ್ಲದ ಚೂರು, ಹಣ್ಣುಗಳನ್ನಿಟ್ಟು, ಅಡಿಕೆ, ವಿಳ್ಳೇದೆಲೆ ಮೇಲೆ ಯಥಾಶಕ್ತಿ ದಕ್ಷಿಣೆಯನ್ನಿಟ್ಟು ಒಂದು ಸಣ್ಣ ತಟ್ಟೆಯನ್ನು ಮುಚ್ಚುವುದು.

ಪುರೋಹಿತರ ಮುಂದೆ ಮಂಡಲ ಮಾಡಿ ಅದರ ಮೇಲೆ ಉಪಾದಾಯನ ದಾನದ ತಟ್ಟೆಯನ್ನಿಟ್ಟು ಕುಳಿತುಕೊಂಡು ಹೀಗೆ ಹೇಳಬೇಕು.

ಆಚಮ್ಯ – ಪ್ರಾಣಾಯಾಮ – ಸಂಕಲ್ಪ ಮಾಡುತ್ತಾ…….

ಮಯಾ ಸಮ್ಯಗಾಚರಿತ ಶ್ರೀಮದನಂತ

ಪದ್ಮನಾಭ ವ್ರತಂ ಸಾದ್ಗುಣ್ಯಾರ್ಥ

ಬ್ರಾಹ್ಮಣಾಯ ಉಪಾಯನ ದಾನಂ ಕರಿಷ್ಯೇ ।

ತದರ್ಥಂ ಬ್ರಾಹ್ಮಣ ಪೂಜಾ೦ ಕರಿಷ್ಯೇ ।।

ಶ್ರೀ ಅನಂತ ಪದ್ಮನಾಭ ಸ್ವರೂಪಸ್ಯ

ಬ್ರಾಹ್ಮಣಸ್ಯ ಇದಮಿದಮಾಸನಮ್ ।

ಮಂತ್ರಾಕ್ಷತೆಯನ್ನು ಬ್ರಾಹ್ಮಣನ ಪೀಠದ ಕೆಳಗೆ ಹಾಕುವುದು.

ಬ್ರಾಹ್ಮಣ೦ ಆವಾಹಯಿಷ್ಯೇ ।

ಇಮೇ ಗಂಧಾ: ಇಮಾನಿ ಪುಷ್ಪಾಣಿ ।

ಎಂದು ಹೇಳುತ್ತಾ ಪುರೋಹಿತರಿಗೆ ಗಂಧ ಮತ್ತು ಪುಷ್ಪವನ್ನು ಕೊಡುವುದು.

ಗಂಧ ಪುಷ್ಪ ಧೂಪ ದೀಪ ಸಕಲಾರಾಧನೈ: ಅರ್ಚಿತಂ – ಎಂದು ಹೇಳಿ ನೀರು ಮಂತ್ರಾಕ್ಷತೆ ಬಿಡುವುದು. ಮುಚ್ಚಿರುವ ತಟ್ಟೆಯ ಮೇಲೆ ನೀರು ಪ್ರೋಕ್ಷಿಸುತ್ತಾ…

ವಿಷ್ಣೋ ಉಪಾಯನದಾನಂ ರಕ್ಷಸ್ವ – ಎಂದು ಹೇಳಿ ಎರಡೂ ಕಾಯಿಗಳ ಮೇಲೆ ಪತ್ನಿಯ ಕೈಯಿಂದ ನೀರು ಹಾಕಿಸಿ ಆ ತಟ್ಟೆಯನ್ನು ಅತ್ತ ಇಡುವುದು!!

ಇದಂ ಉಪಾಯನ ದಾನಂ ।

ಶ್ರೀಮದನಂತಪದ್ಮನಾಭ ಅನುಗ್ರಹಂ

ಕಾಮಯಮಾನಾ ತುಭ್ಯ೦ ಅಹಂ

ಸಂಪ್ರದದೇ ನಮಮ ನಮಮ । ಪ್ರತಿಗೃಹ್ಣಾತು ಭವಾನ್ ।

ಎಂದು ಹೇಳಿ ಪುರೋಹಿತರಿಗೆ ಕೊಟ್ಟು ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆಯುವುದು!!

ಪೂಜಾನಂತರ ಪೂಜಕನು ಸಂಕಲ್ಪ ಪುರಸ್ಸರವಾಗಿ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಯಥಾ ಶಕ್ತಿ ತಾಂಬೂಲ ದಕ್ಷಿಣೆ ಕೊಟ್ಟು ಅವರಿಂದ ಮಂತ್ರಾಕ್ಷತೆ ಸ್ವಸ್ತಿವಾಚನ ಮಾಡಿಸಿ ಬ್ರಾಹ್ಮಣರ ಆಜ್ಞೆಯಿಂದ ಶ್ರೀಮದನಂತ ಪದ್ಮನಾಭ ಸ್ವಾಮಿಯ ಪ್ರಸಾದವನ್ನು ಬಂಧು ಮಿತ್ರರೊಡನೆ ಸ್ವೀಕರಿಸಿ ತಾನೂ ಶುದ್ಧನಾಗಿಯೇ ಇದ್ದು ಅಪರಾಹ್ಣದಲ್ಲಿ ಶ್ರೀಮದನಂತ ಪದ್ಮನಾಭ ವ್ರತ ಕಥಾ ಶ್ರವಣ ಮಾಡಿ, ಯಥಾವಿಧಿ ರಾತ್ರಿ ಪೂಜೆ ನಾಮ ಸಂಕೀರ್ತನೆಗಳನ್ನು ಆಚರಿಸಿ ಮರುದಿನ ಫಲ ಸಮರ್ಪಣ ಪೂರ್ವಕ ಪೂಜೆ ಮಾಡಿ ಕಲಶ ವಿಸರ್ಜನೆ ಮಾಡಬೇಕು.
ಸಂಗ್ರಹ-ಶ್ರೀ ಲಕ್ಷ್ಮಣ್ ರಾಜ್

Leave a Reply

Your email address will not be published. Required fields are marked *

error: Content is protected !!